ಬೆಂಗಳೂರಿನಿಂದ 3,700ಕ್ಕೂ ಹೆಚ್ಚು ಸಾಕುಪ್ರಾಣಿಗಳ ಗಗನಯಾನ: ಅಕಾಸಾ ಹೊಸ ದಾಖಲೆ

ಬೆಂಗಳೂರು: ತಮ್ಮ ಮುದ್ದಿನ ನಾಯಿ-ಬೆಕ್ಕುಗಳನ್ನು ಜೊತೆಯಲ್ಲಿಯೇ ಕರೆದೊಯ್ಯುವ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ರಾಜಧಾನಿ ಬೆಂಗಳೂರು ದೇಶದಲ್ಲೇ ಅಗ್ರಗಣ್ಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಪ್ರಮುಖ ವಿಮಾನಯಾನ ಸಂಸ್ಥೆ ಅಕಾಸಾ ಏರ್ ಪರಿಚಯಿಸಿರುವ ‘ಪೆಟ್ಸ್ ಆನ್ ಅಕಾಸಾ’ ಯೋಜನೆಯಡಿ ಸಾಕುಪ್ರಾಣಿಗಳೊಂದಿಗೆ ಹಾರಾಟ ನಡೆಸುವ ಪ್ರವೃತ್ತಿ ನಗರದಲ್ಲಿ ದಾಖಲೆ ಮಟ್ಟದಲ್ಲಿ ವೃದ್ಧಿಸಿದೆ.

ಬೆಂಗಳೂರಿಗರಿಂದಲೇ ಮೂರನೇ ಒಂದು ಭಾಗದಷ್ಟು ಸಂಚಾರ

ಸಂಸ್ಥೆಯು ಈ ವಿನೂತನ ಸೇವೆಗೆ ಚಾಲನೆ ನೀಡಿದ ದಿನದಿಂದ ಇದುವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಒಂದರಿಂದಲೇ 3,700ಕ್ಕೂ ಹೆಚ್ಚಿನ ಸಾಕುಪ್ರಾಣಿಗಳು ವಿವಿಧ ನಗರಗಳಿಗೆ ಪ್ರಯಾಣಿಸಿವೆ. ಅಕಾಸಾ ಸಂಸ್ಥೆಯ ಒಟ್ಟಾರೆ ಹಾರಾಟ ಜಾಲದಲ್ಲಿ ನಡೆದ ಒಟ್ಟು ಪೆಟ್ ಯಾನಗಳಲ್ಲಿ ಶೇಕಡಾ 30ಕ್ಕೂ ಅಧಿಕ ಪಾಲು ರಾಜಧಾನಿಯದ್ದೇ ಆಗಿದೆ. 2024ರ ಹಣಕಾಸು ಸಾಲಿನಲ್ಲಿ 856 ಪ್ರಾಣಿಗಳು ಪ್ರಯಾಣಿಸಿದ್ದರೆ, 2026ರ ಸಾಲಿಗೆ ಈ ಪ್ರಮಾಣ 1,310ಕ್ಕೆ ತಲುಪಿ, ಶೇಕಡಾ 53ರಷ್ಟು ಭರ್ಜರಿ ಏರಿಕೆ ಕಂಡಿದೆ.

ಟಾಪ್ ಪೆಟ್ ಪೇರೆಂಟ್ಸ್ ಹಾಗೂ ಹೆಚ್ಚು ಜನಪ್ರಿಯ ಮಾರ್ಗಗಳು

ದೇಶದಲ್ಲೇ ಅತಿ ಹೆಚ್ಚು ಬಾರಿ ಸಾಕುಪ್ರಾಣಿಗಳೊಂದಿಗೆ ಗಗನಯಾನ ಕೈಗೊಂಡಿರುವ ಮೊದಲ ಹತ್ತು ನಿಯಮಿತ ಗ್ರಾಹಕರ ಪೈಕಿ ಐವರು ಬೆಂಗಳೂರಿನ ನಿವಾಸಿಗಳಾಗಿದ್ದಾರೆ. ನಗರದಿಂದ ರಾಷ್ಟ್ರ ರಾಜಧಾನಿ ದೆಹಲಿ, ಪಶ್ಚಿಮ ಬಂಗಾಳದ ಕೋಲ್ಕತ್ತಾ ಮತ್ತು ಈಶಾನ್ಯ ಭಾಗದ ಗುವಾಹಟಿ ಮಾರ್ಗಗಳಿಗೆ ಅತಿ ಹೆಚ್ಚು ಬೇಡಿಕೆ ಕಂಡುಬಂದಿದೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಬೆಂಗಳೂರಿನಿಂದ ಜರುಗಿದ ಒಟ್ಟು ಪೆಟ್ ಯಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇಕಡಾ 55ಕ್ಕೂ ಅಧಿಕ) ಪಾಲು ಈ ಮೂರು ಪ್ರಮುಖ ಮಾರ್ಗಗಳಲ್ಲೇ ದಾಖಲಾಗಿದೆ.

