ಹಸಿರು ಬಣ್ಣದ ಗೇಟ್‌ಗೆ ತುಕ್ಕು ಹಿಡಿದ ಬೀಗ. ಕಲ್ಲಿನ ಕಂಬಕ್ಕೆ ತಾಗಿಕೊಂಡಿರುವ ಮಾಹಿತಿ ಫಲಕದ ಅರ್ಧ ಭಾಗವನ್ನು ಲಂಟಾನ ಗಿಡ ನುಂಗಿದೆ. ಗೇಟ್ ಮುಂದೆ ಬಿದ್ದಿರುವ ಕಪ್ಪು ಚಿಂದಿ ಬಟ್ಟೆ, ಪ್ಲಾಸ್ಟಿಕ್ ಕವರ್, ಒಣಗಿದ ಮುಳ್ಳು. ಒಳಗೆ ಕಾಣುವ ಬಿಳಿ ಗುಮ್ಮಟದ ಮೇಲೆ ಹಸಿರು ಪಾಚಿ. ಹಿಂದೆ ತೆಂಗಿನ ಮರಗಳು ನಗುತ್ತಿವೆ, ಆದರೆ ಈ ಸ್ಮಾರಕ ಅಳುತ್ತಿದೆ. ಇದು ಶ್ರೀರಂಗಪಟ್ಟಣದ ಸ್ಥಳಾಂತರಗೊಂಡ ಮದ್ದಿನ ಮನೆ ಅಲ್ಲ, ಇದು ಭಾರತದ ಪರಂಪರೆ ನಿರ್ವಹಣೆಯ ನಾಚಿಕೆಗೇಡಿನ ಸಂಕೇತ.
ಒಂಬತ್ತು ಮದ್ದಿನ ಮನೆಗಳ ಕಥೆ ಏನಾಯ್ತು ಗೊತ್ತಾ?
ಟಿಪ್ಪು ಸುಲ್ತಾನ್ ತನ್ನ ರಾಜಧಾನಿ ಶ್ರೀರಂಗಪಟ್ಟಣವನ್ನು ವಿಶ್ವದ ಅತ್ಯಂತ ಸುರಕ್ಷಿತ ಕೋಟೆಯನ್ನಾಗಿ ಮಾಡಲು ಕೋಟೆಯ ಸುತ್ತ ಒಂಬತ್ತು ಕಡೆ ಮದ್ದಿನ ಮನೆಗಳನ್ನು (ಮ್ಯಾಗಝಿನ್ ಹೌಸ್ಸ್ ) ಫ್ರೆಂಚ್ ತಂತ್ರಜ್ಞರ ನೆರವಿನಿಂದ ಕಟ್ಟಿಸಿದ್ದರು. ಇಲ್ಲಿ ಗನ್ ಪೌಡರ್, ಫಿರಂಗಿ ಉಂಡೆಗಳು ಮತ್ತು ವಿಶ್ವದ ಮೊದಲ ಯುದ್ಧ ರಾಕೆಟ್ ಎನಿಸಿಕೊಂಡ ಮೈಸೂರು ರಾಕೆಟ್‌ಗಳನ್ನು ಸಂಗ್ರಹಿಸಿಡಲಾಗುತ್ತಿತ್ತು.
ರೂ 13.87 ಕೋಟಿಯ ಪವಾಡ:
ಫೋಟೋದಲ್ಲಿರುವುದು ಸಾಮಾನ್ಯ ಕಟ್ಟಡವಲ್ಲ. ಇದರ ತೂಕ 900 ಟನ್, ನೆಲದೊಳಗೆ 10 ಅಡಿ ಆಳದಲ್ಲಿ ನಿರ್ಮಾಣವಾಗಿದೆ. ಮೊಟ್ಟೆ, ಬೆಲ್ಲ, ಸುಣ್ಣ ಮತ್ತು ಕಲ್ಲಿನ ಗಾರೆಯಿಂದ ಕಟ್ಟಿದ್ದರಿಂದ 200 ವರ್ಷವಾದರೂ ಮದ್ದು ಹಾಳಾಗುತ್ತಿರಲಿಲ್ಲ.
ಬೆಂಗಳೂರು-ಮೈಸೂರು ರೈಲು ಮಾರ್ಗ ಡಬ್ಲಿಂಗ್ ವೇಳೆ ಈ ಸ್ಮಾರಕ ಅಡ್ಡ ಬಂದಿತ್ತು. ಹಳಿಯಿಂದ ಕೇವಲ 15 ಮೀಟರ್ ದೂರದಲ್ಲಿದ್ದರಿಂದ ಕಾಮಗಾರಿ 10 ವರ್ಷ ಸ್ಥಗಿತಗೊಂಡಿತ್ತು. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಕಟ್ಟಡವನ್ನು ಕತ್ತರಿಸಬಾರದು ಎಂದು ಷರತ್ತು ವಿಧಿಸಿತು.
