10 ಸೆಪ್ಟೆಂಬರ್ 1780: ಇತಿಹಾಸ ಬದಲಿಸಿದ ಅಸ್ತ್ರ ಮೈಸೂರು ರಾಕೆಟ್ – ಮಾಹಿತಿ ಇಲ್ಲಿದೆ ನೋಡಿ

ಕಾಂಚೀಪುರಂನಿಂದ 12 ಕಿಲೋಮೀಟರ್ ದೂರದ ಪೊಲ್ಲಿಲೂರು. ಇಂದು ಅಲ್ಲಿ ಭತ್ತದ ಗದ್ದೆ ಇದೆ. ಆದರೆ 245 ವರ್ಷದ ಹಿಂದೆ, 10 ಸೆಪ್ಟೆಂಬರ್ 1780ರ ಮಧ್ಯಾಹ್ನ, ಅಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅತ್ಯಂತ ದೊಡ್ಡ ಅವಮಾನ ನಡೆದಿತ್ತು. ಇತಿಹಾಸದಲ್ಲಿ ಇದನ್ನು ಬ್ಯಾಟಲ್ ಆಫ್ ಪೊಲ್ಲಿಲೂರ್ ಎಂದು ಕರೆಯಲಾಗುತ್ತದೆ. ಇದು ಎರಡನೇ ಆಂಗ್ಲೋ-ಮೈಸೂರು ಯುದ್ಧದ ತಿರುವು ಮಾತ್ರವಲ್ಲ, ಜಗತ್ತಿನ ಯುದ್ಧ ತಂತ್ರಜ್ಞಾನದ ದಿಕ್ಕನ್ನೇ ಬದಲಿಸಿದ ದಿನ.

ಯುದ್ಧಕ್ಕೆ ಮೊದಲು ಮೂರು ತಪ್ಪುಗಳು:1780ರ ಜುಲೈನಲ್ಲಿ ಹೈದರಾಲಿ 80,000 ಸೈನ್ಯದೊಂದಿಗೆ ಪೂರ್ವ ಘಟ್ಟ ಇಳಿದು ಕರ್ನಾಟಕ ಪ್ರಾಂತ್ಯವನ್ನು ಸುಡುತ್ತಾ ಬಂದರು. ಆರ್ಕಾಟ್ ಕೋಟೆಗೆ ಮುತ್ತಿಗೆ ಹಾಕಿದರು. ಮದ್ರಾಸಿನಲ್ಲಿದ್ದ ಈಸ್ಟ್ ಇಂಡಿಯಾ ಕಂಪನಿಗೆ ಇದು ಆಘಾತವಾಗಿದ್ದು,ಕಂಪನಿ ಎರಡು ತಪ್ಪು ಮಾಡಿತು.ಮೊದಲನೆಯದು ಹೈದರಾಲಿಯನ್ನು ಹಗುರವಾಗಿ ಕಂಡಿದ್ದು. ಅವರು ಮರಾಠರು, ನಿಜಾಮ ಮತ್ತು ಫ್ರೆಂಚರನ್ನು ಒಟ್ಟುಗೂಡಿಸಿ ಮಹಾ ಮೈತ್ರಿ ಮಾಡಿದ್ದಾರೆಂದು ಬ್ರಿಟಿಷ್ ಗುಪ್ತಚರ ಇಲಾಖೆಗೆ ಗೊತ್ತೇ ಆಗಿರಲಿಲ್ಲ.

