ಹಾಫ್ ಹೆಲ್ಮೆಟ್‌ಗೆ ಸಂಪೂರ್ಣ ನಿಷೇಧ: ಸಂಚಾರ ನಿಯಮ ಉಲ್ಲಂಘಿಸಿದರೆ ಬೀಳಲಿದೆ ಭಾರಿ ದಂಡ

ಬೆಂಗಳೂರು: ದ್ವಿಚಕ್ರ ವಾಹನ ಸವಾರರ(Two-wheeler rider) ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಅಪಘಾತದ(Accidents) ವೇಳೆ ಸಂಭವಿಸುವ ಪ್ರಾಣಾಪಾಯವನ್ನು ತಡೆಗಟ್ಟಲು ಕರ್ನಾಟಕ ಸಾರಿಗೆ ಇಲಾಖೆಯು ಹಾಫ್ ಹೆಲ್ಮೆಟ್‌ಗಳ (Half Helmets) ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಕೇವಲ ಹೆಸರಿಗಷ್ಟೇ ಎಂಬಂತೆ ಸಣ್ಣ ಹಾಫ್ ಹೆಲ್ಮೆಟ್‌ಗಳನ್ನು ಧರಿಸಿ ಸಂಚರಿಸುವುದನ್ನು ನಿಯಂತ್ರಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಸವಾರರು ಕಡ್ಡಾಯವಾಗಿ ಬಿಐಎಸ್/ಐಎಸ್‌ಐ (BIS/ISI) ಗುಣಮಟ್ಟದ ಮಾನದಂಡ ಹೊಂದಿರುವ ಹೆಲ್ಮೆಟ್‌ಗಳನ್ನೇ ಧರಿಸಬೇಕು ಎಂದು ಸೂಚಿಸಲಾಗಿದೆ.

ಸವಾರರು ಮಾತ್ರವಲ್ಲದೆ, ಇಂತಹ ಕಳಪೆ ಗುಣಮಟ್ಟದ ಹಾಫ್ ಹೆಲ್ಮೆಟ್‌ಗಳನ್ನು ತಯಾರಿಸುವವರು ಹಾಗೂ ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

ಹೆಲ್ಮೆಟ್ ರಹಿತ ಚಾಲನೆ ಹಾಗೂ ನಿಯಮ ಉಲ್ಲಂಘನೆಗೆ ದಂಡ ಎಷ್ಟು?

ರಾಜ್ಯದಲ್ಲಿ ಹೆಲ್ಮೆಟ್ ಧರಿಸದೆ ಅಥವಾ ಅಮಾನ್ಯವಾದ ಹಾಫ್ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿದರೆ ಸವಾರರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯವಾಗಿದ್ದು, ನಿಯಮ ಮೀರಿದರೆ ಅವರಿಗೂ ಇದೇ ದಂಡ ಅನ್ವಯವಾಗುತ್ತದೆ. ಸತತವಾಗಿ ನಿಯಮ ಉಲ್ಲಂಘಿಸಿದಲ್ಲಿ ದಂಡದ ಮೊತ್ತ 1,000 ರೂ.ಗೆ ಏರಿಕೆಯಾಗುವುದರ ಜೊತೆಗೆ ಮೂರು ತಿಂಗಳ ಕಾಲ ಚಾಲನಾ ಪರವಾನಗಿ (ಡಿಎಲ್) ಅಮಾನತು ಮಾಡುವ ಅವಕಾಶವೂ ಕಾನೂನಿನಲ್ಲಿದೆ.