16 ನಗರಗಳಿಗೆ ವಿಸ್ತರಿಸಿದ ನೆಟ್‌ವರ್ಕ್

ಆರಂಭದ ದಿನಗಳಲ್ಲಿ ಕೇವಲ 10 ಸ್ಥಳಗಳಿಗೆ ಸೀಮಿತವಾಗಿದ್ದ ಬೆಂಗಳೂರಿನಿಂದ ಪೆಟ್ ಸಂಚಾರದ ವ್ಯಾಪ್ತಿ ಇದೀಗ 16 ಪ್ರಮುಖ ನಗರಗಳಿಗೆ ವಿಸ್ತರಿಸಿದೆ. ದೆಹಲಿ, ಕೋಲ್ಕತ್ತಾ, ಮುಂಬೈ, ಅಹಮದಾಬಾದ್ ಮತ್ತು ಗುವಾಹಟಿ ನಗರಗಳಷ್ಟೇ ಅಲ್ಲದೆ ಭುವನೇಶ್ವರ, ಪುಣೆ, ಲಖನೌ, ಕೊಚ್ಚಿ, ವಾರಾಣಸಿ, ದರ್ಬಂಗಾ ಹಾಗೂ ಕೋಯಿಕ್ಕೋಡ್ (ಕ್ಯಾಲಿಕಟ್) ನಗರಗಳಿಗೂ ಪ್ರಾಣಿಗಳನ್ನು ಕರೆದೊಯ್ಯುವ ಬೇಡಿಕೆ ಗಣನೀಯವಾಗಿ ಬೆಳೆದಿದೆ.

ದೇಶಾದ್ಯಂತ 13,500 ಪ್ರಾಣಿಗಳ ಸಂಚಾರ, ವಿಶೇಷ ಸೌಲಭ್ಯಗಳು

2022ರ ನವೆಂಬರ್ 1ರಂದು ಅಸ್ತಿತ್ವಕ್ಕೆ ಬಂದ ಈ ಸೇವೆಯು ಸದ್ಯ ದೇಶದ 28 ನಗರಗಳಲ್ಲಿ ಸಕ್ರಿಯವಾಗಿದ್ದು, ಸಂಸ್ಥೆಯು ಈವರೆಗೆ ಒಟ್ಟಾರೆಯಾಗಿ 13,500ಕ್ಕೂ ಅಧಿಕ ಮುದ್ದಿನ ಪ್ರಾಣಿಗಳನ್ನು ಗಮ್ಯಸ್ಥಾನಗಳಿಗೆ ತಲುಪಿಸಿದೆ. ಪ್ರಾಣಿಗಳ ತೂಕಕ್ಕೆ ತಕ್ಕಂತೆ ಕ್ಯಾಬಿನ್ ಅಥವಾ ಕಾರ್ಗೋ ವಿಭಾಗದಲ್ಲಿ ಸಾಗಣೆ ಮಾಡಲಾಗುತ್ತದೆ.

ಕ್ಯಾಬಿನ್ ಪ್ರಯಾಣಕ್ಕಾಗಿ ಕ್ಯಾರಿಯರ್ ಬ್ಯಾಗ್ ಸಮೇತ 10 ಕೆಜಿ ಗರಿಷ್ಠ ತೂಕದ ಮಿತಿಯಿದ್ದು, ಪ್ರತಿ ವಿಮಾನದಲ್ಲಿ ಮೂರು ಸಾಕುಪ್ರಾಣಿಗಳಿಗೆ ಆಸನ ಕಾಯ್ದಿರಿಸಬಹುದು. ಅತ್ಯಂತ ಸರಳ ಬುಕಿಂಗ್ ವಿಧಾನ, ಕನಿಷ್ಠ ಷರತ್ತುಗಳ ಆರೋಗ್ಯ ದೃಢೀಕರಣ ನಿಯಮ, ಉಚಿತ ವಿಂಡೋ ಸೀಟ್, ಆದ್ಯತೆಯ ಚೆಕ್-ಇನ್ ಹಾಗೂ ಬೋರ್ಡಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದರೊಂದಿಗೆ ಹಾರಾಟದ ಸಮಯದಲ್ಲಿ ಮೂಕಪ್ರಾಣಿಗಳ ಹಾರೈಕೆ ಮತ್ತು ಸುರಕ್ಷತೆ ನೋಡಿಕೊಳ್ಳಲು ಸಿಬ್ಬಂದಿಗೆ ವೃತ್ತಿಪರ ತರಬೇತಿ ನೀಡಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others