ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರನ್ನು ಯಾರೂ ಜೈಲಿಗೆ ಕಳುಹಿಸಲ್ಲ. ಅವರು ಮಾಡಿದ ತಪ್ಪು ಮತ್ತು ಭ್ರಷ್ಟಾಚಾರಕ್ಕೆ ಜೈಲಿಗೆ ಹೋದರೆ ಯಾರು ಏನೂ ಮಾಡಲು ಆಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್ ಕೊಟ್ಟಿದ್ದಾರೆ.
ಬಿಡದಿಯಲ್ಲಿ ವಿವಾದಿತ ಟೌನ್ಶಿಪ್ ನಿರ್ಮಾಣ ವಿಚಾರವಾಗಿ, ಸಿಎಂ ಡಿಕೆ ಶಿವಕುಮಾರ್ ಹೇಳಿಕೆಯೊಂದನ್ನು ನೀಡಿದ್ದರು. ನಾನು ಸಿಎಂ ಆಗಿದ್ದರಿಂದ ತಡೆದುಕೊಳ್ಳುವುದಕ್ಕೆ ಅವರಿಗೆ ಆಗುತ್ತಿಲ್ಲ. ಜೈಲಿಗೆ ಕಳುಹಿಸಲು ಎಷ್ಟು ಸಂಚು ನಡೀತು ಎಂದು ಮುಂದೆ ಹೇಳ್ತೇನೆ. ಜೈಲು ನನಗೆ ಹೊಸದೇನಲ್ಲ ಎಂದು ತಿಳಿಸಿದ್ದರು. ಈ ವಿಚಾರವಾಗಿ ಈಗ ಡಿಕೆಶಿ ಅವರ ಮಾತಿಗೆ ಈಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಪ್ರತಿಕ್ರಿಯಿಸಿದ್ದಾರೆ.
ಮೂರು ವರ್ಷಗಳಲ್ಲಿ ಸಿದ್ದರಾಮಯ್ಯನವರಿಗೆ ಟೌನ್ಶಿಪ್ ಬಗ್ಗೆ ಇರದ ಆಸಕ್ತಿ ನಿಮಗೆ ಯಾಕೆ? ಇದರ ಅರ್ಥ ಏನೋ ಡೀಲ್ ಆಗಿದೆ ಅಂತಾ ಅಲ್ವಾ? ಇದರ ಬಗ್ಗೆ ಯಾಕೆ ಉತ್ತರ ಕೊಡುತ್ತಿಲ್ಲ? ದೇವೇಗೌಡರ ಆರೋಪಕ್ಕೆ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ಕೊಡುವುದು ಬಿಟ್ಟು ಅವರ ಮೇಲೆ ರೇಗಾಡುತ್ತಿದ್ದಾರೆ. ಮನುಷ್ಯ ಏನಾದರೂ ತಪ್ಪು ಮಾಡಿ ಅದನ್ನು ಸಮರ್ಥನೆ ಮಾಡಿಲಿಕ್ಕೆ ಆಗದಿದ್ದಾಗ ಈ ರೀತಿ ರೇಗಾಡುತ್ತಾನೆ ಎಂದು ಹೇಳಿದ್ದಾರೆ.
ಬಲವಂತವಾಗಿ ಜಮೀನು ಕಸಿದುಕೊಂಡು ಟೌನ್ಶಿಪ್ ಮಾಡುವ ಬದಲು, ರೈತರ ಮನವೊಲಿಸಬೇಕು. ಅದನ್ನು ಬಿಟ್ಟು ರೈತರು ತಿರುಗಿ ಬಿದ್ದ ಮೇಲೆ ಒತ್ತಾಯ ಮಾಡಿಲ್ಲ ಅನ್ನೋದಲ್ಲ. ಮೊದಲೇ ಯಾಕೆ ರೈತರ ಜೊತೆ ಮಾತನಾಡಿಲ್ಲ? ಅನೇಕರು ಅನೇಕ ರೀತಿ ಸಲಹೆ ಕೊಟ್ಟರೂ ಯಾಕೆ ಸ್ವೀಕಾರ ಮಾಡಿಲ್ಲ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಅಂದರೆ ನೀವೇನೂ ಸರ್ವಾಧಿಕಾರಿಗಳಲ್ಲ, ರಾಜ್ಯದ ಮಹಾರಾಜರಲ್ಲ. ಈ ಮಾತನ್ನು ಅರ್ಥ ಮಾಡಿಕೊಂಡು ತಮ್ಮ ನಡೆ ತೋರಿಸಬೇಕು. ಕುಮಾರಸ್ವಾಮಿ ಅವರು ಮಾಡಿರುವ ಭ್ರಷ್ಟಾಚಾರ ಆರೋಪಗಳ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ವಿಶ್ಲೇಷಿಸಿದ್ದಾರೆ.
ಯಾರೇ ಆದರೂ ತಪ್ಪು ಮಾಡಿದರೆ ಜೈಲಿಗೆ ಹೋಗುತ್ತಾರೆ. ಇದರ ಅರ್ಥ ನಾವು ಅವರನ್ನು ಜೈಲಿಗೆ ಕಳುಹಿಸುತ್ತೇವೆ ಅಂತ ಅಲ್ಲ. ಜೈಲಿನ ಬಗ್ಗೆ ಈಗ ಯಾಕೆ ಮಾತಾಡುತ್ತಿದ್ದೀರಿ? ನೀವು ಏನಾದರೂ ತಪ್ಪು ಮಾಡಿದ್ದೀರಾ? ಇದೆಲ್ಲಾ ಅನುಕಂಪ ತೆಗೆದುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ಜೋಶಿ ಆರೋಪಿಸಿದ್ದಾರೆ.
ಇನ್ನು ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿ,ದೇಶದ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಳೆದ 25 ದಿನಗಳಿಂದ ಎಲ್ಲಿದ್ದಾರೆ ಎಂಬುದನ್ನು ದೇಶದ ಜನತೆಗೆ ತಿಳಿಸಿ ಎಂದೂ ಕಾಂಗ್ರೆಸ್ನ ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.
ನಾವು ಎಲ್ಲೇ ಹೋದರು ಹೇಳುತ್ತೇವೆ. ನಾನು ದಾವೋಸ್ಗೆ ಹೋಗಿದ್ದೆ, ಕಿರಣ್ ರಿಜಿಜು ಕತಾರ್ಗೆ ಹೋಗಿದ್ದರು. ಆ ರೀತಿ ಇವರು ಯಾಕೆ ಹೇಳುವುದಿಲ್ಲ? ವಿಪಕ್ಷ ನಾಯಕರಾಗಿರುವ ರಾಹುಲ್ ಎಲ್ಲಾ ಕೆಲಸ ಸರಿಸಿ ಎಲ್ಲಿಗೆ ಹೋಗಿದ್ದಾರೆ? ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.