ಇತರೆ ಪ್ರಮುಖ ಸಂಚಾರ ನಿಯಮಗಳು ಮತ್ತು ದಂಡದ ವಿವರ:

ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ಚಾಲಕರು ರಸ್ತೆ ನಿಯಮಗಳನ್ನು ಉಲ್ಲಂಘಿಸಿದಾಗ ವಿಧಿಸಲಾಗುವ ಪ್ರಮುಖ ದಂಡಗಳ ವಿವರ ಹೀಗಿದೆ:

  • ಮೊಬೈಲ್ ಬಳಕೆ: ಚಾಲನೆ ವೇಳೆ ಮೊಬೈಲ್ ಫೋನ್ ಬಳಕೆ ಮಾಡಿದರೆ 1,500 ರಿಂದ 5,000 ರೂ. ದಂಡ.
  • ಸೀಟ್ ಬೆಲ್ಟ್ ಧರಿಸದಿರುವುದು: ಕಾರು ಚಾಲಕರು ಮತ್ತು ಮುಂಬದಿ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸದಿದ್ದರೆ 500 ರಿಂದ 1,000 ರೂ. ದಂಡ.
  • ಸಿಗ್ನಲ್ ಜಂಪ್: ಕೆಂಪು ಸಿಗ್ನಲ್ ಉಲ್ಲಂಘಿಸಿ ವಾಹನ ಚಲಾಯಿಸಿದರೆ 500 ರಿಂದ 1,000 ರೂ. ದಂಡ.
  • ಮದ್ಯಪಾನ ಮಾಡಿ ವಾಹನ ಚಾಲನೆ (ಡ್ರಿಂಕ್ & ಡ್ರೈವ್): ಮೊದಲ ಬಾರಿಗೆ 10,000 ರೂ. ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ.
  • ಚಾಲನಾ ಪರವಾನಗಿ ಇಲ್ಲದೆ ವಾಹನ ಚಾಲನೆ: ವ್ಯಾಲಿಡ್ ಡಿಎಲ್ ಇಲ್ಲದೆ ವಾಹನ ಚಲಾಯಿಸಿದರೆ 1,000 ರಿಂದ 5,000 ರೂ. ದಂಡ.
  • ಟ್ರಿಪಲ್ ರೈಡಿಂಗ್: ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ಮಂದಿ ಸಂಚರಿಸಿದರೆ 500 ರಿಂದ 1,000 ರೂ. ದಂಡ.
  • ಅತಿಯಾದ ವೇಗ (ಓವರ್ ಸ್ಪೀಡಿಂಗ್): ನಿಗದಿತ ವೇಗದ ಮಿತಿ ಮೀರಿದರೆ 1,000 ರಿಂದ 2,000 ರೂ. ದಂಡ.
  • ವಿಮೆ (Insurance) ಇಲ್ಲದಿರುವುದು: ಮಾನ್ಯತೆಯುಳ್ಳ ವಾಹನ ವಿಮೆ ಇಲ್ಲದೆ ಸಂಚರಿಸಿದರೆ 1,000 ರಿಂದ 2,000 ರೂ. ದಂಡ.
  • ಅಪ್ರಾಪ್ತರಿಗೆ ವಾಹನ ನೀಡುವುದು: ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸಿದರೆ ಪೋಷಕರಿಗೆ 25,000 ರೂ. ದಂಡ ಮತ್ತು ಕಾನೂನು ಕ್ರಮ.

ಸಾರ್ವಜನಿಕರು ದಂಡದ ಭಯಕ್ಕಿಂತ ಜೀವದ ರಕ್ಷಣೆಗೆ ಮೊದಲ ಆದ್ಯತೆ ನೀಡಿ, ಸುರಕ್ಷಿತ ಗುಣಮಟ್ಟದ ಹೆಲ್ಮೆಟ್ ಧರಿಸಿ ಹಾಗೂ ಎಲ್ಲಾ ಸಂಚಾರ ನಿಯಮಗಳನ್ನು ಪಾಲಿಸಬೇಕೆಂದು ಪೊಲೀಸ್ ಮತ್ತು ಸಾರಿಗೆ ಇಲಾಖೆ ಜಂಟಿಯಾಗಿ ಮನವಿ ಮಾಡಿವೆ.

Share it :

Leave a Reply

Your email address will not be published. Required fields are marked *