ಬೆಂಗಳೂರು: 6ನೇ ತರಗತಿ ಸಲುವಾಗಿ NCERT (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಬಿಡುಗಡೆ ಮಾಡಿರುವ ಕನ್ನಡ ಪಠ್ಯಪುಸ್ತಕಕ್ಕೆ ಮಾಜಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ಷೇಪ ವ್ಯಕ್ತಪಡಿಸಿದರು.
ರಾಜ್ಯದೊಂದಿಗೆ ಯಾವುದೇ ಚರ್ಚೆ ನಡೆಸದೇ ಪುಸ್ತಕ ಬಿಡುಗಡೆ ಮಾಡಲಾಗಿದ್ದು, ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ಜಾನಪದ, ಸಾಹಿತ್ಯ ಮತ್ತು ಜೀವನ ಪದ್ಧತಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದ ಡಿಎಸ್‌ಇಆರ್‌ಟಿ ಈಗಾಗಲೇ ‘ಸವಿ ಕನ್ನಡ’, ‘ಸಿರಿ ಕನ್ನಡ’ ಹಾಗೂ ‘ತಿಳಿ ಕನ್ನಡ’ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದೆ. ಅವುಗಳನ್ನು ಪರಿಗಣಿಸದೇ ಹೊಸ ಪುಸ್ತಕ ಬಿಡುಗಡೆ ಮಾಡಿರುವುದು ಕನ್ನಡದ ಅಸ್ಮಿತೆಗೆ ಅಪಚಾರ ಎಂದು ಹೇಳಿದ್ದಾರೆ. ಕೂಡಲೇ ಈ ಪುಸ್ತಕವನ್ನು ಹಿಂದಕ್ಕೆ ಪಡೆದು, ಕರ್ನಾಟಕದ ಸಂಸ್ಕೃತಿ, ಆಚಾರ-ವಿಚಾರ, ಸಾಹಿತ್ಯ ಮತ್ತು ಪರಂಪರೆಯನ್ನು ಒಳಗೊಂಡ ಹೊಸ ಪುಸ್ತಕ ಸಿದ್ಧಪಡಿಸಬೇಕು ಎಂದು ತಿಳಿಸಿದ್ದಾರೆ.
ಸಮತೋಲನ ಆಹಾರದ ಪಾಠದಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರದ ಕುರಿತು ಯಾವುದೇ ಉಲ್ಲೇಖವಿಲ್ಲ. ಕೇವಲ ಸಸ್ಯಾಹಾರಕ್ಕೆ ಮಾತ್ರ ಪ್ರಾಮುಖ್ಯತೆ ನೀಡಲಾಗಿದೆ. ಇದು ಸಮತೋಲಿತ ನಿರೂಪಣೆ ಅಲ್ಲ, ನಾನು ಹಿಂದೂಗೆ ಹುಟ್ಟಿದವನು. ಕೃಷ್ಣನ ಬಗ್ಗೆ ನನಗೆ ಯಾವುದೇ ವಿರೋಧ ಇಲ್ಲ. ಆದರೆ ಧರ್ಮ ಮತ್ತು ಶಿಕ್ಷಣವನ್ನು ಬೆರೆಸಿ ಮಕ್ಕಳನ್ನು ಬೇರೆ ದಿಕ್ಕಿಗೆ ಕೊಂಡೊಯ್ಯಬಾರದು” ಎಂದು ಹೇಳಿದರು.
ನಾನು ರಕ್ತದಲ್ಲಿ ಹಿಂದೂ. ನಕಲಿ ಹಾಗೂ ಡೂಪ್ಲಿಕೇಟ್ ಹಿಂದೂಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ನಾನು ಸಂವಿಧಾನದ ಪೀಠಿಕೆಯನ್ನು ಓದಿಸುವವನು. ಶಿಕ್ಷಣದಲ್ಲಿ ಸಮಾನತೆ ಇರಬೇಕು. ಈ ಪುಸ್ತಕಕ್ಕೆ “ಕೃಷ್ಣ” ಎಂದು ಹೆಸರಿಡಲಾಗಿದೆ. ಕನ್ನಡದ ವೈಚಾರಿಕ ಪರಂಪರೆ, ಸ್ಥಳೀಯ ಸಂಸ್ಕೃತಿ ಹಾಗೂ ಪ್ರಾದೇಶಿಕ ಜೀವನ ಶೈಲಿಗೆ ಪುಸ್ತಕದಲ್ಲಿ ಆದ್ಯತೆ ನೀಡಿಲ್ಲ ಎಂದು ಸೂಚಿಸಿದ್ದಾರೆ.





