ಮೈಕ್ರೋಸಾಫ್ಟ್, ಇನ್ಫೋಸಿಸ್ ಸೇರಿ ಜಾಗತಿಕ ಸಂಸ್ಥೆಗಳಿಗೆ ಅಮೆರಿಕ ಬಿಗ್ ಶಾಕ್

ವಾಷಿಂಗ್ಟನ್: ಭಾರತದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಸೇರಿದಂತೆ ಜಾಗತಿಕ ಟೆಕ್ ಕಂಪನಿಗಳ ವಿರುದ್ಧ ಅಮೆರಿಕ ಆಡಳಿತವು ದಿಢೀರ್ ಕಠಿಣ ಕ್ರಮಕ್ಕೆ ಮುಂದಾಗಿದೆ. ವಿದೇಶಿ ನೌಕರರಿಗೆ ಖಾಯಂ ವಾಸದ ಹಕ್ಕು ಕಲ್ಪಿಸುವ ಗ್ರೀನ್ ಕಾರ್ಡ್(Green Card) ನೀಡಿಕೆಗೆ ಅಗತ್ಯವಿರುವ ‘ಖಾಯಂ ಕಾರ್ಮಿಕ ಪ್ರಮಾಣೀಕರಣ ಕಾರ್ಯಕ್ರಮ’ದಿಂದ (ಪರ್ಮ್ – PERM) ಇನ್ಫೋಸಿಸ್(Infosys), ಟಿಸಿಎಸ್(TCS), ವಿಪ್ರೋ(Wipro), ಎಚ್‌ಸಿಎಲ್(HCL) ಹಾಗೂ ಕಾಗ್ನಿಜೆಂಟ್ ಮುಂತಾದ ಪ್ರಮುಖ ಹೊರಗುತ್ತಿಗೆ ಸಂಸ್ಥೆಗಳನ್ನು ಅಮೆರಿಕದ ಕಾರ್ಮಿಕ ಇಲಾಖೆ(US Department of Labour) ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ವಿದೇಶಿ ಪ್ರತಿಭೆಗಳನ್ನು ನೇಮಕ ಮಾಡಿಕೊಂಡು ಅವರಿಗೆ ಶಾಶ್ವತ ಪೌರತ್ವ ಕಲ್ಪಿಸಲು ಅಮೆರಿಕ ಸರ್ಕಾರದ (US government) ಅಧಿಕೃತ ಅನುಮತಿ ಪಡೆಯುವ ಪ್ರಕ್ರಿಯೆಯೇ ಪರ್ಮ್ ಆಗಿದೆ. ಆದರೆ ಬಹುರಾಷ್ಟ್ರೀಯ ಕಂಪನಿಗಳು ಸ್ಥಳೀಯ ಅಮೆರಿಕನ್ನರಿಗೆ ಉದ್ಯೋಗಾವಕಾಶ ನೀಡದೆ ಈ ನಿಯಮವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಬಂಧ ಹೇರಿದೆ.

ಮೈಕ್ರೋಸಾಫ್ಟ್, ಅಡೋಬ್ ಮೇಲೂ ಕ್ರಮದ ಬಿಸಿ

ಅಮೆರಿಕದ ಕಾರ್ಮಿಕ ಕಾರ್ಯದರ್ಶಿ ಕೀತ್ ಸಾಂಡರ್ಲಿಂಗ್ ಈ ನಿರ್ಧಾರವನ್ನು ಪ್ರಕಟಿಸಿದ್ದು, ಹೊರಗುತ್ತಿಗೆ ಕಂಪನಿಗಳಲ್ಲದೆ ಮೈಕ್ರೋಸಾಫ್ಟ್ ಹಾಗೂ ಅಡೋಬ್‌ನಂತಹ ದೈತ್ಯ ಸಂಸ್ಥೆಗಳನ್ನೂ ಪರ್ಮ್ ಪ್ರಕ್ರಿಯೆಯಿಂದ ದೂರವಿಡಲಾಗಿದೆ ಎಂದು ತಿಳಿಸಿದ್ದಾರೆ. ದೇಶದಲ್ಲಿ ನಿಯಮಗಳ ಉಲ್ಲಂಘನೆ ವಿಚಾರದಲ್ಲಿ ಮೈಕ್ರೋಸಾಫ್ಟ್ ಮುಂಚೂಣಿಯಲ್ಲಿದೆ ಎಂದು ಅವರು ಆರೋಪಿಸಿದ್ದು, ಪ್ರಸ್ತುತ ಈ ಸಂಸ್ಥೆಗಳು ಫೆಡರಲ್ ತನಿಖೆಗೆ ಒಳಪಟ್ಟಿವೆ ಎಂದಿದ್ದಾರೆ.

