ಭಾರತೀಯ ಉದ್ಯಮಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ತನ್ನ “ಆಟದ ವಸ್ತುಗಳಂತೆ” ಪರಿಗಣಿಸುತ್ತಿದೆ : ರಾಹುಲ್ ಗಾಂಧಿ

ನವದೆಹಲಿ: ಟಾಟಾ ಸನ್ಸ್ ಸಂಸ್ಥೆಯ ನಾಯಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ಸರ್ಕಾರವು ಭಾರತೀಯ ಉದ್ಯಮಗಳನ್ನು ತನ್ನ ಆಟದ ವಸ್ತುವಿನಂತೆ ನಡೆಸಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಟಾಟಾ ಸನ್ಸ್‌ನ ನಿರ್ದೇಶಕರ ಮಂಡಳಿಯು ಎನ್. ಚಂದ್ರಶೇಖರನ್ ಅವರನ್ನು ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮರುನೇಮಕ ಮಾಡುವ ನಿರ್ಣಯದ ಸಿಂಧುತ್ವವನ್ನು ಟಾಟಾ ಟ್ರಸ್ಟ್‌ಗಳ ಅಧ್ಯಕ್ಷ ನೋಯೆಲ್ ಟಾಟಾ ಪ್ರಶ್ನಿಸಿದ ಬಳಿಕ ಟಾಟಾ ಸಮೂಹದೊಳಗಿನ ವಿವಾದ ತೀವ್ರಗೊಂಡಿದೆ. ಸೆಪ್ಟೆಂಬರ್ 17ರಂದು ನಡೆದ ಸಭೆಯಲ್ಲಿ ಕಾರ್ಯವಿಧಾನಕ್ಕೆ ಸಂಬಂಧಿಸಿದ ಲೋಪಗಳಾಗಿವೆ ಎಂದು ಆರೋಪಿಸಿದ್ದಾರೆ.

ಅಕ್ಟೋಬರ್ 26ರಂದು ಟಾಟಾ ಸನ್ಸ್‌ನ ಕಂಪನಿ ಕಾರ್ಯದರ್ಶಿ ಸುಪ್ರಕಾಶ್ ಮುಖೋಪಾಧ್ಯಾಯ ಅವರಿಗೆ ಬರೆದ ಪತ್ರದಲ್ಲಿ, ನಿರ್ದೇಶಕರಿಗೆ ಕಳುಹಿಸಲಾದ ಸಭೆಯ ಕಾರ್ಯಸೂಚಿಯಲ್ಲಿ ಚಂದ್ರಶೇಖರನ್ ಅವರ ಮರುನೇಮಕದ ವಿಚಾರವನ್ನು ಸ್ಪಷ್ಟವಾಗಿ ಉಲ್ಲೇಖಿಸಿರಲಿಲ್ಲ ಎಂದು ನೋಯೆಲ್ ತಿಳಿಸಿದ್ದಾರೆ.

ಕಂಪನಿಯ ನಿಯಮಾವಳಿಗಳ ಪ್ರಕಾರ ರಚಿಸಬೇಕಿದ್ದ ಆಯ್ಕೆ ಸಮಿತಿಯನ್ನೂ ರಚಿಸಿರಲಿಲ್ಲ. ಅಲ್ಲದೆ, ವಿಧಿ 104ಬಿ ಅಡಿಯಲ್ಲಿ ನೇಮಕಗೊಂಡ ನಿರ್ದೇಶಕರಿಂದ ಅಗತ್ಯ ಅನುಮೋದನೆ ಪಡೆಯಲಾಗಿರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಆಕ್ಷೇಪಣೆಗಳು ಬಗೆಹರಿಯದಿದ್ದರೂ ನಿರ್ಣಯವನ್ನು ಅಂತಿಮವೆಂದು ಪರಿಗಣಿಸಿರುವುದನ್ನೂ ನೋಯೆಲ್ ಪ್ರಶ್ನಿಸಿದ್ದಾರೆ. ಸಭೆಯ ಧ್ವನಿ ಮತ್ತು ದೃಶ್ಯ ಮುದ್ರಣಗಳು, ಅಂತಿಮ ಸಭಾ ನಡಾವಳಿ ಹಾಗೂ ನಿರ್ಣಯದ ದೃಢೀಕೃತ ಪ್ರತಿಯನ್ನು ಹಲವು ಬಾರಿ ಕೇಳಿದರೂ ಒದಗಿಸಿಲ್ಲ ಎಂದು ಅವರು ದೂರಿದ್ದಾರೆ.

