ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲೂ ಟೀಮ್ ಇಂಡಿಯಾ ಸೋಲನ್ನುಹೊಂದಿದ್ದು, ಈ ಸೋಲಿನ ನಂತರ ಕಾಮೆಂಟೇಟರ್ ಇಯಾನ್ ಮೊರ್ಗನ್ ನಡೆಸಿದ ಸಂದರ್ಶನದಲ್ಲಿ ಶ್ರೇಯಸ್ ಅಯ್ಯರ್ ಪ್ರತಿಕ್ರಿಯಿಸಿದ್ದಾರೆ. ಪಂದ್ಯದ ಸೋಲು, ಕೈಚೆಲ್ಲಿದ ಕ್ಯಾಚ್‌ಗಳು ಮತ್ತು ಪಿಚ್‌ಗಳಿಗೆ ಹೊಂದಿಕೊಳ್ಳುವಲ್ಲಿನ ವೈಫಲ್ಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನಾವು ಇಲ್ಲಿ ಉತ್ತಮವಾಗಿ ಏನು ಮಾಡಬಹುದಿತ್ತು ಎಂಬುದನ್ನು ಸಾಧ್ಯವಾದಷ್ಟು ಸಂವಹನ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಪಂದ್ಯದ ಸೋಲಿಗೆ ಪ್ರಮುಖ ಕಾರಣಗಳಲ್ಲಿ ಫೀಲ್ಡಿಂಗ್ ಕೂಡ ಒಂದು. ಗೆಲುವಿನಲ್ಲಿ ಫೀಲ್ಡಿಂಗ್ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಕೆಲವು ಪ್ರಮುಖ ಕ್ಯಾಚ್‌ಗಳನ್ನು ಕೈಚೆಲ್ಲಿದೆವು ಎಂದರು.
ಇದರಿಂದಾಗಿ ಎದುರಾಳಿ ತಂಡ 20 ರಿಂದ 25 ರನ್ ಹೆಚ್ಚು ಗಳಿಸಿತು. ಒಂದು ವೇಳೆ ಆ ತಪ್ಪುಗಳಾಗದಿದ್ದರೆ ನಾವು 220-225 ರನ್‌ಗಳ ಗುರಿಯನ್ನು ಬೆನ್ನಟ್ಟಬಹುದಿತ್ತು. ಹೀಗಾಗಿ ನಾವು ಸೋಲಿಂದ ಹೊರಬರಲು ಅಷ್ಟೇನೂ ಕೆಲಸ ಮಾಡಬೇಕಾಗಿಲ್ಲ. ಫೀಲ್ಡಿಂಗ್ ಬಗ್ಗೆ ಹೆಚ್ಚು ಗಮನಹರಿಸಿದರೆ ಸಾಕು ಎಂದು ಅಯ್ಯರ್ ಹೇಳಿದ್ದಾರೆ.
ಬ್ಯಾಟಿಂಗ್‌ಗೆ ಪೂರಕವಾಗಿದ್ದ ಪಿಚ್‌ನಲ್ಲಿ ನಮ್ಮ ಬೌಲರ್‌ಗಳು ವೈವಿಧ್ಯಮಯ ಎಸೆತಗಳ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ವಂಚಿಸಬೇಕಾಗಿತ್ತು. ಆದರೆ ಅಲ್ಲಿ ನಮ್ಮ ಯೋಜನೆಗಳು ಸರಿಯಾಗಿ ಕೆಲಸ ಮಾಡಲಿಲ್ಲ. ಈ ಹಂತದಲ್ಲಿ ನಾವು ಒಂದೆರಡು ಕ್ಯಾಚ್‌ಗಳನ್ನು ಕೈಬಿಟ್ಟೆವು, ಅದು ಬಹುಶಃ ನಮಗೆ ಸ್ವಲ್ಪ ಹಿನ್ನಡೆಯನ್ನುಂಟು ಮಾಡಿತು.
