ಬೆಂಗಳೂರು: ಅನ್ನದಾತರ ದುಡಿಮೆಗೆ ಸೂಕ್ತ ಬೆಲೆ ದೊರಕಿಸಿಕೊಡುವ ಜತೆಗೆ, ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಯಂತ್ರೋಪಕರಣಗಳ ಬಲ ತುಂಬಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವ್ಯವಸಾಯವನ್ನು ಹೆಚ್ಚು ಸುಲಭ, ಚುರುಕು ಹಾಗೂ ಲಾಭದಾಯಕವಾಗಿಸುವ ಗುರಿಯೊಂದಿಗೆ ರೂಪಿಸಲಾಗಿರುವ ನೂತನ ಮುಖ್ಯಮಂತ್ರಿ ‘ನೇಗಿಲ ಯೋಗಿ’ ಯೋಜನೆಯು (Negila Yogi Scheme) ಇದೇ ನವೆಂಬರ್ 1 ರಿಂದ ರಾಜ್ಯಾದ್ಯಂತ ಅನುಷ್ಠಾನಕ್ಕೆ ಬರಲಿದೆ.
ರೈತರ ಸಂಕಷ್ಟಗಳಿಗೆ ಹೆಗಲು ಕೊಡುವ ಆಶಯದೊಂದಿಗೆ ಜಾರಿಯಾಗುತ್ತಿರುವ ಈ ಕಾರ್ಯಕ್ರಮವು ರಾಜ್ಯದಲ್ಲಿ ಕೃಷಿ ಯಾಂತ್ರೀಕರಣವನ್ನು (Farm Mechanization) ತಳಮಟ್ಟದವರೆಗೆ ವಿಸ್ತರಿಸಲು ನೆರವಾಗಲಿದೆ. ಉಳುಮೆಯಿಂದ ಹಿಡಿದು ಬೆಳೆ ಕಟಾವಿನವರೆಗೆ ಅಗತ್ಯವಿರುವ ಅತ್ಯಾಧುನಿಕ ಯಂತ್ರೋಪಕರಣಗಳ ಸೌಲಭ್ಯವನ್ನು ಸುಲಭವಾಗಿ ತಲುಪಿಸಿ, ಕೃಷಿ ಉತ್ಪಾದಕತೆ ಹೆಚ್ಚಿಸುವುದು ಯೋಜನೆಯ ಮೂಲ ಆಶಯವಾಗಿದೆ.
‘ಜೆ-ಫಾರ್ಮ್’ ಮೊಬೈಲ್ ಅಪ್ಲಿಕೇಶನ್ ಲೋಕಾರ್ಪಣೆ: ದಾಖಲೆಯ ನೋಂದಣಿ
ರೈತರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಯೋಜನೆಗೆ ನೇರ ಹಾಗೂ ಪಾರದರ್ಶಕ ಪ್ರವೇಶ ಕಲ್ಪಿಸಲು ‘ಜೆ-ಫಾರ್ಮ್’ (J-Farm App) ಮೊಬೈಲ್ ಆ್ಯಪ್ ಅನ್ನು ಸಿದ್ಧಪಡಿಸಲಾಗಿದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅನ್ನದಾತರಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದ್ದು, ಆ್ಯಪ್ ಮೂಲಕ ಈಗಾಗಲೇ 2.5 ಲಕ್ಷಕ್ಕೂ ಹೆಚ್ಚು ಕೃಷಿಕರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಯಂತ್ರಗಳ ಬಳಕೆಯಿಂದ ಕೃಷಿ ವೆಚ್ಚ ಇಳಿಕೆಯಾಗಿ ರೈತರ ಆದಾಯ ಹೆಚ್ಚಳಕ್ಕೆ ಇದು ದಾರಿಯಾಗಲಿದೆ ಎಂದು ವಾರ್ತಾ ಇಲಾಖೆ ತಿಳಿಸಿದೆ




