ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಯುವಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ರಾಜ್ಯದ ಹಾಲಿ ಮುಖ್ಯಮಂತ್ರಿಯೇ ನೈಸ್ ಕಂಪನಿ ಖರೀದಿಸಲು ಹೊರಟಿದ್ದಾರೆ. ನೈಸ್ ಕಂಪನಿಯನ್ನು ಯಾರು ‘ಟೇಕ್ ಓವರ್’ ಮಾಡುತ್ತಿದ್ದಾರೆಂದು ತಾಕತ್ತಿದ್ದರೆ ಸಿಎಂ ಡಿ.ಕೆ.ಶಿವಕುಮಾರ್ ಜನತೆಯ ಮುಂದೆ ಹೇಳಲಿ ಎಂದು ಸವಾಲನ್ನೂ ಹಾಕಿದ್ದಾರೆ.
ಬಿಎಂಐಸಿ ಯೋಜನೆ ಹೆಸರಲ್ಲಿ ಸಾವಿರಾರು ಎಕರೆ ಲೂಟಿ ಹೊಡೆಯಲು ಸಂಚು ರೂಪಿಸಿದ್ದಾರೆ. ನಾನಿಲ್ಲಿ ಕುಳಿತು ಸಂತೆ ಭಾಷಣ ಮಾಡುತ್ತಿಲ್ಲ. ಮುಂದಿನ ವಾರ ದಾಖಲೆ ಸಮೇತ ತಿಳಿಸುತ್ತೇನೆ,” ಎಂದು ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ರೈತರ ಜಮೀನನ್ನು ಕಸಿದುಕೊಂಡು, ಪರಿಹಾರವನ್ನೂ ನೀಡದೆ ಅನ್ಯಾಯ ಮಾಡಿರುವ ಕಂಪನಿಯನ್ನು ಏಕೆ ಖರೀದಿಸುತ್ತಿದ್ದೇನೆ ಎಂಬುದನ್ನು ಮುಖ್ಯಮಂತ್ರಿ ಅವರು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ಕಂಪನಿಯು 20,000 ಎಕರೆಗೂ ಹೆಚ್ಚು ಜಮೀನನ್ನು 20 ವರ್ಷಗಳ ಹಿಂದೆಯೇ ಸ್ವಾಧೀನಕ್ಕೆ ಪಡೆದುಕೊಂಡಿದೆ. ಬೆಂಗಳೂರು–ಮೈಸೂರು ಮಧ್ಯೆ 111 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಿಸಬೇಕಿತ್ತು. ಆದರೆ, ಈವರೆಗೆ 5 ಕಿ.ಮೀ.ನಷ್ಟು ಹೆದ್ದಾರಿಯನ್ನಷ್ಟೇ ನಿರ್ಮಿಸಿದೆ ಎಂದರು.
ಈ ಮುಖ್ಯಮಂತ್ರಿಯೇ ರಾಷ್ಟ್ರದಲ್ಲಿ ಅತಿದೊಡ್ಡ ಭೂ ಲೂಟಿಯ ಮಹಾನಾಯಕ. ನನಗಿರುವ ಮಾಹಿತಿ ಪ್ರಕಾರ, ಬೇನಾಮಿ ಕಂಪನಿಗಳ ಮೂಲಕ ಈ ಮುಖ್ಯಮಂತ್ರಿಯೇ ನೈಸ್ ಕಂಪನಿಯನ್ನು ಖರೀದಿಸಲು ಹೊರಟಿದ್ದಾರೆ.
ನೈಸ್ ಕಂಪನಿ ಮತ್ತು ಬಿಎಂಐಸಿ ಯೋಜನೆಯನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಬದಲಿಗೆ, ಡಿ.ಕೆ.ಶಿವಕುಮಾರ್ ಅವರು ತಮ್ಮ ಸ್ವಂತಕ್ಕೆ ಖರೀದಿಸಲು ಮುಂದಾಗಿದ್ದಾರೆ ಎಂಬುದು ಗೊತ್ತಾಗಿದೆ. ಇತರರ ಕಂಪನಿಗಳನ್ನು ಬಳಸಿಕೊಂಡು ತಮ್ಮ ಹಣವನ್ನು ಹೂಡಿಕೆ ಮಾಡಿ, ನೈಸ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ನನಗೆ ದೊರೆತಿದೆ. ಸೂಕ್ತ ಸಮಯದಲ್ಲಿ ಎಲ್ಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಬೆಂಗಳೂರು–ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯನ್ನು ನೈಸ್ ಕಂಪನಿ ಅನುಷ್ಠಾನಕ್ಕೆ ತರುತ್ತಿದೆ. ಈ ಯೋಜನೆಯು ದೇಶದಲ್ಲೇ ಅತ್ಯಂತ ದೊಡ್ಡ ಹಗರಣ. ಅದನ್ನು ಸರ್ಕಾರವು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು ಎಂದು ತಿಳಿಸಿದ್ದಾರೆ.