ಕೊನೆಗೆ ಭಾರತದಲ್ಲೇ ಮೊದಲ ಪ್ರಯೋಗ ನಡೆಯಿತು. 2015 ರಲ್ಲಿ ಅಮೆರಿಕದ ವೋಲ್ಫ್ ಹೌಸ್ ಮೂವರ್ಸ್ ಮತ್ತು ದೆಹಲಿಯ ಫೆಡ್ಡರ್ಸ್ ಲಾಯ್ಡ್ ಕಂಪನಿಗಳು ಜಂಟಿಯಾಗಿ ಜಬಲ್ಪುರದಲ್ಲಿ 5 ಮುಖ್ಯ ಫ್ರೇಮ್, 11 ಕ್ರಾಸ್ ಬೀಮ್ ಸಿದ್ಧಪಡಿಸಿದವು. 37 ಹೈಡ್ರಾಲಿಕ್ ಜಾಕ್‌ಗಳನ್ನು ಒಂದೇ ಸೆಕೆಂಡಿನಲ್ಲಿ ಒಂದೇ ಮಿಲಿಮೀಟರ್‌ನಂತೆ ಎತ್ತುವ ಮೂಲಕ 2017 ರ ಮಾರ್ಚ್ 7 ರಿಂದ 10 ರವರೆಗೆ ದಿನಕ್ಕೆ 25 ಮೀಟರ್‌ನಂತೆ 100 ಮೀಟರ್ ದೂರಕ್ಕೆ ಈ ಕಟ್ಟಡವನ್ನು ಜರುಗಿಸಲಾಯಿತು. ಇದು ವಿಶ್ವ ದಾಖಲೆಯಾಯಿತು.
ಇಂದಿನ ದುಸ್ಥಿತಿ ಯಾರೂ ಇಲ್ಲದ ಆಸ್ತಿ:
ಸ್ಥಳೀಯರ ಮಾಹಿತಿ ಪ್ರಕಾರ, ಈ ಜಾಗ ರೈಲ್ವೆ ಇಲಾಖೆಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆನಿಂದ ರಾಜ್ಯ ಪುರಾತತ್ವ ಇಲಾಖೆಗೆ ಹಸ್ತಾಂತರವಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ವಾಸ್ತವದಲ್ಲಿ ಯಾರೂ ನೋಡಿಕೊಳ್ಳುತ್ತಿಲ್ಲ. ದಾರಿಹೋಕರು ಕಸ ಹಾಕುತ್ತಾರೆ, ಸಂಜೆ ವೇಳೆ ಕುಡುಕರ ಅಡ್ಡೆಯಾಗಿದೆ. ಪ್ರವಾಸಿಗರು ಬಂದರೆ ಗೇಟ್ ಲಾಕ್ ಎಂದು ವಾಪಸ್ ಹೋಗುತ್ತಾರೆ. ಗೂಗಲ್ ಮ್ಯಾಪ್‌ನಲ್ಲೂ “ಪರ್ಮನೆಂರ್ಟ್ಲಿ ಕ್ಲೋಸ್ಡ್ ” ಎಂದು ತೋರಿಸುತ್ತಿದೆ.
ಸಮರ್ಪಣ ಟ್ರಸ್ಟ್ ವಿಶೇಷ ಪ್ರಸ್ತಾಪ:
ಈ ಮದ್ದಿನ ಮನೆಯನ್ನು ಹೀಗೆ ಬಿಡಬಾರದು. ನಮ್ಮ ಪ್ರಸ್ತಾಪ ‘ಮದ್ದಿನ ಮನೆಯಿಂದ ಮ್ಯೂಸಿಯಂವರೆಗೆ’. ಒಳಗಿನ 5 ಅಡಿ ಜಾಗದಲ್ಲಿ ಟಿಪ್ಪುವಿನ ಎರಡು ರಾಕೆಟ್ ಪ್ರತಿಕೃತಿ, ಫ್ರೆಂಚ್ ನಕ್ಷೆ, ಮೊಟ್ಟೆ-ಬೆಲ್ಲದ ಗಾರೆಯ ಮಾದರಿಯನ್ನು ಇಡಬಹುದು. ಹೊರಗಿನ ಖಾಲಿ ಜಾಗದಲ್ಲಿ ಸಣ್ಣ ಕೆಫೆ ಮತ್ತು ಸ್ಮರಣ ಸಂಚಿಕೆ ಅಂಗಡಿ ತೆರೆದರೆ ಶ್ರೀರಂಗಪಟ್ಟಣದ ಪ್ರವಾಸೋದ್ಯಮ ಆದಾಯ ದ್ವಿಗುಣವಾಗುತ್ತದೆ.
ಟಿಪ್ಪು ರಾಕೆಟ್ ತಂತ್ರಜ್ಞಾನವೇ ಇಂದು ನಾಸಾ ಚಂದ್ರನಿಗೆ ಹೋಗಲು ಸ್ಫೂರ್ತಿ ಎಂದು ಇತಿಹಾಸಕಾರರು ಹೇಳುತ್ತಾರೆ. ಅಂತಹ ಜಾಗದ ಮುಂದೆ ಚಿಂದಿ ಬಟ್ಟೆ ಬಿದ್ದಿರುವುದು ನಾಚಿಕೆಗೇಡು.ಭಾರತೀಯ ಇತಿಹಾಸವನ್ನು ಜರುಗಿಸಿದ್ದೇವೆ, ಮುಂದಿನ ಪೀಳಿಗೆಗಾಗಿ ಈಗ ಅದನ್ನು ಉಳಿಸಬೇಕಿದೆ ಎಂದು ಕೆ ಎಸ್ ಜಯಶಂಕರ್ ತಿಳಿಸಿದ್ದಾರೆ.





