ರಾಜ್ಯದಲ್ಲಿ ಮುಂಗಾರು ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ. ಮುಂದಿನ ಒಂದು ವಾರ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆ ಯಾಗುವ ಸಾಧ್ಯತೆ ಇದ್ದು,ಕೆಲವು ಕಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಗಂಟೆಗೆ 30 ರಿಂದ 50 ಕಿ.ಮೀ ವೇಗದ ಬಲವಾದ ಗಾಳಿಯೊಂದಿಗೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೂನ್ ಎರಡನೇ ವಾರ ಕರ್ನಾಟಕದಲ್ಲಿ ಮುಂಗಾರು ಮಳೆ ಆರಂಭವಾಯಿತು. ಜುಲೈನಲ್ಲಿ ಮಳೆಯ ಆರ್ಭಟ ಹೆಚ್ಚಾಗಿತ್ತು. ಅದರಲ್ಲೂ ಜುಲೈ ಕೊನೆಯ ವಾರದ ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.. ಆಗಸ್ಟ್ ಮೊದಲವಾರದ ಒಂದಿಷ್ಟು ಮಳೆ ಬಿತ್ತಾದರೂ ಆ ಬಳಿಕ ಅಬ್ಬರ ಕಡಿಮೆಯಾಗಿದೆ.
ರಾಜ್ಯದಲ್ಲಿ ಮುಂಗಾರು ಅಬ್ಬರ ಕೊಂಚ ಕಡಿಮೆಯಾಗಿದ್ದು, ಮಳೆಯ ಪ್ರಮಾಣದಲ್ಲೂ ಇಳಿಕೆಯಾಗಿದೆ. ಮುಂದಿನ ಒಂದು ವಾರ ರಾಜ್ಯದ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಬಹುತೇಕ ಕಡೆ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ.
ಇನ್ನು ಮಂಡ್ಯದ ಕಬಿನಿ ಜಲಾಶಯದ ಬಳಿಕ ಇದೀಗ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ವಿಚಾರವೂ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ಈ ನಡುವೆ ಜಲಾಶಯಕ್ಕೆ ಕೇವಲ 1,961 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಆದರೆ, ಡ್ಯಾಂನಿಂದ ನದಿಗೆ 4,917 ಕ್ಯೂಸೆಕ್‌ಗೂ ಅಧಿಕ ನೀರು ಹೊರಬಿಡಲಾಗುತ್ತಿದೆ.
ಒಳಹರಿವಿಗಿಂತ ಹೊರಹರಿವು ಹೆಚ್ಚಾಗಿರುವುದೇ ಈಗ ರೈತರ ಆತಂಕಕ್ಕೆ ಕಾರಣವಾಗಿದೆ.ಕಳೆದ ಆಗಸ್ಟ್ 15ರಿಂದಲೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ತಮಿಳುನಾಡಿಗೆ ನೀರು ಹರಿಸುತ್ತಿದ್ದಾರೆ ಎಂಬ ಅನುಮಾನ ರೈತ ಸಂಘಟನೆಗಳಲ್ಲಿ ಮೂಡಿದೆ. ಜಲಾಶಯಕ್ಕೆ ಬರುತ್ತಿರುವ ನೀರು ಕಡಿಮೆಯಾಗಿರುವ ಸಮಯದಲ್ಲೇ ಇಷ್ಟೊಂದು ಪ್ರಮಾಣದ ನೀರನ್ನು ನದಿಗೆ ಬಿಡುತ್ತಿರುವುದರ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಈ ಹಿಂದೆ ಕುಡಿಯುವ ನೀರು ಹಾಗೂ ನಾಲೆಗಳಿಗೆ ಸುಮಾರು 2,000 ದಿಂದ 2,500 ಕ್ಯೂಸೆಕ್ ನೀರು ಬಿಡಲಾಗುತ್ತಿತ್ತು. ಆದರೆ ಇದೀಗ ಏಕಾಏಕಿ ಹೊರಹರಿವಿನ ಪ್ರಮಾಣ ಹೆಚ್ಚಿಸಿರುವುದು ಯಾಕೆ ಎಂಬ ಪ್ರಶ್ನೆ ರೈತರದ್ದು.
KRSನಿಂದ ತಮಿಳುನಾಡಿಗೆ ಕದ್ದುಮುಚ್ಚಿ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.





