ಅಧಿಕಾರ ಕಳೆದುಕೊಂಡ ಮೇಲೂ ನನ್ನ ಮಾನಹರಣ ಮಾಡುವ ಈ ಹೊಲಸು ರಾಜಕೀಯ ಯಾಕೆ? : ಸಿದ್ದು ಸಿಡಿಮಿಡಿ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಕಾರ್ಯಾಚರಣೆ ವಿವಾದ ಕಾಂಗ್ರೆಸ್ ಹೈಕಮಾಂಡ್ ಅಂಗಳಕ್ಕೆ ಇದೀಗ ತಲುಪಿದೆ.

ಸೋಮವಾರ ನವದೆಹಲಿಯಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಟಿಂಗ್ ವಿಚಾರ ಪ್ರಸ್ತಾಪಿಸಿ ಖಂಡತುಂಡವಾದ ಮಾತುಗಳನ್ನಾಡಿದ್ದಾರೆ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

ನಕಲಿ ವಿಡಿಯೋ ಹಿಂದಿರುವ ಸೂತ್ರಧಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದರೆ ಮುಂದೆ ಚುನಾವಣಾ ಪ್ರಚಾರಕ್ಕೂ ಬರುವುದಿಲ್ಲ ಎಂದು ನೇರವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನುವ ಗುಸು ಗುಸು ಮಾತು ರಾಜ್ಯದಲ್ಲಿ ಬೆಳಕಿಗೆ ಬಂದಿದೆ.

ರಾಹುಲ್ ಗಾಂಧಿ ಭೇಟಿ ನಂತರ ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸರಿಸುಮಾರು 45 ನಿಮಿಷಗಳ ಕಾಲ ರಾಹುಲ್ ಗಾಂಧಿ ಜತೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಅಧಿಕಾರ ತ್ಯಾಗ ಮಾಡಿದ ನಂತರವೂ ತಮ್ಮ ವಿರುದ್ಧ ಷಡ್ಯಂತ್ರ ಮುಂದುವರೆದಿರುವುದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ ಎಂಬುದು ಗೊತ್ತಾಗಿದೆ ಎಂದಿದ್ದಾರೆ.

ಪುತ್ರ, ಶಾಸಕ ಡಾ. ಯತೀಂದ್ರ ಹಾಗೂ ಆಪ್ತ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಜೊತೆ ತೆರಳಿದ್ದ ಸಿದ್ದರಾಮಯ್ಯ, ಸ್ಟಿಂಗ್ ಪ್ರಕರಣದ ಇಂಚಿಂಚು ಮಾಹಿತಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ.

‘‘ಸ್ಟಿಂಗ್ ವಿಚಾರವಾಗಿ ಚರ್ಚೆ ಮಾಡಿಲ್ಲ. ರಾಜ್ಯದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇನೆ. ಪಕ್ಷದ ಬೆಳವಣಿಗೆಗಳು ಮತ್ತು ರಾಜಕೀಯ ವಿದ್ಯಮಾನಗಳು ಸೇರದಂತೆ ಪಕ್ಷ ಸಂಘಟನೆ ಬಗ್ಗೆ ರಾಹುಲ್ ಗಾಂಧಿ ಜೊತೆ ಮಾತುಕತೆ ನಡೆಸಿದ್ದೇನೆ’’ ಎಂದು ಹೇಳಿದ್ದರು. ಆದಾಗ್ಯೂ, ಅವರು ಸ್ಟಿಂಗ್ ಬಗ್ಗೆ ಖಂಡತುಂಡವಾಗಿ ಕೆಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಅಲ್ಲದೆ, ನಕಲಿ ವಿಡಿಯೋವನ್ನು ಸೋರಿಕೆ ಮಾಡಿದವರು ಯಾರು ಎಂಬುದು ನನಗೆ ಚೆನ್ನಾಗಿಯೇ ಗೊತ್ತಿದೆ ಎಂದು ಹೇಳಿರುವ ಅವರು, ‘‘ನನ್ನ ವ್ಯಕ್ತಿತ್ವವನ್ನೇ ನಾಶ ಮಾಡಲು ಪಿತೂರಿ ರೂಪಿಸಿದ ಸೂತ್ರಧಾರಿ ಯಾರು? ಅಧಿಕಾರ ಕಳೆದುಕೊಂಡ ಮೇಲೂ ನನ್ನ ಮಾನಹರಣ ಮಾಡುವ ಈ ಹೊಲಸು ರಾಜಕೀಯ ಯಾಕೆ? ರಾಜ್ಯದಲ್ಲಿ ನಮ್ಮದೇ ಆಡಳಿತವಿದ್ದರೂ ಕಿಡಿಗೇಡಿಗಳ ಈ ನಕಲಿ ಜಾಲವನ್ನು ಸರ್ಕಾರ ಮಟ್ಟಹಾಕಿಲ್ಲ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ನಿಮ್ಮ ಮಾತಿಗೆ ಗೌರವ ಕೊಟ್ಟು ಅಧಿಕಾರ ತ್ಯಾಗ ಮಾಡಿದ್ದೇನೆ. ಭವಿಷ್ಯದಲ್ಲಿ ಚುನಾವಣಾ ಕಣಕ್ಕೂ ಇಳಿಯಲ್ಲ ಎಂದು ಬಹಿರಂಗವಾಗಿ ಹೇಳಿದ್ದೇನೆ. ನಾನು ಮತ್ತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಹೀಗಿದ್ದರೂ ನನ್ನನ್ನು ಮುಗಿಸಲು ಸಂಚು ರೂಪಿಸುತ್ತಿರುವ ಆ ಕಾಣದ ಕೈಗಳು ಯಾವುವು’’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Share it :

Leave a Reply

Your email address will not be published. Required fields are marked *