ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ರಾಜ್ಯದ 1.34 ಕೋಟಿ ಕುಟುಂಬಗಳಿಗೆ ಪ್ರತಿವರ್ಷ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವ ಮಹತ್ವದ ಯೋಜನೆಯನ್ನು ಘೋಷಿಸಿದ್ದಾರೆ.

ʻಅನ್ನಪೂರ್ಣಿ ಸೂಪರ್ ಸಿಕ್ಸ್‌ʼ ಹೆಸರಿನಲ್ಲಿ ತಮಿಳುನಾಡು ಸರ್ಕಾರ ಈ ಯೋಜನೆ ಘೋಷಿಸಿದೆ. ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಕುಟುಂಬಗಳಿಗೆ ಈ ಯೋಜನೆ ಅನ್ವಯ ಆಗಲಿದೆ. ಈ ಯೋಜನೆಯಿಂದ 1.30 ಕೋಟಿ ಕುಟುಂಬಗಳಿಗೆ ಸಹಾಯವಾಗಲಿದೆ. ಅಂದಾಜು 4000 ಕೋಟಿ ರೂ. ಹಣ ಈ ಯೋಜನೆಗೆ ಬಳಕೆಯಾಗಲಿದೆ.

ಇದರ ಜೊತೆಗೆ, ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಮತ್ತಷ್ಟು ವಿಸ್ತರಿಸಲಾಗಿದ್ದು, ಇನ್ನು ಮುಂದೆ ಜಿಲ್ಲೆಗಳ ನಡುವೆ ಸಂಚರಿಸುವ ಸಾಮಾನ್ಯ ಬಸ್‌ಗಳ ಜೊತೆಗೆ ಎಕ್ಸ್‌ಪ್ರೆಸ್, ಡಿಲಕ್ಸ್ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ‘ವೆಟ್ರಿ ಪಯಣಂ ತಿಟ್ಟಂ’ ಹೆಸರಿನ ಈ ಯೋಜನೆ ಅಕ್ಟೋಬರ್ 2ರಿಂದ ಜಾರಿಗೆ ಬರಲಿದೆ.

ಉಚಿತ ಎಲ್‌ಪಿಜಿ ಸಿಲಿಂಡರ್ ಯೋಜನೆಯಿಂದ ಸುಮಾರು 1.34 ಕೋಟಿ ಕುಟುಂಬಗಳಿಗೆ ಪ್ರಯೋಜನವಾಗಲಿದೆ ಎಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹೇಳಿದರು.

ವಾರ್ಷಿಕ ರೂ.2.5 ಲಕ್ಷದವರೆಗೆ ಆದಾಯ ಹೊಂದಿರುವ ಕುಟುಂಬಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಇತರ ಕುಟುಂಬಗಳು ಯೋಜನೆಯ ವ್ಯಾಪ್ತಿಗೆ ಬರಲಿವೆ. ಈ ಯೋಜನೆಗೆ ಪ್ರತಿ ವರ್ಷ ರೂ. 4,000 ಕೋಟಿಗೂ ಅಧಿಕ ವೆಚ್ಚವಾಗಲಿದೆ. ಅರ್ಹ ಫಲಾನುಭವಿಗಳಿಗೆ ಮೂರು ಸಿಲಿಂಡರ್‌ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.

ವಿಧಾನಸಭೆಯಲ್ಲಿ ನಿಯಮ 110ರ ಅಡಿಯಲ್ಲಿ ಘೋಷಣೆಗಳನ್ನು ಮಾಡಿದ ಸಿಎಂ ವಿಜಯ್ ಅವರು, ಪ್ರಸ್ತಾವಿತ ಪರಂದೂರು ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. ಯೋಜನೆಗೆ ಪರ್ಯಾಯ ಸ್ಥಳವನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಕಳೆದ ವರ್ಷ ಪರಂದೂರಿಗೆ ಭೇಟಿ ನೀಡಿದ್ದ ವಿಜಯ್, ವಿಮಾನ ನಿಲ್ದಾಣ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಏಕನಾಪುರಂ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾಗಿ ಹೇಳಿದರು. “ಪರ್ಯಾಯ ಸ್ಥಳ ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others