ಎರಡನೆಯದು ತಮ್ಮ ಸೈನ್ಯವನ್ನು ಎರಡು ಭಾಗ ಮಾಡಿದ್ದು. ಗುಂಟೂರಿನಿಂದ ಕರ್ನಲ್ ವಿಲಿಯಂ ಬೈಲಿ 3,853 ಸೈನಿಕರೊಂದಿಗೆ ಬರುತ್ತಿದ್ದರು. ಕಾಂಜೀವರಂನಲ್ಲಿ ಕರ್ನಲ್ ಹೆಕ್ಟರ್ ಮುನ್ರೋ 5,203 ಸೈನಿಕರೊಂದಿಗೆ ಕಾಯುತ್ತಿದ್ದರು. ಇಬ್ಬರೂ ಒಂದಾದರೆ ಹೈದರಾಲಿಯನ್ನು ಸೋಲಿಸಬಹುದು ಎಂಬುದು ಅವರ ಲೆಕ್ಕಚಾರವಾಗಿತ್ತು.ಹೈದರಾಲಿ ಈ ಲೆಕ್ಕವನ್ನು ಮೊದಲೇ ಓದಿದ್ದರು. ಅವರು ತಮ್ಮ ಮಗ ಟಿಪ್ಪು ಸುಲ್ತಾನ್, ಆಗ 30 ವರ್ಷದ ಯುವ ಸೇನಾನಾಯಕ, ಮತ್ತು 11,000 ಆಯ್ದ ಸೈನ್ಯವನ್ನು ಕಳಿಸಿ ಹೇಳಿದರು “ಬೈಲಿ ಮುನ್ರೋ ಜೊತೆ ಸೇರಬಾರದು. ಅವನನ್ನು ಪೊಳ್ಳಿಲೂರಿನಲ್ಲಿ ಬಂಧಿಸುವ ಆದೇಶವಿತ್ತು”

10 ಸೆಪ್ಟೆಂಬರ್ ಬೆಳಿಗ್ಗೆ 9 ಗಂಟೆ: ಬೈಲಿಯ ಪಡೆ ಪೊಳ್ಳಿಲೂರಿನ ತೆರೆದ ಮೈದಾನಕ್ಕೆ ಬಂದಿತು. ಅವರ ಪಡೆ ವೃತ್ತಿಪರವಾಗಿತ್ತು – ಎರಡು ಕಂಪನಿ ಯುರೋಪಿಯನ್ ಪದಾತಿ, 2 ಫಿರಂಗಿ ದಳ, 5 ಬೆಟಾಲಿಯನ್ ಸಿಪಾಯಿ. ಅವರು ಯುರೋಪಿಯನ್ ಶಿಸ್ತಿನಂತೆ ಉದ್ದನೆಯ ಚೌಕಾಕಾರದ ವ್ಯೂಹ ರಚಿಸಿದರು. ಈ ವ್ಯೂಹವನ್ನು ಅಶ್ವದಳ ಭೇದಿಸಲು ಸಾಧ್ಯವಿಲ್ಲ.ಬೆಳಿಗ್ಗೆ 9 ಗಂಟೆಗೆ ಟಿಪ್ಪುವಿನ ಫಿರಂಗಿಗಳು ಗುಡುಗಿದವು. ಬೈಲಿ ಮುಂದೆ ಸಾಗಲು ಯತ್ನಿಸಿದ. ಆಗಲೇ ಮೈಸೂರು ಅಶ್ವದಳ ಎರಡೂ ಬದಿಯಿಂದ ದಾಳಿ ಮಾಡಿತು.ನಿಜವಾದ ಆಘಾತ ಮಧ್ಯಾಹ್ನ 2 ಗಂಟೆಗೆ ಆಯಿತು. ಟಿಪ್ಪುವಿನ ಬಳಿ ಇದ್ದ ವಿಶೇಷ ಪಡೆ ರಾಕೆಟ್ ಪಡೆ ಮುಂದೆ ಬಂತು.

ಇತಿಹಾಸ ಬದಲಿಸಿದ ಅಸ್ತ್ರ ಮೈಸೂರು ರಾಕೆಟ್: ಇದು ಸಾಮಾನ್ಯ ಪಟಾಕಿ ಅಲ್ಲ. ಬ್ರಿಟಿಷ್ ದಾಖಲೆಗಳಲ್ಲಿ ಇದನ್ನು “ಮೈಸೂರಿನ್ ರಾಕೆಟ್ಸ್ ” ಎಂದು ದಾಖಲಿಸಲಾಗಿದೆ. ಇದರ ವೈಜ್ಞಾನಿಕ ವಿವರ ನೋಡಿ ಯುರೋಪಿನ ರಾಕೆಟ್ ಬಿದಿರಿನ ಕೊಳವೆ, 300 ಮೀಟರ್ ಹೋಗಿ ಒಡೆದುಹೋಗುತ್ತಿತ್ತು. ಆದರೆ ಮೈಸೂರು ರಾಕೆಟ್ ಕಬ್ಬಿಣದ ಕೊಳವೆ. 15 ಸೆಂ.ಮೀ ನಿಂದ 35 ಸೆಂ.ಮೀ ಉದ್ದ, 3.5 ಸೆಂ.ಮೀ ನಿಂದ 7.5 ಸೆಂ.ಮೀ ವ್ಯಾಸ. ಒಳಗೆ 75% ಭಾಗ ಸೋರೆ ಉಪ್ಪು, 15% ಭಾಗ ಇದ್ದಿಲು, 10% ಭಾಗ ಗಂಧಕದ ಜೊತೆಗೆ ಕಬ್ಬಿಣದ ಪುಡಿ ಮಿಶ್ರಿತ ಘನ ಇಂಧನ. ಕೆಳಗೆ ಸಣ್ಣ ನಳಿಕೆ, ಹಿಂದೆ 3 ಮೀಟರ್ ಉದ್ದದ ಬಿದಿರಿನ ಕೋಲು.ಈ ಕಬ್ಬಿಣದ ಕೊಳವೆ 150 ಪ್ರತಿ ಚದರ ಇಂಚಿಗೆ ಎಷ್ಟು ಪೌಂಡ್ ಒತ್ತಡ ತಾಳುತ್ತಿತ್ತು. ಆದ್ದರಿಂದ ದಹನ ನಿಧಾನವಾಗಿ 7 ಸೆಕೆಂಡು ನಡೆಯುತ್ತಿತ್ತು. ರೇಂಜ್ 1.5 ರಿಂದ 2 ಕಿಲೋಮೀಟರ್. ಮುಂದೆ ಚೂಪಾದ ಕಬ್ಬಿಣದ ಮೊನೆ, ಕೆಲವಕ್ಕೆ ಬೆಂಕಿ ಹಚ್ಚುವ ಬಟ್ಟೆ.ಟಿಪ್ಪುವಿನ ತಂತ್ರ ಅದ್ಭುತವಾಗಿತ್ತು. ಅವನು ಸೈನಿಕರ ಮೇಲೆ ರಾಕೆಟ್ ಹೊಡೆಯಲಿಲ್ಲ. ಅವನು ಬೈಲಿಯ ಮದ್ದಿನ ಬಂಡಿಗಳ ಮೇಲೆ ಹೊಡೆದ. ಒಂದು ಬಂಡಿ ಸ್ಫೋಟವಾದರೆ ಸರಪಳಿ ಸ್ಫೋಟ. ಬ್ರಿಟಿಷ್ ವರದಿಯೇ ಹೇಳುತ್ತದೆ “ದೇರ್ ರಾಕೆಟ್ಸ್ ಸೆಟ್ ಅವರ್ ತುಂಬಿಲ್ಸ್ ಆನ್ ಫೈರ್,ಅವರ್ ಅಮ್ಮುನಿಷನ್ ಬ್ಲೆವ ಅಪ್.”ಮದ್ದು ಇಲ್ಲದೆ ಚೌಕಾಕಾರದ ವ್ಯೂಹ ನಿಷ್ಪ್ರಯೋಜಕ. ಹೊಗೆ, ಬೆಂಕಿ, ಕುದುರೆಗಳ ಆತಂಕ. ಈ ಗೊಂದಲದಲ್ಲಿ ಹೈದರಾಲಿ ಸ್ವತಃ ಕಾಂಚೀಪುರಂನಿಂದ ಬಂದು ದಾಳಿ ನೇತೃತ್ವ ವಹಿಸಿದರು.

ಸಂಜೆ 5 ಗಂಟೆ ಶರಣಾಗತಿ ಸಂಜೆ ವೇಳೆಗೆ ಎಲ್ಲ ಮುಗಿದಿತ್ತು. ಬ್ರಿಟಿಷ್ ಸೈನ್ಯದ 336 ಜನ ಸ್ಥಳದಲ್ಲೇ ಸತ್ತರು ಎಂದು ಬ್ರಿಟಿಷ್ ದಾಖಲೆ ಹೇಳಿದರೆ, ಫ್ರೆಂಚ್ ಅಧಿಕಾರಿ ಬೆನೋಯಿಟ್ ದಿ ಬೋಯ್ನೆ ಪ್ರಕಾರ 2,016 ಜನ ಸತ್ತರು, 1,000 ಜನ ಸೆರೆಯಾದರು. ಕರ್ನಲ್ ಬೈಲಿ ಸೇರಿದಂತೆ 200 ಸೈನಿಕರು, 50 ಅಧಿಕಾರಿಗಳು ಮಾತ್ರ ಜೀವಂತ ಸೆರೆ ಸಿಕ್ಕಿದರು. ಅವರನ್ನು ಶ್ರೀರಂಗಪಟ್ಟಣದ ಕತ್ತಲ ಕೋಣೆಗೆ ಕರೆದೊಯ್ಯಲಾಯಿತು.ಈ ಸುದ್ದಿ ಕೇಳಿ ಕಾಂಜೀವರಂನಲ್ಲಿದ್ದ ಮುನ್ರೋ ತನ್ನ ಭಾರೀ ಫಿರಂಗಿಗಳನ್ನು ಕಾಂಚೀಪುರಂ ಕೆರೆಯಲ್ಲಿ ಎಸೆದು, ಬಟ್ಟೆ ಬರೆ ಬಿಟ್ಟು ಮದ್ರಾಸಿಗೆ ಓಡಿದ. ಮದ್ರಾಸಿನಲ್ಲಿ ಜನ ಬ್ರಿಟಿಷರು ಭಾರತ ಬಿಟ್ಟು ಹೋಗುತ್ತಾರೆ ಎಂದುಕೊಂಡರು.ವಿಲಿಯಂ ಹಿಕಿ ಎಂಬ ಬ್ರಿಟಿಷ್ ಅಧಿಕಾರಿ ಬರೆದ “ಇಟ್ ವಾಸ್ ದಿ ಮೋಸ್ಟ ಕ್ರುಶ್ಯಿಂಗ್ ಲಾಸ್ ದಿ ಕಂಪನಿ ಎವರ್ ಸಫ್ರ್ಡ್ ಇನ್ ಇಂಡಿಯಾ.”

ಮೂರು ಐತಿಹಾಸಿಕ ಆಧಾರಗಳು: ಫ್ರೆಂಚ್ ದಾಖಲೆ:ಟಿಪ್ಪು ಜೊತೆಗಿದ್ದ ಫ್ರೆಂಚ್ ಅಧಿಕಾರಿ ಲಾಲಿ ಬರೆದ ಪತ್ರದಲ್ಲಿ, “ರಾಕೆಟ್‌ಗಳು ಶತ್ರುಗಳ ಹೃದಯದಲ್ಲಿ ಭಯ ಹುಟ್ಟಿಸಿದವು, ಅವು ಹಾರುವ ಪ್ಲೇಗ್ ಇದ್ದಂತೆ” ಎಂದು ಬರೆದಿದ್ದಾರೆ.

ಬ್ರಿಟಿಷ್ ದಾಖಲೆ: ವಾರ್ ಆಫೀಸ್ ಪತ್ರದಲ್ಲಿ, “ದಿ ಎನಮಿಷ್ ರಾಕೆಟ್ಸ್ ಕಾಸೆಡ್ ಗ್ರೇಟ್ ಡಿಸೋರ್ಡರ್” ಎಂದು ಇದೆ.
ಮೈಸೂರು ದಾಖಲೆ: ನಿಶಾನ್-ಎ-ಹೈದರಿಯಲ್ಲಿ ಮಿರ್ ಹುಸೇನ್ ಕಿರ್ಮಾನಿ ಬರೆದಂತೆ, ಹೈದರಾಲಿ ಈ ಗೆಲುವಿನ ನಂತರ ಆರ್ಕಾಟ್‌ನ್ನು 3 ನವೆಂಬರ್ 1780ರಂದು ವಶಪಡಿಸಿಕೊಂಡರು.

ಇದರಿಂದ ಜಗತ್ತು ಕಲಿತದ್ದೇನು? :ಪೊಲ್ಲಿಲೂರ್ ಗೆಲುವಿನ ನಂತರ ಹೈದರಾಲಿ ಒಂದು ತಪ್ಪು ಮಾಡಿದರು. ಅವರು ನೇರವಾಗಿ ಮದ್ರಾಸ್ ಮೇಲೆ ದಾಳಿ ಮಾಡದೆ, ಮತ್ತೆ ಆರ್ಕಾಟ್ ಮುತ್ತಿಗೆಗೆ ಹೋದರು. ಈ 2 ತಿಂಗಳ ಅವಕಾಶದಲ್ಲಿ ಬ್ರಿಟನ್ ಸರ್ ಐರ್ ಕೂಟ್ ನೇತೃತ್ವದಲ್ಲಿ ದೊಡ್ಡ ಸೈನ್ಯ ಕಳುಹಿಸಿತು. 1781ರಲ್ಲಿ ಅದೇ ಪೊಲ್ಲಿಲೂರಿನಲ್ಲಿ ಎರಡನೇ ಕದನ ನಡೆದು ಬ್ರಿಟಿಷರು ಸೇಡು ತೀರಿಸಿಕೊಂಡರು. ಇತಿಹಾಸಕಾರರು ಹೇಳುತ್ತಾರೆ, ಹೈದರಾಲಿ ಆ ದಿನ ಮದ್ರಾಸಿಗೆ ಹೋಗಿದ್ದರೆ ಭಾರತದ ಇತಿಹಾಸವೇ ಬದಲಾಗುತ್ತಿತ್ತು.

ಆದರೆ ರಾಕೆಟ್‌ನ ಕಥೆ ಮುಗಿಯಲಿಲ್ಲ.1799ರಲ್ಲಿ ಶ್ರೀರಂಗಪಟ್ಟಣ ಬಿದ್ದಾಗ ಬ್ರಿಟಿಷರಿಗೆ 600 ರಾಕೆಟ್‌ಗಳು ಸಿಕ್ಕವು. ಅವುಗಳನ್ನು ಲಂಡನ್‌ಗೆ ಕೊಂಡೊಯ್ದು ಅಧ್ಯಯನ ಮಾಡಿ ವಿಲಿಯಂ ಕಾಂಗ್ರೀವ್ 1805ರಲ್ಲಿ ಕಾಂಗ್ರೆವ್ ರಾಕೆಟ್ ಮಾಡಿದ. ಅದೇ ರಾಕೆಟ್ 1812ರಲ್ಲಿ ಅಮೆರಿಕದ ವಿರುದ್ಧ, 1815ರಲ್ಲಿ ವಾಟರ್ಲೂನಲ್ಲಿ ನೆಪೋಲಿಯನ್ ವಿರುದ್ಧ ಬಳಕೆಯಾಯಿತು. ಅಮೆರಿಕದ ರಾಷ್ಟ್ರಗೀತೆಯಲ್ಲಿ “ರಾಕೆಟ್ಸ್ ರೆಡ್ ಗ್ಲಾರ್ “ಎಂದರೆ ಅದೇ ಮೈಸೂರು ರಾಕೆಟ್‌.
ಟಿಪ್ಪು ಆ ಗೆಲುವಿನ ನೆನಪಿಗೆ 32 ಅಡಿ ಉದ್ದದ ಬೃಹತ್ ವರ್ಣಚಿತ್ರ ಮಾಡಿಸಿದ್ದರು. ಅದು ಇಂದು ಲಂಡನ್‌ನ ವಿಕ್ಟೋರಿಯಾ ಮ್ಯೂಸಿಯಂನಲ್ಲಿದೆ.ಪೊಲ್ಲಿಲೂರ್ ಹೇಳುವ ಪಾಠ ತಂತ್ರಜ್ಞಾನವೇ ನಿಜವಾದ ಸೇನೆ. ಕಬ್ಬಿಣದ ಕೊಳವೆಯೊಂದರಿಂದ ಸಾಮ್ರಾಜ್ಯವನ್ನೇ ಅಲುಗಾಡಿಸಬಹುದು. ಆ ಕಬ್ಬಿಣ ಇಂದು ಇಸ್ರೋದ ಧ್ರುವೀಯ ಉಪಗ್ರಹ ಉಡಾವಣಾ ವಾಹನ ಆಗಿ ಚಂದ್ರನತ್ತ ಹಾರುತ್ತಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others