ಈ ನಿರ್ಣಯವು ಅಮಾನ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ನೋಯೆಲ್, ಮರುನೇಮಕವು ಟಾಟಾ ಸನ್ಸ್‌ನ ಕಂಪನಿ ನಿಯಮಾವಳಿಗಳ ಸಂಬಂಧಿತ ವಿಧಿಗಳಿಗೆ ಅನುಗುಣವಾಗಿಲ್ಲ ಎಂದು ವಾದಿಸಿದ್ದಾರೆ.

ಸಭೆಯ ನಡಾವಳಿ ಅಂತಿಮಗೊಳ್ಳುವ ಮೊದಲೇ ನಿರ್ಣಯದ ದೃಢೀಕೃತ ಪ್ರತಿಯನ್ನು ಸಾರ್ವಜನಿಕವಾಗಿ ಹಂಚಿಕೊಂಡಿರುವುದು ಹಾಗೂ ಅದನ್ನು ಕಂಪನಿಗಳ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿರುವ ವರದಿಗಳ ಬಗ್ಗೆಯೂ ಅವರು ಪ್ರಶ್ನೆ ಎತ್ತಿದ್ದಾರೆ.

ಸಭೆಯಲ್ಲಿ ನಡೆದ ಘಟನೆಗಳ ನಿಖರ ಕ್ರಮವನ್ನು ಸ್ಥಾಪಿಸಲು ಧ್ವನಿ ಮತ್ತು ದೃಶ್ಯ ಮುದ್ರಣಗಳೇ ತಟಸ್ಥ ದಾಖಲೆಗಳಾಗಿವೆ ಎಂದು ನೋಯೆಲ್ ಹೇಳಿದ್ದಾರೆ.

ಭಾರತೀಯ ಉದ್ಯಮಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ತನ್ನ “ಆಟದ ವಸ್ತುಗಳಂತೆ” ಪರಿಗಣಿಸುತ್ತಿದ್ದು, ಉದ್ಯಮಿಗಳು ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹೇಳಲು ಹೆದರುತ್ತಿದ್ದಾರೆ ಎಂದು ದೂರಿದ್ದಾರೆ.

ಇದೇ ವೇಳೆ ಟಾಟಾ ಸಂಸ್ಥೆಯನ್ನು “ಅಪರಾಧಪೂರ್ವಕವಾಗಿ ನಾಶಪಡಿಸಲಾಗುತ್ತಿದೆ” ಎಂದು ಆರೋಪಿಸಿರುವ ಅವರು, ಈ ವಿಚಾರದಲ್ಲಿ ಉದ್ಯಮ ವಲಯದ ನಾಯಕರು ಮೌನವಾಗಿರುವುದನ್ನೂ ಪ್ರಶ್ನಿಸಿದ್ದಾರೆ.

ಟಾಟಾ ಸಂಸ್ಥೆಯನ್ನು ಅಪರಾಧಪೂರ್ವಕವಾಗಿ ನಾಶಪಡಿಸಲಾಗುತ್ತಿದೆ. ಆದರೆ, ಯಾವುದೇ ಉದ್ಯಮ ನಾಯಕರು ಒಂದು ಮಾತನ್ನೂ ಆಡಲು ಧೈರ್ಯ ಮಾಡುತ್ತಿಲ್ಲ. ನೀವು ಇನ್ನೆಷ್ಟು ದಿನ ಮೌನವಾಗಿರುತ್ತೀರಿ? ಅವರು ನಿಮ್ಮನ್ನೇ ನಿಯಂತ್ರಿಸುವವರೆಗೂ ಕಾಯುತ್ತೀರಾ? ಭಾರತೀಯ ಉದ್ಯಮಗಳು ಮೋದಿ ಮತ್ತು ಶಾ ಅವರ ಆಟದ ವಸ್ತುಗಳಲ್ಲ. ನಿಮ್ಮಲ್ಲಿ ಧೈರ್ಯವಿಲ್ಲ. ಆದರೆ, ನಮ್ಮಲ್ಲಿದೆ. ಈ ಕೃತ್ಯಗಳಿಗೆ ನ್ಯಾಯ ದೊರಕಿಸಿಕೊಡಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *