ಝೆಲೆನ್‌ಸ್ಕಿ ರಷ್ಯಾದಲ್ಲಿ ಡೀಸೆಲ್ ಇಂಧನ ಘಟಕಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು : ಡೊನಾಲ್ಡ್ ಟ್ರಂಪ್

ಡೂನ್‌ಬೆಗ್: ಝೆಲೆನ್‌ಸ್ಕಿ ರಷ್ಯಾದಲ್ಲಿ ಡೀಸೆಲ್ ಇಂಧನ ಘಟಕಗಳನ್ನು ಗುರಿಯಾಗಿಸುವುದನ್ನು ತಕ್ಷಣ ನಿಲ್ಲಿಸಬೇಕು. ಬೇರೆ ಸೇನಾ ನೆಲೆಗಳ ಮೇಲೆ ದಾಳಿ ಮಾಡಲಿ, ಆದರೆ ತೈಲ ಸಂಸ್ಕರಣಾಗಾರಗಳನ್ನಲ್ಲ. ಇದು ಜಗತ್ತಿಗೆ ತೀವ್ರ ಹಾನಿ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ರಷ್ಯಾದ ತೈಲ ಸಂಸ್ಕರಣಾಗಾರಗಳನ್ನು ಗುರಿಯಾಗಿಸಿಕೊಂಡು ನಿರಂತರ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸುತ್ತಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಮತ್ತು ಕ್ಸಿ ಅವರ ಶಾಂತಿ ಪ್ರಸ್ತಾಪವನ್ನು ಪುಟಿನ್ ಸ್ವಾಗತಿಸಿದ್ದಾರೆ. ಮಾತುಕತೆಯ ಸಾಧ್ಯತೆಯನ್ನು ರಷ್ಯಾ ತಳ್ಳಿಹಾಕಿಲ್ಲ, ಬಹುಶಃ ಅಕ್ಟೋಬರ್‌ನಲ್ಲಿ ಶಾಂತಿ ಮಾತುಕತೆಗಳು ಪುನರಾರಂಭವಾಗಬಹುದು ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಉಕ್ರೇನ್‌ಗೆ ನಿರಂತರವಾಗಿ ಶಸ್ತ್ರಾಸ್ತ್ರ ಬೆಂಬಲ ನೀಡುತ್ತಿರುವ ನಡುವೆಯೂ, ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ದೇಶೀಯವಾಗಿ ಹಣದುಬ್ಬರ ನಿಯಂತ್ರಣಕ್ಕೆ ತರುವ ಒತ್ತಡದಲ್ಲಿರುವ ಅಮೆರಿಕ, ಇಂಧನ ಮೂಲಸೌಕರ್ಯಗಳ ಮೇಲಿನ ದಾಳಿಯನ್ನು ಕಟ್ಟುನಿಟ್ಟಾಗಿ ವಿರೋಧಿಸುತ್ತಿದೆ.

ನವದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿದ್ದು, ಯುದ್ಧವನ್ನು ಕೊನೆಗೊಳಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

ಇರಾನ್ ಮತ್ತು ಅಮೆರಿಕ ಸಂಘರ್ಷದ ನಡುವೆ ಹಾರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿಯಾಗಿದ್ದು, ಈಗಾಗಲೇ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿವೆ. ವಿಶ್ವದ ಶೇ. 20 ರಷ್ಟು ತೈಲ ಈ ಮಾರ್ಗದಲ್ಲೇ ಸಾಗಬೇಕಿದೆ. ಇಂತಹ ಸೂಕ್ಷ್ಮ ಸಮಯದಲ್ಲಿ ಉಕ್ರೇನ್ ರಷ್ಯಾದ ತೈಲ ರಿಫೈನರಿಗಳನ್ನು ನಾಶಪಡಿಸುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಟ್ರಂಪ್ ವಿಶ್ಲೇಷಿಸಿದ್ದಾರೆ.

ಉಕ್ರೇನ್ ನಡೆಸುತ್ತಿರುವ ಈ ದಾಳಿಗಳಿಂದಾಗಿ ಜಾಗತಿಕ ಮಟ್ಟದಲ್ಲಿ ಡೀಸೆಲ್ ಮತ್ತು ಕಚ್ಚಾ ತೈಲದ ಭಾರಿ ಕೊರತೆ ಉಂಟಾಗುತ್ತಿದ್ದು, ಇದು ಇಡೀ ವಿಶ್ವದ ಆರ್ಥಿಕತೆಗೆ ಪೆಟ್ಟು ನೀಡುತ್ತಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಯುರೋಪ್ ಯುದ್ಧವು 5ನೇ ವರ್ಷಕ್ಕೆ ಕಾಲಿಟ್ಟಿರುವ ಹೊತ್ತಿನಲ್ಲೇ ಟ್ರಂಪ್ ಅವರು ಝೆಲೆನ್‌ಸ್ಕಿಯನ್ನು ಈ ರೀತಿ ನೇರವಾಗಿ ತರಾಟೆಗೆ ತೆಗೆದುಕೊಂಡಿರುವುದು ತೀವ್ರ ಸಂಚಲನ ಸೃಷ್ಟಿಸಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others