ವಿದ್ಯಾರ್ಥಿನಿ ಆತ್ಮಹ*ತ್ಯೆ ಕೇಸ್: ಮುಖ್ಯ ಶಿಕ್ಷಕಿ ಸೇರಿ ನಾಲ್ವರ ವಿರುದ್ಧ FIR ದಾಖಲು

ಬೆಂಗಳೂರು: ಶಾಲಾ ಶಿಕ್ಷಕಿಯರು ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತು ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರ ವಿರುದ್ಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ (FIR) ದಾಖಲಾಗಿದೆ.

ಮುಖ್ಯಶಿಕ್ಷಕಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

ಜುಲೈ 9 ರಂದು ಆನೇಕಲ್ ತಾಲ್ಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮರಸೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸುಜಾತಾ ಈರಪ್ಪ, ಸಹ ಶಿಕ್ಷಕಿಯರಾದ ಕವಿತಾ, ರೂಪಾ ಹಾಗೂ ಅಡುಗೆ ಸಹಾಯಕಿ ಕಮಲಮ್ಮ ವಿರುದ್ಧ ಸೂರ್ಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಬಾಲಕಿಯನ್ನು 8ನೇ ತರಗತಿ ವಿದ್ಯಾರ್ಥಿನಿ ಮಧುಶ್ರೀ ಎಂದು ಗುರುತಿಸಲಾಗಿದೆ. ಈಕೆ ರಾಜ್ಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಳು.

ಟಾರ್ಗೆಟ್ ಮಾಡಿ ಕಿರುಕುಳ ನೀಡುತ್ತಿದ್ದ ಶಿಕ್ಷಕರು?

ಮರಸೂರು ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಕೆಲವು ತಿಂಗಳುಗಳ ಹಿಂದೆ ಶಾಲೆಯ ವಿದ್ಯಾರ್ಥಿಗಳು ಪಿಡಿಒ (PDO) ಅವರಿಗೆ ದೂರು ಪತ್ರವೊಂದನ್ನು ಬರೆದಿದ್ದರು. ಈ ಪತ್ರವನ್ನು ವಿದ್ಯಾರ್ಥಿನಿ ಮಧುಶ್ರೀ ತನ್ನ ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದಳು. ಈ ವಿಷಯ ಶಿಕ್ಷಕರಿಗೆ ತಿಳಿದ ತಕ್ಷಣ, ಅವರು ಮಧುಶ್ರೀಯನ್ನು ಗುರಿಯಾಗಿಸಿಕೊಂಡು (Target) ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. ಇದರಿಂದಾಗಿ ಮಧುಶ್ರೀ ಕಳೆದ ಕೆಲವು ತಿಂಗಳುಗಳಿಂದ ತೀವ್ರ ಮಾನಸಿಕ ನೊಂದಿದ್ದಳು.

ಸಹೋದರಿ ಹಾಗೂ ದೈಹಿಕ ಶಿಕ್ಷಕರಲ್ಲಿ ಅಳಲು ತೋಡಿಕೊಂಡಿದ್ದ ಬಾಲಕಿ

ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನವೂ ಶಾಲೆಗೆ ಹೋಗಿದ್ದ ಮಧುಶ್ರೀ, ಶಿಕ್ಷಕಿಯರು ನೀಡುತ್ತಿದ್ದ ಕಿರುಕುಳದ ಬಗ್ಗೆ ಶಾಲೆಯ ದೈಹಿಕ ಶಿಕ್ಷಕ ಶ್ರೀನಿವಾಸ್ ಅವರ ಬಳಿ ಹೇಳಿ ಅತ್ತಿದ್ದಳು. ಅಷ್ಟೇ ಅಲ್ಲದೆ, ಅಂದು ಸಂಜೆ ಮನೆಗೆ ಬಂದ ಬಳಿಕ ತನ್ನ ಸಹೋದರಿ ಭಾನುಶ್ರೀ ಬಳಿಯೂ ಶಾಲೆಯ ವಿಚಾರವನ್ನು ಹಂಚಿಕೊಂಡಿದ್ದಳು. ಶಿಕ್ಷಕಿಯರು ತನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಳು.

ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ: ಶಿಕ್ಷಕಿಯರ ನಿರಂತರ ನಿಂದನೆಯಿಂದ ಮನನೊಂದ ಮಧುಶ್ರೀ, ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸಾವಿಗೂ ಮುನ್ನ ಶಿಕ್ಷಕಿಯರ ಕಿರುಕುಳದ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾಳೆ. ಸದ್ಯ ಡೆತ್ ನೋಟ್ ವಶಪಡಿಸಿಕೊಂಡಿರುವ ಸೂರ್ಯನಗರ ಪೊಲೀಸರು, ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post