ಹನೋಯಿ: ದಕ್ಷಿಣ ವಿಯೆಟ್ನಾಂನ ಪ್ರಸಿದ್ಧ ‘ಫೂ ಕ್ವೋಕ್’ (Phu Quoc) ದ್ವೀಪದ ಬಳಿ ಶನಿವಾರ 32 ಭಾರತೀಯ ಪ್ರವಾಸಿಗರು ಹಾಗೂ ನಾಲ್ಕು ಮಂದಿ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್ ಬೋಟ್ (ವೇಗದ ದೋಣಿ) ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ವಿಯೆಟ್ನಾಂನ ಮಾಧ್ಯಮ ಸಂಸ್ಥೆ ‘ವಿಎನ್‌ಎಕ್ಸ್‌ಪ್ರೆಸ್ ಇಂಟರ್ನ್ಯಾಷನಲ್’ ವರದಿ ಮಾಡಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಂಡಿದೆ.
ಅಪಘಾತಕ್ಕೆ ರಫ್ ಸೀ (ರೌದ್ರಾವತಾರ ತಳೆದ ಸಮುದ್ರ) ಕಾರಣ: ಅಪಘಾತ ಸಂಭವಿಸಿದ ಸಮಯದಲ್ಲಿ ಅನ್ ಥೋಯ್ (An Thoi) ಸಮುದ್ರ ತೀರದಲ್ಲಿ ಭಾರಿ ಅಲೆಗಳಿದ್ದು, ಪರಿಸ್ಥಿತಿ ತೀರಾ ಹದಗೆಟ್ಟಿತ್ತು. ಮಳೆ ಬಾರದಿದ್ದರೂ ಸಮುದ್ರ ರೌದ್ರಾವತಾರ ತಳೆದಿತ್ತು. ಈ ಸಂದರ್ಭದಲ್ಲೂ ಪ್ರವಾಸಿ ಬೋಟ್‌ಗಳು ಸಂಚರಿಸುತ್ತಿದ್ದವು ಎನ್ನಲಾಗಿದೆ. ಬೋಟ್ ಉರುಳಿಬಿದ್ದ ತಕ್ಷಣ ಸಮೀಪದಲ್ಲಿದ್ದ ಇತರ ಪ್ರವಾಸಿ ದೋಣಿಗಳು ರಕ್ಷಣೆಗೆ ಧಾವಿಸಿದವು.
ಬೋಟ್‌ನೊಳಗೆ ಸಿಲುಕಿದ್ದ ಪ್ರವಾಸಿಗರು: ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸ್ಥಳೀಯ ಬೋಟ್ ಆಪರೇಟರ್ ಒಬ್ಬರು ಮಾತನಾಡಿ, “ನಾವು ಘಟನಾ ಸ್ಥಳಕ್ಕೆ 5 ನಿಮಿಷಗಳಲ್ಲಿ ತಲುಪಿದೆವು. ಆದರೆ, ಬೋಟ್ ಸಂಪೂರ್ಣವಾಗಿ ಉರುಳಿಬಿದ್ದಿದ್ದರಿಂದ ಅದರ ಒಳಗಡೆ ಹಲವಾರು ಪ್ರವಾಸಿಗರು ಸಿಲುಕಿಕೊಂಡಿದ್ದರು. ಹೀಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರ ಸವಾಲಾಗಿತ್ತು. ಬೋಟ್‌ನಿಂದ ಹೊರತೆಗೆಯಲಾದವರಲ್ಲಿ ಕೆಲವೇ ಕೆಲವು ಜನರು ಮಾತ್ರ ಪ್ರಜ್ಞಾವಸ್ಥೆಯಲ್ಲಿದ್ದರು,” ಎಂದು ದುರಂತದ ತೀವ್ರತೆಯನ್ನು ವಿವರಿಸಿದ್ದಾರೆ.
ಭಾರತೀಯ ರಾಯಭಾರ ಕಚೇರಿ ನೆರವು – ತುರ್ತು ಸಹಾಯವಾಣಿ ಪ್ರಕಟ: ಈ ಭೀಕರ ದುರಂತದ ಬೆನ್ನಲ್ಲೇ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ದುರಂತಕ್ಕೀಡಾದವರ ಕುಟುಂಬಸ್ಥರಿಗೆ ಮಾಹಿತಿ ಮತ್ತು ನೆರವು ನೀಡಲು ಹೋ ಚಿ ಮಿನ್ ಸಿಟಿ ಮತ್ತು ಹನೋಯಿ ನಗರಗಳಲ್ಲಿ ತುರ್ತು ನಿಯಂತ್ರಣ ಕೊಠಡಿಗಳನ್ನು (Control Rooms) ಸ್ಥಾಪಿಸಲಾಗಿದೆ.
ನೆರವಿಗಾಗಿ ಸಾರ್ವಜನಿಕರು ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ:
- ಹೋ ಚಿ ಮಿನ್ ಸಿಟಿ ನಿಯಂತ್ರಣ ಕೊಠಡಿ: +84 36 281 7930, +84 91 552 37 14, +84 33 452 0414
- ಹನೋಯಿ ನಿಯಂತ್ರಣ ಕೊಠಡಿ: +84 91 308 9165
“ದುರಂತದ ನಿಖರ ವಿವರಗಳನ್ನು ಕಲೆಹಾಕಲಾಗುತ್ತಿದ್ದು, ಸ್ಥಳೀಯ ಅಧಿಕಾರಿಗಳು ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ನಾವು ಸಿದ್ಧರಿದ್ದೇವೆ” ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.





