ವೈಭವ್ ಸೂರ್ಯವಂಶಿಯನ್ನು ಶ್ಲಾಘಿಸಿದ ಪಾಕ್ ದಿಗ್ಗಜ ಆಟಗಾರ ವಾಸಿಮ್ ಅಕ್ರಮ್

ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಪಾಕಿಸ್ತಾನ ಸೂಪರ್ ಲೀಗ್ ನಡುವಿನ ಬೆಳವಣಿಗೆಯನ್ನು ಹೋಲಿಸುವಾಗ ಭಾರತದ ಪ್ರತಿಭಾವಂತ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು ಪಾಕಿಸ್ತಾನದ ದಿಗ್ಗಜ ಆಟಗಾರ ವಾಸಿಮ್ ಅಕ್ರಮ್ ಉಲ್ಲೇಖಿಸಿದ್ದಾರೆ.

ಐಪಿಎಲ್‌ನಲ್ಲಿ ಸತತ ಎರಡು ಅತ್ಯುತ್ತಮ ಆವೃತ್ತಿಗಳ ನಂತರ, ಅವರು ಇಂಗ್ಲೆಂಡ್ ವಿರುದ್ಧ ಭಾರತ ತಂಡಕ್ಕೆ ಎಂಟ್ರಿ ಕೊಡುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇವಲ 15 ವರ್ಷ ವಯಸ್ಸಿನ ಸೂರ್ಯವಂಶಿ, ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಈಗಾಗಲೇ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ ಎಂದಿದ್ದಾರೆ.

ಎರಡೂ ಲೀಗ್‌ಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿರುವ ಅಕ್ರಮ್, ಐಪಿಎಲ್‌ನಂತೆ ಪಿಎಸ್‌ಎಲ್ ಉದಯೋನ್ಮುಖ ತಾರೆಗಳನ್ನು ರೂಪಿಸುವಲ್ಲಿ ವಿಫಲವಾಗಿದೆ ಎಂದರು. ಪಿಎಸ್‌ಎಲ್ ಪ್ರಾರಂಭವಾಗಿ 10 ವರ್ಷಗಳೇ ಕಳೆದಿವೆ. ಆದರೆ, ಈ ಟೂರ್ನಿಯಿಂದ ಒಬ್ಬರಾದರೂ ಉತ್ತಮ ಬ್ಯಾಟರ್ ಹೊರಹೊಮ್ಮಿದ್ದಾರೆಯೇ? ಹೌದು, ನಾವು ಕೆಲ ಬೌಲರ್‌ಗಳನ್ನು ರೂಪಿಸಿದ್ದೇವೆ; ಆದರೆ ಗಮನಾರ್ಹ ಬ್ಯಾಟಿಂಗ್ ಪ್ರತಿಭೆಯನ್ನು ನಾವು ಸೃಷ್ಟಿಸಿದ್ದೇವೆಯೇ ಎಂದು ಹೇಳಿ. 14 ವರ್ಷದವರಂತಹ (ಸೂರ್ಯವಂಶಿ, 15) ಬ್ಯಾಟಿಂಗ್ ಪ್ರತಿಭೆಯನ್ನು ನಾವು ರೂಪಿಸಿದಾಗ ಮಾತ್ರ ನಿಜವಾದ ಸುಧಾರಣೆಯನ್ನು ಕಾಣಬಹುದು ಎಂದು ನನಗೆ ಅನ್ನಿಸುತ್ತದೆ’ ಎಂದು ಯೂಟ್ಯೂಬರ್ ಫುರ್ಖಾನ್ ಭಟ್ಟಿ ಅವರೊಂದಿಗಿನ ಸಂದರ್ಶನದಲ್ಲಿ ಅಕ್ರಮ್ ಹೇಳಿದ್ದಾರೆ.

ಅಪ್ರತಿಮ ವೇಗದ ಬೌಲರ್ ಆಗಿರುವ ಅಕ್ರಮ್, ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆಗೆ ಪೂರಕವಾಗುವಂತೆ, ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಲು ಮತ್ತು ಪಿಎಸ್‌ಎಲ್‌ನ ಪ್ರತಿಭೆಯ ಮೂಲವನ್ನುಬಲಪಡಿಸಲು ಪಾಕಿಸ್ತಾನವು ತನ್ನ ಕ್ಲಬ್ ಕ್ರಿಕೆಟ್ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಬೇಕು ಎಂದು ಒತ್ತಿ ಹೇಳಿದರು.

‘ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಸುಧಾರಣೆ ಬೇಕಾದರೆ ಕ್ಲಬ್ ಕ್ರಿಕೆಟ್ ಅನ್ನು ಪುನರುಜ್ಜೀವನಗೊಳಿಸಬೇಕಾಗಿದೆ. ಕ್ಲಬ್ ಕ್ರಿಕೆಟ್‌ನಿಂದ ಪ್ರತಿಭೆ ಬರುವುದರಿಂದ ಪಿಸಿಬಿಯು ಕರಾಚಿ ಮತ್ತು ಲಾಹೋರ್‌ಗೆ ತಲಾ 100 ಮಿಲಿಯನ್ ರೂಪಾಯಿಗಳನ್ನು ಖರ್ಚು ಮಾಡಬೇಕು’ ಎಂದು ತಿಳಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಮಾತನಾಡುವುದಾದರೆ, ಬಾಬರ್ ಅಜಂ ಮತ್ತು ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಅವಮಾನಕರ ಕ್ಲೀನ್ ಸ್ವೀಪ್‌ನ ಅಂಚಿನಲ್ಲಿದೆ. ಈಗಾಗಲೇ ಮೊದಲ ಎರಡು ಪಂದ್ಯಗಳನ್ನು ಸೋತಿರುವ ಪ್ರವಾಸಿ ತಂಡವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೂರನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಮತ್ತೊಂದು ಸೋಲನ್ನು ಎದುರು ನೋಡುತ್ತಿದೆ.

ಅಕ್ರಮ್ 2010 ರಿಂದ 2017ರವರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬೌಲಿಂಗ್ ಕೋಚ್ ಮತ್ತು ಮೆಂಟರ್ ಆಗಿ ಸೇವೆ ಸಲ್ಲಿಸಿದ್ದು, ಆ ತಂಡವು ಎರಡು ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು. ಪಿಎಸ್‌ಎಲ್ ನಲ್ಲಿ ಅವರು ಇಸ್ಲಾಮಾಬಾದ್ ಯುನೈಟೆಡ್, ಮುಲ್ತಾನ್ ಸುಲ್ತಾನ್ಸ್ ಮತ್ತು ಕರಾಚಿ ಕಿಂಗ್ಸ್ ತಂಡಗಳೊಂದಿಗೆ ಕೋಚಿಂಗ್ ಹಾಗೂ ಮಾರ್ಗದರ್ಶನದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others