ಬೆಂಗಳೂರು: ಕನ್ನಡ ಚಿತ್ರರಂಗ (Kannada Film Industry), ಕಿರುತೆರೆ ಹಾಗೂ ರಂಗಭೂಮಿಯಲ್ಲಿ ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದೆ ಲಲಿತಮ್ಮ (65) ( Veteran artist Lalithamma ) ಅವರು ಭಾನುವಾರ ಇಹಲೋಕ ತ್ಯಜಿಸಿದ್ದಾರೆ. ಕಳೆದ ಎರಡೂವರೆ ತಿಂಗಳಿಂದ ಪಾರ್ಶ್ವವಾಯು (ಸ್ಟ್ರೋಕ್) ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಅನಾಥ ಸ್ಥಿತಿಯಲ್ಲಿದ್ದ ಕಲಾವಿದೆಗೆ ಆಸರೆಯಾಗಿದ್ದ ಟ್ರಸ್ಟ್
ಜೀವನದ ಸಂಧ್ಯಾಕಾಲದಲ್ಲಿ ಅನಾರೋಗ್ಯದ ಜೊತೆಗೆ ಆರೈಕೆ ಮಾಡುವವರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಲಲಿತಮ್ಮ ಅವರಿಗೆ ‘ಅಮ್ಮನ ಮಡಿಲು ಟ್ರಸ್ಟ್’ ಆಶ್ರಯ ನೀಡಿ ಮಾನವೀಯತೆ ಮೆರೆದಿತ್ತು. ಕಳೆದ ಹತ್ತು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ವಿಷಮಿಸಿದ್ದು, ಆಶ್ರಮದ ಸಿಬ್ಬಂದಿ ಸತತ ಆರೈಕೆ ಮಾಡುತ್ತಿದ್ದರು. ಆದರೆ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಶಶಿಕಲಾ ಅವರು ಅಧಿಕೃತವಾಗಿ ತಿಳಿಸಿ, ಕಂಬನಿ ಮಿಡಿದಿದ್ದಾರೆ.
ಅಭಿನಯ ಪಯಣ ಮತ್ತು ಜನಪ್ರಿಯತೆ
ರಂಗಭೂಮಿಯ ಗಟ್ಟಿ ತಳಹದಿಯಿಂದ ಬೆಳೆದು ಬಂದಿದ್ದ ಲಲಿತಮ್ಮ ಅವರು ಸುಮಾರು 180ಕ್ಕೂ ಹೆಚ್ಚು ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವ ತುಂಬಿದ್ದರು. ಕಿರುತೆರೆಯಲ್ಲಿ ಮನೆಮಾತಾಗಿದ್ದ ‘ರಂಗೋಲಿ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಬೆಳ್ಳಿತೆರೆಯಲ್ಲೂ ಛಾಪು ಮೂಡಿಸಿದ್ದ ಇವರು, ನಟ ದರ್ಶನ್ ಅಭಿನಯದ ‘ಸುಂಟರಗಾಳಿ’ ಚಿತ್ರದಲ್ಲಿ ಖಳನಾಯಕಿಯ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದಲ್ಲದೆ ‘ಜಂಗ್ಲಿ’, ‘ಲೈಫ್ ಇಷ್ಟೇನೆ’ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲೂ ಗಮನಾರ್ಹ ಪಾತ್ರಗಳನ್ನು ನಿಭಾಯಿಸಿದ್ದರು. ಹಿರಿಯ ನಟಿಯ ನಿಧನಕ್ಕೆ ಕನ್ನಡ ಕಲಾ ಜಗತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ.





