ರಾಜ್ಯದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು: ಸಿಎಂ ಡಿ.ಕೆ.ಶಿವಕುಮಾರ್

CM D.K. Shivakumar

ಬೆಂಗಳೂರು: ರಾಜಕೀಯ ಪಕ್ಷಗಳಿಂದ ನೇಮಕಗೊಂಡಿರುವ ಬಿಎಲ್ಎಗಳು ಕೂಡ ನಿಮಗೆ ಈ ಅರ್ಜಿ ಸಲ್ಲಿಕೆಯಲ್ಲಿ ನೆರವು ನೀಡಬಹುದು. ಸರ್ಕಾರ ಈಗಾಗಲೇ 5.50 ಕೋಟಿ ಜನರಿಗೆ ಈಗಾಗಲೇ ಜಾತಿ ಪ್ರಮಾಣಪತ್ರ ಅಧಿಕೃತವಾಗಿ ನೀಡಿರುವ ದಾಖಲೆ ನಮ್ಮ ಬಳಿ ಇದೆ ಎಂದು ಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಇದರಲ್ಲಿ 2,54,95,767 ಹಿಂದುಳಿದ ವರ್ಗದ ಪ್ರಮಾಣಪತ್ರ, 2,94,51,027 ಎಸ್ ಸಿ ಹಾಗೂ ಎಸ್ಟಿ ಪ್ರಮಾಣಪತ್ರ ವಿತರಿಸಲಾಗಿದೆ. ಇವುಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ವಿವರಿಸಿದರು.

ಜೂ. 30ರಿಂದ ರಾಜ್ಯದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದ್ದು, ಪ್ರತಿಯೊಬ್ಬ ಮತದಾರರೂ ಬಿಎಲ್ಓಗಳು ನೀಡುವ ಎನ್ಯುಮರೇಶನ್ ಅರ್ಜಿ ತುಂಬಿ, ಮತದಾನದ ಹಕ್ಕು ಉಳಿಸಿಕೊಳ್ಳಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಕರೆ ನೀಡಿದ್ದಾರೆ.

ಜನನ ಪ್ರಮಾಣಪತ್ರ, ಪಾಸ್ ಪೋರ್ಟ್, ಜಾತಿ ಪ್ರಮಾಣಪತ್ರ, ಅರಣ್ಯ ಹಕ್ಕು ಪತ್ರ, ಸರ್ಕಾರದಿಂದ ವಸತಿ ಅಥವಾ ನಿವೇಶನ ಪಡೆದಿರುವ ದಾಖಲೆ, ಕೇಂದ್ರ ಸರ್ಕಾರದ ಪಿಂಚಣಿ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಸಲ್ಲಿಕೆ ಮಾಡಬಹುದು. ನಿಮ್ಮ ಎಪಿಕ್ ಕಾರ್ಡ್ ಸಂಖ್ಯೆ ಬಳಸಿ ಮಾಹಿತಿ ನೀಡಬಹುದು. ಈ ಸಂದರ್ಭದಲ್ಲಿ ಜನರು 11 ಮಾದರಿಯ ದಾಖಲೆಗಳನ್ನು ಸಲ್ಲಿಕೆ ಮಾಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಾರ್ವಜನಿಕರಿಗೆ ಕಂದಾಯ ಇಲಾಖೆ ವತಿಯಿಂದ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್ ಅವರಿಗೆ ಅಧಿಕಾರ ನೀಡಿ ಆದೇಶ ಹೊರಡಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ಹಾಗೂ ವಾರ್ಡ್ ಗಳಲ್ಲಿ, ಸಹಾಯ ಕೇಂದ್ರ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಒಟ್ಟು 49,320 ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಅಗತ್ಯ ದಾಖಲೆ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ. ಯಾರೆಲ್ಲಾ ಜಾತಿ ಪ್ರಮಾಣಪತ್ರದಲ್ಲಿ ದೂರವಾಣಿ ಸಂಖ್ಯೆ ಸರಿಯಾಗಿ ನೀಡಿದ್ದೀರಿ ಅವರು ವಾಟ್ಸಪ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ವಿವರಿಸಿದರು.

5.50 ಕೋಟಿ ಜನರಿಗೆ ಮನೆ ಮನೆಗೆ ಹೋಗಿ ಸಹಾಯ ಮಾಡಲು ಸರ್ಕಾರ ತೀರ್ಮಾನಿಸಿದೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ರಕ್ಷಿಸಿಕೊಳ್ಳಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಚುನಾವಣಾ ಆಯೋಗ ಈ ಬಗ್ಗೆ ಜಾಹೀರಾತು ನೀಡುತ್ತಿದೆ. ಸರ್ಕಾರ ಕೂಡ ಜನರಿಗೆ ಅಗತ್ಯ ಮಾಹಿತಿ ನೀಡಲು ತೀರ್ಮಾನಿಸಿದೆ ಎಂದರು.

ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗೋಷ್ಠಿ ನಡೆಸಿ ಶಿವಕುಮಾರ್ ಅವರು ಮಾತನಾಡಿದರು. ರಾಜ್ಯದ ಎಲ್ಲಾ ಮತದಾರರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ಜೂ. 30ರಿಂದ ಜು. 29ರವರೆಗೆ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ, ಬಿಎಲ್ಓಗಳು ನಿಮ್ಮ ಮನೆಗಳಿಗೆ ಬಂದು ಅರ್ಜಿ ನೀಡಲಿದ್ದಾರೆ ಎಂದರು.

30 ದಿನಗಳ ಅವಧಿಯಲ್ಲಿ ಕಡ್ಡಾಯವಾಗಿ ಈ ಎನ್ಯುಮರೇಷನ್ ಅರ್ಜಿ ತುಂಬಿ ಅಗತ್ಯ ದಾಖಲೆಗಳು ಹಾಗೂ ಹೊಸ ಫೋಟೋಗಳೊಂದಿಗೆ ಸಲ್ಲಿಕೆ ಮಾಡಬೇಕು. ಇದು ಮತದಾರರ ಕರ್ತವ್ಯವಾಗಿದೆ. ಈ ಅರ್ಜಿ ಸಲ್ಲಿಕೆ ಮಾಡದಿದ್ದರೆ, ಮತದಾನದ ಹಕ್ಕು ಕಳೆದುಕೊಳ್ಳುತ್ತೀರಿ. ಆಗಸ್ಟ್ 5ರಂದು ಕರಡು ಮತಪಟ್ಟಿ ಪ್ರಕಟಿಸಲಾಗುವುದು. ಬಿಎಲ್ಓಗಳು ಮೂರು ಬಾರಿ ನಿಮ್ಮ ಮನೆಗೆ ಬಂದು ಅರ್ಜಿ ನೀಡುತ್ತಾರೆ. ನೀವು ಅರ್ಜಿ ಸ್ವೀಕರಿಸಿ ಸಲ್ಲಿಸದಿದ್ದರೆ ಹಕ್ಕು ಕಳೆದುಕೊಳ್ಳುತ್ತೀರಿ ಎಂದು ಎಚ್ಚರಿಸಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post