KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಹೈಕೋರ್ಟ್ ನಿಂದ SIT ತನಿಖೆಗೆ ವಹಿಸಿ ಆದೇಶ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಹಗರಣದ ತನಿಖೆಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ನಿರ್ದೇಶನ ನೀಡಿದೆ. ಇಡೀ ಪ್ರಕರಣದ ನಿಷ್ಪಕ್ಷಪಾತ ತನಿಖೆಗಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ನೂತನ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.

ಅನುಭವಿ ಐಪಿಎಸ್ ಅಧಿಕಾರಿಗಳ ವಿಶೇಷ ತಂಡ

ಪ್ರಕರಣದ ತನಿಖೆಯ ಗಂಭೀರತೆಯನ್ನು ಪರಿಗಣಿಸಿ ರೂಪಿಸಲಾಗಿರುವ ಈ ಉನ್ನತ ಮಟ್ಟದ ಎಸ್‌ಐಟಿ ತಂಡದಲ್ಲಿ ಅಲೋಕ್ ಕುಮಾರ್ ಅವರಿಗೆ ಸಾಥ್ ನೀಡಲು ಹಿರಿಯ ಹಾಗೂ ಅನುಭವಿ ಐಪಿಎಸ್ ಅಧಿಕಾರಿಗಳಾದ ದಿವ್ಯಾ ಗೋಪಿನಾಥ್, ಅನೂಪ್ ಶೆಟ್ಟಿ, ಕುಶಾಲ್ ಚೌಕ್ಸೆ ಮತ್ತು ಕ್ಷಮಾ ಮಿಶ್ರಾ ಅವರನ್ನು ಒಳಗೊಂಡ ತಂಡವನ್ನು ರಚಿಸಲಾಗಿದೆ.

ತನಿಖೆಗೆ ಹೈಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:

  • ಕಾಲಮಿತಿ ಹಾಗೂ ಪ್ರಗತಿ ವರದಿ: ಎಸ್‌ಐಟಿಯು ಮುಂದಿನ 100 ದಿನಗಳ ಒಳಗಾಗಿ ತನಿಖೆಯನ್ನು ಪೂರ್ಣಗೊಳಿಸಿ ಸುದೀರ್ಘ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಅಲ್ಲದೆ, ಪ್ರತಿ 30 ದಿನಗಳಿಗೊಮ್ಮೆ ತನಿಖೆಯ ಪ್ರಗತಿ ವರದಿಯನ್ನು (Status Report) ಪೀಠಕ್ಕೆ ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
  • ದಾಖಲೆಗಳ ಹಸ್ತಾಂತರ: ಈ ಹಿಂದೆ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಐಡಿ (CID) ಹಾಗೂ ಇತರ ಪೋಲಿಸ್ ಅಧಿಕಾರಿಗಳು ತಕ್ಷಣವೇ ತನಿಖೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳನ್ನು ಎಸ್‌ಐಟಿ ವಶಕ್ಕೆ ನೀಡಬೇಕು. ಇದಕ್ಕೆ ಒಂದು ವಾರದ ಗಡುವು ನೀಡಲಾಗಿದೆ.
  • ಪೊಲೀಸ್ ಠಾಣೆ ಸ್ಥಾನಮಾನ ಹಾಗೂ ಇಡಿ ಸಹಕಾರ: ನೂತನ ಎಸ್‌ಐಟಿಗೆ ತನಿಖಾ ಕಾರ್ಯ ಸುಲಭವಾಗುವಂತೆ ಅಧಿಕೃತ ‘ಪೊಲೀಸ್ ಠಾಣೆ’ ಸ್ಥಾನಮಾನ ಕಲ್ಪಿಸಿ ರಾಜ್ಯ ಸರ್ಕಾರ ಶೀಘ್ರವೇ ಅಧಿಸೂಚನೆ ಹೊರಡಿಸಬೇಕು. ಜೊತೆಗೆ, ಹಣಕಾಸು ಅಕ್ರಮದ ಕೋನದಲ್ಲೂ ತನಿಖೆ ನಡೆಯುತ್ತಿರುವುದರಿಂದ ಜಾರಿ ನಿರ್ದೇಶನಾಲಯಕ್ಕೂ (ED) ಅಗತ್ಯವಿರುವ ಎಲ್ಲಾ ಮಾಹಿತಿ ಮತ್ತು ಸಹಕಾರವನ್ನು ನೀಡಲು ಎಸ್‌ಐಟಿಗೆ ಆದೇಶಿಸಲಾಗಿದೆ.

ಯಾವುದೇ ಕಾರಣಕ್ಕೂ ತನಿಖಾ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು ಹಾಗೂ ಮಧ್ಯಪ್ರವೇಶಿಸಬಾರದು ಎಂದು ಹೈಕೋರ್ಟ್ ಅತ್ಯಂತ ಖಡಕ್ ಎಚ್ಚರಿಕೆ ನೀಡಿದ್ದು, ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ನಿರ್ದೇಶಿಸಿದೆ

Share it :

Leave a Reply

Your email address will not be published. Required fields are marked *