ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಕೈಗೊಳ್ಳಲಿರುವ ಮುಂಬರುವ ಆರ್&ಡಿ ಹೂಡಿಕೆ ಹಾಗೂ ಸೆಮಿಕಂಡಕ್ಟರ್ ಇಕೋಸಿಸ್ಟಂ ಅಭಿವೃದ್ಧಿ ಕುರಿತು ಸಭೆಯೊಂದರಲ್ಲಿ ಚರ್ಚೆ ನಡೆಯಿತು. ಈ ಹೂಡಿಕೆಯಿಂದ ಕರ್ನಾಟಕದ ಸಂಪೂರ್ಣ ಮೌಲ್ಯ ಸರಪಳಿಯಾದ್ಯಂತ ಸೃಷ್ಟಿಯಾಗಬಹುದಾದ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.
ರಾಜ್ಯದಲ್ಲಿ ಸೆಮಿಕಂಡಕ್ಟರ್ ಇಕೋಸಿಸ್ಟಂ ಅನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಹೂಡಿಕೆ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಪೊರೇಟ್ ಉಪಾಧ್ಯಕ್ಷ ಹಾಗೂ ಮುಖ್ಯ ಜಾಗತಿಕ ನೀತಿ ಅಧಿಕಾರಿ ರಾಬರ್ಟ್ ಬ್ಲೇರ್ – ಭಾರತದ ನಾಯಕತ್ವ ತಂಡವನ್ನು ಸಚಿವ ಪ್ರಿಯಾಂಕ್ ಖರ್ಗೆ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುವುದು ಹಾಗೂ ಬಲಿಷ್ಠ ಸೆಮಿಕಂಡಕ್ಟರ್ ಇಕೋಸಿಸ್ಟಂ ನಿರ್ಮಿಸುವುದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕರ್ನಾಟಕ ಈಗಾಗಲೇ ಹೊಂದಿರುವ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಡಿಜಿಟಲ್ ಮೂಲಸೌಕರ್ಯ, ಸುಸ್ಥಿರ ತಂತ್ರಜ್ಞಾನ ಹಾಗೂ ಉನ್ನತ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಲ್ಲಿ ಹೂಡಿಕೆ ಆಕರ್ಷಿಸುವ ಮೂಲಕ ಕರ್ನಾಟಕವನ್ನು ಭವಿಷ್ಯದ ತಂತ್ರಜ್ಞಾನ ಆರ್ಥಿಕತೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸೆಮಿಕಂಡಕ್ಟರ್ ಸಂಬಂಧಿತ ಚಟುವಟಿಕೆಗಳು ವಿಸ್ತರಣೆಯಾಗುವುದರಿಂದ ನೇರ ಹೂಡಿಕೆಗಳ ಜೊತೆಗೆ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಆರ್&ಡಿ, ತಂತ್ರಜ್ಞಾನ, ಪೂರೈಕೆ ಸರಪಳಿ ಹಾಗೂ ಸಂಬಂಧಿತ ಕೈಗಾರಿಕೆಗಳ ಬೆಳವಣಿಗೆಗೂ ವೇಗ ಸಿಗಲಿದೆ ಎಂದು ಸಚಿವರು ಹೇಳಿದರು.
ಜಾಗತಿಕ ತಂತ್ರಜ್ಞಾನ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಕರ್ನಾಟಕವನ್ನು ಪ್ರಮುಖ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ತನ್ನ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ಪಾಲುದಾರರ ಸಹಭಾಗಿತ್ವ ಈ ಪ್ರಯತ್ನಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದರು
ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೂಡಿಕೆ, ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಹಾಗೂ ಕೌಶಲ್ಯ ವೃದ್ಧಿಗೆ ಅಗತ್ಯವಾದ ಪರಿಸರ ನಿರ್ಮಿಸಲು ಸರ್ಕಾರ ಬದ್ಧವಾಗಿದೆ. ಅಪ್ಲೈಡ್ ಮೆಟೀರಿಯಲ್ಸ್‌ನಂತಹ ಜಾಗತಿಕ ತಂತ್ರಜ್ಞಾನ ಸಂಸ್ಥೆಗಳ ಹೂಡಿಕೆಗಳು ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ತಿಳಿಸಿದರು.