ಸ್ಥಳೀಯರಿಗೆ ವಂಚನೆ ಆರೋಪ ಹೊರಿಸಿದ ಜೆ.ಡಿ. ವ್ಯಾನ್ಸ್

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕಂಪನಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “2025 ರಲ್ಲಿ ಸ್ಥಳೀಯ ಪ್ರತಿಭೆಗಳ ಕೊರತೆಯಿದೆ ಎಂದು ಹೇಳಿ ಮೈಕ್ರೋಸಾಫ್ಟ್ ಸುಮಾರು 6,000 ಅಮೆರಿಕನ್ ನೌಕರರನ್ನು ವಜಾಗೊಳಿಸಿತ್ತು. ಆದರೆ ಅದೇ ಅವಧಿಯಲ್ಲಿ 6,000ಕ್ಕೂ ಹೆಚ್ಚು ಎಚ್-1ಬಿ ವೀಸಾಗಳನ್ನು ಪಡೆದು, 3,682 ಪರ್ಮ್ ಅರ್ಜಿಗಳನ್ನು ಸಲ್ಲಿಸಿದೆ. ಇದರಲ್ಲಿ ಸುಮಾರು ಸಾವಿರ ಅರ್ಜಿಗಳು ವಜಾಗೊಂಡಿದ್ದ ಅಮೆರಿಕನ್ನರ ಹುದ್ದೆಗಳಿಗೇ ಸಂಬಂಧಿಸಿದ್ದವು” ಎಂದು ಅಂಕಿಅಂಶ ಸಹಿತ ಕಿಡಿಕಾರಿದ್ದಾರೆ. ಅತ್ಯುತ್ತಮ ಜಾಗತಿಕ ನೈಪುಣ್ಯತೆಯನ್ನು ಕರೆತರಲು ರೂಪಿಸಲಾಗಿದ್ದ ವ್ಯವಸ್ಥೆಯು ಇದೀಗ ಸಂಪೂರ್ಣ ಅಕ್ರಮಗಳಿಂದ ಕೂಡಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಷ್ಠಿತ ವಿವಿಗಳಿಗೂ ತಟ್ಟಿದ ತನಿಖೆಯ ಬಿಸಿ

ಈ ಬಿಕ್ಕಟ್ಟು ಕೇವಲ ತಂತ್ರಜ್ಞಾನ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ. ಹಾರ್ವರ್ಡ್, ಸ್ಟ್ಯಾನ್‌ಫೋರ್ಡ್ ಮತ್ತು ಯೇಲ್ ಸೇರಿದಂತೆ ಒಟ್ಟು 9 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿರುದ್ಧವೂ ತನಿಖೆ ಆರಂಭಿಸಲಾಗಿದೆ. ಕಡಿಮೆ ವೇತನಕ್ಕೆ ವಿದೇಶಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಸ್ಥಳೀಯ ಉದ್ಯೋಗಿಗಳ ಸಂಬಳ ಕಡಿತಕ್ಕೆ ಕಾರಣವಾಗುತ್ತಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಇಲಾಖೆಯಿಂದ ಸಮನ್ಸ್ ಜಾರಿ ಮಾಡಲಾಗಿದೆ.

ಅಮೆರಿಕ ಆಡಳಿತದ ಈ ಹಠಾತ್ ಕ್ರಮದಿಂದಾಗಿ ಭಾರತೀಯ ಟೆಕ್ ಸಂಸ್ಥೆಗಳ ನೇಮಕಾತಿ ನೀತಿಗೆ ಹೊಡೆತ ಬೀಳುವ ಸಾಧ್ಯತೆಯಿದ್ದು, ಅಮೆರಿಕದಲ್ಲಿ ನೆಲೆಸುವ ಕನಸು ಹೊತ್ತಿರುವ ಸಾವಿರಾರು ನುರಿತ ಭಾರತೀಯ ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others