ಬೆಂಗಳೂರು: ಡಿಕೆ ಶಿವಕುಮಾರ್ ಸಿಎಂ ಆಗಿರೋದು ಕೆಲವರಿಗೆ ಇಷ್ಟವಿಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಆಗಿರೋದನ್ನು ತಡೆಯಲು ಆಗದೇ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ದೇವೇಗೌಡ, ಕುಮಾರಸ್ವಾಮಿ, ಅಶೋಕ್ ಆರೋಪ ಮಾಡುತ್ತಿದ್ದಾರೆ
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿಗೆ ಮಾತುಕತೆಗೆ ಕರೆದರೆ ವಿಧಾನಸೌಧಕ್ಕೆ ಬರಲ್ಲ ಅಂತಾರೆ. ಪಾಪ ಕುಮಾರಸ್ವಾಮಿ, ಅಶೋಕ್‌ಗೆ ನೋವಾಗಿದೆ ಎಂದು ತಿಳಿಸಿದರು.ಕುಮಾರಸ್ವಾಮಿ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಅಂತಾರೆ. ಕುಸ್ತಿ ಆಡೋಕೆ ಹೋಗಬೇಕಾ? ರೈತರ ಸಮಸ್ಯೆ ಇತ್ಯರ್ಥ ಮಾಡೋಕೆ ವಿಧಾನಸೌಧ ಇದೆ. ಕೆಂಗಲ್ ಹನುಮಂತಯ್ಯ ಕಟ್ಟಿರೋದು. ಹರಿಯಾಣ, ಪಂಜಾಬ್‌ನಲ್ಲಿ ಅನೇಕ ದಿನ ರೈತರು ಪ್ರತಿಭಟನೆ ಮಾಡಿದ್ರು. ಯಾಕೆ ದೇವೇಗೌಡ ಹೋಗಿಲ್ಲ? ಎಂದು ಪ್ರಶ್ನೆ ಮಾಡಿದ್ದಾರೆ.
ಕುಮಾರಸ್ವಾಮಿ, ಅಶೋಕ್‌ಗೆ ಡಿಕೆ ಶಿವಕುಮಾರ್ ಸಿಎಂ ಆಗಿರೋದು ಇಷ್ಟ ಇಲ್ಲ. ಅದಕ್ಕೆ ಮೊದಲ ದಿನದಿಂದ ಡಿಕೆ ಶಿವಕುಮಾರ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಹೋರಾಟದಿಂದ ಡಿಕೆಶಿ ಸಿಎಂ ಆಗಿದ್ದಾರೆ. ಅಶೋಕ್ ಸಿಎಂ ಮೇಲೆ 150 ಕೋಟಿ ಆರೋಪ ಮಾಡುತ್ತಾರೆ. ಅಶೋಕ್ ಬಾಯಿಗೆ ಬೀಗ ಹಾಕದೇ ಹೋದ್ರೆ ಒಳ್ಳೆಯ ಹೆಸರು ಬರಲ್ಲ. ಬಾಯಿಗೆ ಬೀಗ ಹಾಕಿಕೊಳ್ಳಿ. ಯಡಿಯೂರಪ್ಪ ಬಗ್ಗೆ ಯತ್ನಾಳ್ ಮಾತಾಡಿದ್ರು. ದುಡ್ಡು ಕೊಟ್ಟು ಮಂತ್ರಿ ಆಗೋದು ಬಿಜೆಪಿ ಅವರು ನಾವಲ್ಲ ಎಂದು ಲೇವಡಿ ಮಾಡಿದ್ದಾರೆ.
ದೇವೇಗೌಡರು ನಿನ್ನೆ ಮಾತಾಡಿದ್ದಾರೆ. ದೇವೇಗೌಡರ ಬಗ್ಗೆ ನಮಗೆ ಅಪಾರ ಗೌರವ ಇದೆ. ಸತ್ಯಾಗ್ರಹ ಮಾಡ್ತೀನಿ ಅಂತಾರೆ.ನೀಟ್ ಲೋಪ ಆದಾಗ ಮಕ್ಕಳು ಆತ್ಮಹತ್ಯೆ ಮಾಡಿಕೊಂಡರು ದೇವೇಗೌಡ ಮಾತೇ ಆಡಲಿಲ್ಲ. ಇವತ್ತು ಡಿಕೆ ಶಿವಕುಮಾರ್ ವಿರುದ್ದ ಹೋರಾಟ ಮಾಡ್ತಾರಂತೆ. ದೇವನಹಳ್ಳಿಯಲ್ಲಿ ರೈತರು ಪ್ರತಿಭಟನೆ ಮಾಡಿದಾಗ ದೇವೇಗೌಡರು ಅಲ್ಲಿಗೆ ಹೋಗಿರಲಿಲ್ಲ ಎಂದರು.
ಡಿಕೆಶಿ ಸಿಎಂ ಆದ ಮೇಲೆ ಅನೇಕ ಅಭಿವೃದ್ಧಿ ಕೆಲಸ ಆಗುತ್ತಿದ್ದು, ಉತ್ತಮ ಕೆಲಸ ಮಾಡಲು ಸಿಎಂ ಮೀಟಿಂಗ್ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಿದ್ದಾರೆ. ಅಸೂಯೆಯಿಂದ ಹೀಗೆ ಮಾತಾಡಬಾರದು ಎಂದು ಟಾಂಗ್ ಕೊಟ್ಟಿದ್ದಾರೆ.