ಪವರ್‌ಪ್ಲೇ ಅವಧಿಯಲ್ಲಿ ಸರಣಿಯಾಗಿ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. ದೊಡ್ಡ ಮೊತ್ತವನ್ನು ಬೆನ್ನಟ್ಟುವಾಗ ಜವಾಬ್ದಾರಿಯುತ ಜೊತೆಯಾಟಗಳು ಮುಖ್ಯವೇ ಹೊರತು, ಆರಂಭದಿಂದಲೇ ಅತಿಯಾದ ಆಕ್ರಮಣಕಾರಿ ಆಟಕ್ಕೆ ಮುಂದಾಗುವುದು ಸರಿಯಲ್ಲ. ಇದರ ಅರಿವು ಇರಬೇಕಿತ್ತು ನಾನು ಭಾವಿಸುತ್ತೇನೆ ಎಂದು ಅಯ್ಯರ್ ತಿಳಿಸಿದರು.
ಜೋಸ್ ಬಟ್ಲರ್ ಹಾಗೂ ಹ್ಯಾರಿ ಬ್ರೂಕ್ ಭರ್ಜರಿಯಾಗಿ ಬ್ಯಾಟಿಂಗ್ ಮಾಡಿದರು. ಅಲ್ಲದೆ ಅತ್ಯುತ್ತಮ ಜೊತೆಯಾಟವನ್ನೂ ಸಹ ಪ್ರದರ್ಶಿಸಿದರು. ಇಂತಹ ಪಾಲುದಾರಿಕೆ ಖಂಡಿತವಾಗಿಯೂ ಪಂದ್ಯದ ಮೇಲಿನ ಹಿಡಿತವನ್ನು ಸ್ಥಿರಗೊಳಿಸುತ್ತದೆ. ಜೊತೆಗೆ ಅವರ ಬೌಲರ್‌ಗಳು ತಾಯ್ನಾಡಿನ ಮೈದಾನದ ಸಂಪೂರ್ಣ ಲಾಭ ಪಡೆದರು.
ಸರಣಿ ಕೈತಪ್ಪಿದರೂ ಇದು ತಂಡದ ಯುವ ಆಟಗಾರರಿಗೆ ದೊಡ್ಡ ಪಾಠವಾಗಿದೆ. ವಿದೇಶಿ ಮೈದಾನಗಳ ಗಾತ್ರ ಮತ್ತು ಆಯಾಮಗಳು ವಿಭಿನ್ನವಾಗಿರುತ್ತವೆ. ಮುಂದಿನ ಬಾರಿ ಇಲ್ಲಿಗೆ ಬರುವಾಗ ತಂಡದ ಆಟಗಾರರು ಈ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡು, ಹೆಚ್ಚಿನ ಜಾಗರೂಕತೆಯಿಂದ ಕಣಕ್ಕಿಳಿಯಲಿದ್ದಾರೆ ಎಂದು ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾಮಾಣಿಕವಾಗಿ ಹೇಳುವುದಾದರೆ, ಬಹಳಷ್ಟು ವಿಷಯಗಳನ್ನು ಕಲಿಯಬೇಕಿದೆ. ಮೊದಲನೆಯದಾಗಿ, ಪರಿಸ್ಥಿತಿಗಳು, ಪಿಚ್ನ ಅರಿವು, ಆಯಾ ಪಿಚ್‌ಗಳಿಗೆ ಹೊಂದಿಕೊಳ್ಳುವಿಕೆ. ನಾವು ಆಡಿದ ಮೈದಾನಗಳ ಪೈಕಿ ಕೊನೆಯ ಪಂದ್ಯ ನಡೆದ ಪಿಚ್ ಅತ್ಯುತ್ತಮವಾಗಿತ್ತು. ವೃತ್ತಿಪರ ಆಟಗಾರರಾಗಿ ನಾವು ಪ್ರತಿ ಪಂದ್ಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ವೇಗವಾಗಿ ಹೊಂದಿಕೊಳ್ಳುವುದನ್ನು ಕಲಿಯಬೇಕಾಗಿದೆ ಎಂದು ತಿಳಿಸಿದ್ದಾರೆ.





