ಸರ್ಕಾರಿ ಶಾಲಾ-ಕಾಲೇಜುಗಳ ಎಲ್ಲ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ: ಸಚಿವ ಬಸವರಾಜ ರಾಯರಡ್ಡಿ

ಬೆಂಗಳೂರು : ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 12ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ, ಉನ್ನತ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ‘ದೀಪಿಕಾ’ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ ಜಾರಿಗೊಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದರು.

ಶನಿವಾರ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ದೀಪಿಕಾ ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಜನೆಯಡಿ ಅರ್ಹ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 30 ಸಾವಿರ ರೂಪಾಯಿ ವಿದ್ಯಾರ್ಥಿವೇತನ ನೀಡಲಾಗುವುದು. ಎಂಜಿನಿಯರಿಂಗ್, ವೈದ್ಯಕೀಯ, ಬಿಎ, ಬಿಕಾಂ, ಬಿಎಸ್ಸಿ ಸೇರಿದಂತೆ ವಿವಿಧ ಪದವಿ ಹಾಗೂ ಉನ್ನತ ಶಿಕ್ಷಣದ ಕೋರ್ಸ್‌ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿನಿಯರು ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬಹುದು. ಮೂರು ವರ್ಷದ ಪದವಿ ಕೋರ್ಸ್ ಪೂರ್ಣಗೊಳಿಸುವ ವಿದ್ಯಾರ್ಥಿನಿಗೆ ಒಟ್ಟು 90 ಸಾವಿರ ರೂ. ನಾಲ್ಕು ವರ್ಷದ ಕೋರ್ಸ್‌ಗೆ 1.20 ಲಕ್ಷ ರೂ. ಹಾಗೂ ಐದು ವರ್ಷದ ವೈದ್ಯಕೀಯ ಕೋರ್ಸ್‌ಗೆ ಸುಮಾರು 1.50 ಲಕ್ಷ ರೂ. ನೆರವು ದೊರೆಯಲಿದೆ ಎಂದರು.

ಆದಾಯ, ಜಾತಿ, ಮೆರಿಟ್‌ ಮಾನದಂಡವಿಲ್ಲ:

ವಿದ್ಯಾರ್ಥಿವೇತನಕ್ಕೆ ಯಾವುದೇ ಆದಾಯ ಮಿತಿ ಇಲ್ಲ. ಜಾತಿ, ವರ್ಗ ಅಥವಾ ಯಾವುದೇ ಇತರ ಮಾನದಂಡಗಳನ್ನು ಪರಿಗಣಿಸಲಾಗುವುದಿಲ್ಲ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 12ನೇ ತರಗತಿ ಶಿಕ್ಷಣ ಪೂರ್ಣಗೊಳಿಸಿ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ಅರ್ಹ ವಿದ್ಯಾರ್ಥಿನಿಯರು ಯೋಜನೆಯ ಪ್ರಯೋಜನ ಪಡೆಯಬಹುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ವರ್ಷ ವಿವಿಧ ಪದವಿ ಕಾಲೇಜುಗಳಲ್ಲಿ ಈಗಾಗಲೇ 33 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದಾರೆ. ಇನ್ನೂ ಪ್ರವೇಶ ಪಡೆಯದ ಅರ್ಹ ವಿದ್ಯಾರ್ಥಿನಿಯರು ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆದು ವಿದ್ಯಾರ್ಥಿವೇತನದ ಪ್ರಯೋಜನ ಪಡೆಯಬೇಕು. ಅರ್ಜಿ ಸಲ್ಲಿಸಲು ಮೊದಲ ಹಂತದಲ್ಲಿ ಆಗಸ್ಟ್ 31ರವರೆಗೆ ಅವಕಾಶವಿದೆ ಎಂದು ತಿಳಿಸಿದರು.

ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣುಮಕ್ಕಳು ಹಿಂಜರಿಕೆಗೆ ಒಳಗಾಗದೆ ಸಮಾನ ಅವಕಾಶಗಳನ್ನು ಪಡೆಯಬೇಕು. ಲಿಂಗ ಸಮಾನತೆ ಸಾಧಿಸುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಅರ್ಹ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆಯುವಂತೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಪದವಿ, ಸ್ನಾತಕೋತ್ತರ ಶಿಕ್ಷಣಕ್ಕೂ ಹೆಚ್ಚಿನ ಅವಕಾಶ :

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಎಂಎ, ಎಂಕಾಂ, ಎಂಎಸ್ಸಿ ಸೇರಿದಂತೆ ಎಲ್ಲ ಸ್ನಾತಕೋತ್ತರ ಕೋರ್ಸ್‌ಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಸುಲಭವಾಗಿ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ತುಳಸಿ ಮದ್ದಿನೇನಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others