ಬರಗಾಲದಿಂದ ಬಸವಳಿದ್ದ ಕರ್ನಾಟಕದಲ್ಲಿ ಜೋರಾಯ್ತು ಮುಂಗಾರು ಮಳೆಯ ಆರ್ಭಟ

ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ವರುಣಾಬ್ಬರ ಜೋರಾಗಿದ್ದು, ರೈತರ ಮೋಗದಲ್ಲಿ ಸಂತಸ ಮೂಡಿಸಿದೆ. ಬರಗಾಲದಿಂದ ಬಸವಳಿದ್ದ ರಾಜ್ಯದಲ್ಲಿ ಈಗ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮುಂದಿನ 3 ದಿನಗಳ ಕಾಲ ಕರಾವಳಿ ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲಭಾಗಗಳಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಕಲಬುರಗಿ, ಯಾದಗಿರಿ ರಾಯಚೂರು, ಭಾಗಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. 3 ದಿನಗಳ ಬಳಿಕ ಈ ಭಾಗಗಳಲ್ಲಿ ಹಂತ-ಹಂತವಾಗಿ ಮಳೆ ಕಡಿಮೆಯಾಗಲಿದೆ. ಇನ್ನೂ 10 ದಿನಗಳ ವರೆಗೂ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ.

ಈ ಬಗ್ಗೆ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ಲತಾ ಮಾಹಿತಿ ನೀಡಿದ್ದು, ಕರಾವಳಿ ಜಿಲ್ಲೆಗಳು, ಹಾಸನ, ಶಿವಮೊಗ್ಗ, ಮಡಿಕೇರಿ ಮತ್ತು ಬೆಳಗಾವಿ ಭಾಗದಲ್ಲಿ ಅತಿಹೆಚ್ಚು ಮಳೆಯಾಗುತ್ತಿದೆ. ಈ ಭಾಗಗಳಿಗೆ ಇನ್ನೂ 2 ದಿನಗಳ ಕಾಲ ಯಲ್ಲೋ ಅಲಟ್೯ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತ ಮಡಿಕೇರಿ ಕೊಡಗು ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮುಂದುವರಿದಿದೆ. ಧಾರಾಕಾರ ಮಳೆಯ ಪರಿಣಾಮ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ. ಒಂದೇ ದಿನದಲ್ಲಿ ಸುಮಾರು 1.5 ಟಿಎಂಸಿ ನೀರು ಗ್ರಹವಾಗಿರುವುದು ಜಲಾಶಯದ ನೀರಿನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿದೆ.

ಇಂದು ಕೂಡ ಜಲಾಶಯಕ್ಕೆ 3,665 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಒಂದೇ ದಿನದಲ್ಲಿ ಸುಮಾರು 1.5 ಟಿಎಂಸಿ ನೀರು ಸಂಗ್ರಹವಾಗಿದೆ. ಮಡಿಕೇರಿ ಗಾಳಿಬೀಡು ಹಾಗೂ ಕಾಲೂರು ಭಾಗಗಳಲ್ಲಿ ಕಳೆದ 24 ಗಂಟೆಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾಗಿದೆ.

ಇದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಹಾರಂಗಿ ಜಲಾಶಯಕ್ಕೆ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಜಲಾಶಯದ ನೀರಿನ ಮಟ್ಟವನ್ನು ಅಧಿಕಾರಿಗಳು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅಗತ್ಯವಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಸಜ್ಜಾಗಿದ್ದಾರೆ. ಕೊಡಗಿನಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ನದಿ-ತೊರೆಗಳ ತೀರದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಮನವಿ ಮಾಡಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others

Latest Post