ನವದೆಹಲಿ: ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಆಫ್ಲೈನ್ ಮೂಲಕ ಟಿಕೆಟ್ ಖರೀದಿಸುವ ಕೋಟ್ಯಂತರ ಸಾಮಾನ್ಯ ಪ್ರಯಾಣಿಕರ ಹಿತದೃಷ್ಟಿಯಿಂದ ಸುಪ್ರೀಂ ಕೋರ್ಟ್ ಕ್ರಾಂತಿಕಾರಿ ಆದೇಶ ಹೊರಡಿಸಿದೆ. ಇಂಟರ್ನೆಟ್ ಮೂಲಕ ಟಿಕೆಟ್ ಕಾಯ್ದಿರಿಸುವವರಿಗೆ ನೀಡಲಾಗುವ ವಿಮಾ ಸೌಲಭ್ಯವನ್ನೇ ಕೌಂಟರ್ನಲ್ಲಿ ಟಿಕೆಟ್ ಪಡೆಯುವ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೂ ಯಾವುದೇ ತಾರತಮ್ಯವಿಲ್ಲದೆ ವಿಸ್ತರಿಸಬೇಕು ಎಂದು ಭಾರತೀಯ ರೈಲ್ವೆಗೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಈ ವ್ಯವಸ್ಥೆಯನ್ನು ಅಕ್ಟೋಬರ್ 27 ರಿಂದಲೇ ಜಾರಿಗೆ ತರುವಂತೆ ಎರಡು ವಾರಗಳ ಕಟ್ಟುನಿಟ್ಟಿನ ಗಡುವು ವಿಧಿಸಲಾಗಿದೆ.
ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನೌಲ್ಲಾ ಹಾಗೂ ಆರ್. ಮಹದೇವನ್ ಅವರನ್ನೊಳಗೊಂಡ ಪೀಠವು, ರೈಲು ಪ್ರಯಾಣಿಕರ ಸುರಕ್ಷತೆ ಮತ್ತು ಅಹಿತಕರ ಘಟನೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ಈ ತೀರ್ಪು ಪ್ರಕಟಿಸಿದೆ.
ಆನ್ಲೈನ್-ಆಫ್ಲೈನ್ ತಾರತಮ್ಯ ಪ್ರಶ್ನಿಸಿದ್ದ ನ್ಯಾಯಪೀಠ
ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ, ಕೇವಲ ಆನ್ಲೈನ್ ಮೂಲಕ ಅತ್ಯಲ್ಪ ಪ್ರೀಮಿಯಂ ಪಾವತಿಸಿ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಐಆರ್ಸಿಟಿಸಿಯಿಂದ ಪ್ರಯಾಣ ವಿಮೆ ಸೌಲಭ್ಯ ಲಭ್ಯವಿತ್ತು. ಆದರೆ ಆರ್ಥಿಕವಾಗಿ ಹಿಂದುಳಿದ, ಸ್ಮಾರ್ಟ್ಫೋನ್ ಇಲ್ಲದ ಹಾಗೂ ನಿಲ್ದಾಣಗಳ ಕೌಂಟರ್ಗಳಲ್ಲೇ ಟಿಕೆಟ್ ಖರೀದಿಸುವ ಸಮಾಜದ ಕೆಳಸ್ತರದ ಜನರಿಗೆ ಈ ರಕ್ಷಣೆ ಸಿಗುತ್ತಿರಲಿಲ್ಲ. ಈ ಅಸಮಾನತೆಯನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಹಿರಿಯ ವಕೀಲ ಶಿಖಿಲ್ ಸೂರಿ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಈ ಬಗ್ಗೆ ವ್ಯವಸ್ಥೆ ರೂಪಿಸಲು ಈ ಹಿಂದೆಯೇ ರೈಲ್ವೆಗೆ ಸಮಯ ನೀಡಿದ್ದರೂ ಯಾವುದೇ ಪ್ರಗತಿ ಕಾಣದ ಹಿನ್ನೆಲೆಯಲ್ಲಿ ಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದೆ.
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶದಲ್ಲೇನಿದೆ?
“ರೈಲು ಪ್ರಯಾಣ ಕೈಗೊಳ್ಳುವ ಸಮಾಜದ ಕೆಳಸ್ತರದ ಬಹುಪಾಲು ಜನರು ನಿಲ್ದಾಣದ ಕೌಂಟರ್ಗಳಲ್ಲೇ ಟಿಕೆಟ್ ಪಡೆಯುತ್ತಾರೆ. ಅವರಿಗೂ ವಿಮೆ ವಿಸ್ತರಿಸಲು ಸೂಕ್ತ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಸಾಕಷ್ಟು ಸಮಯ ನೀಡಲಾಗಿತ್ತು. ಆದಾಗ್ಯೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಎರಡು ವಾರಗಳ ಒಳಗಾಗಿ, ಅಂದರೆ ಅಕ್ಟೋಬರ್ 27 ರಿಂದ ಅನ್ವಯವಾಗುವಂತೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳ ಕೌಂಟರ್ಗಳಲ್ಲಿ ಮಾರಾಟವಾಗುವ ಟಿಕೆಟ್ಗಳಿಗೂ ಆನ್ಲೈನ್ ಟಿಕೆಟ್ಗಳ ಮಾದರಿಯಲ್ಲೇ ಕಡ್ಡಾಯವಾಗಿ ವಿಮಾ ರಕ್ಷಣೆ ಅನ್ವಯಿಸಬೇಕು. ಈ ಆದೇಶ ಪಾಲನೆಯಾಗದಿದ್ದರೆ ಅದಕ್ಕೆ ರೈಲ್ವೆ ಮಂಡಳಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಕಾಗದದ ಮೇಲಷ್ಟೇ ಭರವಸೆ: ಅಧಿಕಾರಿಗಳ ವಿರುದ್ಧ ಸುಪ್ರೀಂ ಗರಂ
ಸಾಮಾನ್ಯ ನಾಗರಿಕರ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಚಾರದಲ್ಲಿ ರೈಲ್ವೆ ಸಚಿವಾಲಯದ ಅಧಿಕಾರಿಗಳು ತೋರುತ್ತಿರುವ ನಿರಾಸಕ್ತಿಗೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರೈಲ್ವೆ ಇಲಾಖೆಯ ಭರವಸೆಗಳು ಕೇವಲ ದಾಖಲೆಗಳಲ್ಲಿ ಉಳಿದಿವೆಯೇ ಹೊರತು ನೆಲಮಟ್ಟದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ ಎಂದು ಕಿಡಿಕಾರಿದೆ. ಸುರಕ್ಷತಾ ಯೋಜನೆಗಳಿಗಾಗಿ ಕಾಯ್ದಿರಿಸಿದ ಬಜೆಟ್ ಅನುದಾನವನ್ನೂ ಸಮರ್ಪಕವಾಗಿ ಬಳಸಿಕೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ರೈಲ್ವೆ ಮಂಡಳಿಯ (Railway Board) ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ನವೆಂಬರ್ 16 ರಂದು ಮಧ್ಯಾಹ್ನ 3:00 ಗಂಟೆಗೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ




