ನಾಗಾಲ್ಯಾಂಡ್‌ನಲ್ಲಿ ನಕಲಿ ಮದ್ಯ ಸೇವಿಸಿ 19 ಮಂದಿ ಸಾವು

ನಾಗಾಲ್ಯಾಂಡ್ : ಮದ್ಯ ಮಾರಾಟ ಮತ್ತು ಸೇವನೆ ಸಂಪೂರ್ಣ ನಿಷೇಧವಿರುವ ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಮದ್ಯ ಸೇವಿಸಿ ಕನಿಷ್ಠ 19 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಕಳೆದ 48 ಗಂಟೆಗಳ ಅವಧಿಯಲ್ಲಿ ಈ ಸಾವು-ನೋವುಗಳು ಸಂಭವಿಸಿದ್ದು, ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ.

ಎರಡು ಜಿಲ್ಲೆಗಳಲ್ಲಿ ಸಾವುಗಳ ಸರಣಿ

ಅಕ್ರಮ ಮದ್ಯದ ಮಾರಕ ಪರಿಣಾಮಕ್ಕೆ ಮೊಕೊಕ್‌ಚುಂಗ್ ಜಿಲ್ಲೆಯಲ್ಲಿ 8 ಜನರು ಪ್ರಾಣ ಕಳೆದುಕೊಂಡಿದ್ದರೆ, ತುವೆನ್‌ಸಾಂಗ್ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 11ಕ್ಕೆ ತಲುಪಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಬೇರು ಹುಡುಕಲು ಎಸ್‌ಐಟಿ ಅಖಾಡಕ್ಕೆ

1990 ರಿಂದಲೇ ಕಟ್ಟುನಿಟ್ಟಿನ ಮದ್ಯ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ, ಇಂತಹ ಮಾರಕ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಬೇಧಿಸಲು ಪೊಲೀಸ್ ಇಲಾಖೆ ತೀವ್ರ ಶೋಧ ಆರಂಭಿಸಿದೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ. ಬಂಗ್ಲಾಂಗ್ ಚಾಂಗ್ ಅವರ ಸಾರಥ್ಯದಲ್ಲಿ ಪ್ರತ್ಯೇಕ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಘಟನಾ ಸ್ಥಳಗಳಿಂದ ಸಂಗ್ರಹಿಸಿದ ಮದ್ಯದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಅಸ್ಸಾಂನ ಗುವಾಹಟಿ ವಿಧಿವಿಜ್ಞಾನ ಲ್ಯಾಬ್‌ಗೆ ಕಳುಹಿಸಿಕೊಡಲಾಗಿದೆ. ತನಿಖೆಗೆ ಪೂರಕವಾದ ಹಲವು ಮಹತ್ವದ ಸಾಕ್ಷ್ಯಗಳು ಸಿಕ್ಕಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯಾದ್ಯಂತ ತೀವ್ರ ದಾಳಿ: 3 ಸಾವಿರ ಬಾಟಲಿ ಸೀಜ್

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಖಾಕಿ ಪಡೆ, ಅಕ್ರಮ ಮದ್ಯ ಮಾರಾಟ ಅಡ್ಡೆಗಳ ಮೇಲೆ ಸರಣಿ ದಾಳಿ ಸಂಘಟಿಸಿದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ 19 ಮಂದಿಯನ್ನು ಹೆಡೆಮುರಿ ಕಟ್ಟಲಾಗಿದ್ದು, ಸುಮಾರು 3,000 ಬಾಟಲಿ ಮದ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಆರೋಗ್ಯ ಹದಗೆಟ್ಟರೆ ತಕ್ಷಣ ಆಸ್ಪತ್ರೆಗೆ ಧಾವಿಸಿ: ಪೊಲೀಸರ ಕರೆ

ಗುರುತಿನ ಚೀಟಿ ಅಥವಾ ಅಧಿಕೃತ ಮುದ್ರೆಯಿಲ್ಲದ ಯಾವುದೇ ಪಾನೀಯಗಳನ್ನು ಮುಟ್ಟದಂತೆ ಜನರಿಗೆ ಸೂಚಿಸಲಾಗಿದೆ. ಒಂದು ವೇಳೆ ಮದ್ಯ ಸೇವಿಸಿ ಕಣ್ಣು ಮಂಜಾಗುವುದು, ತೀವ್ರ ತಲೆತಿರುಗುವಿಕೆ, ಉಸಿರಾಟದ ಸಮಸ್ಯೆ ಇಲ್ಲವೇ ಪ್ರಜ್ಞಾಹೀನ ಸ್ಥಿತಿ ಎದುರಾದರೆ ಕಿಂಚಿತ್ತೂ ತಡಮಾಡದೆ ತುರ್ತು ಚಿಕಿತ್ಸೆ ಪಡೆಯುವಂತೆ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others