ಕುಮಾರಸ್ವಾಮಿ ನನ್ನನ್ನು ಮುಖ್ಯಮಂತ್ರಿ ಎಂದು ಒಪ್ಪಿಕೊಂಡರಲ್ಲಾ, ಅದೇ ಸಂತೋಷ: ಸಿಎಂ ಡಿ ಕೆ ಶಿವಕುಮಾರ್

ನವದೆಹಲಿ: ಮಂಡ್ಯದಲ್ಲಿ ಎರಡು ಯೋಜನೆಗಳನ್ನು ಸ್ಥಾಪಿಸಲು ಭೂಮಿ ಮಂಜೂರು ಮಾಡುವಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬರೆದ ಪತ್ರಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಕೊನೆಗೂ ಕುಮಾರಸ್ವಾಮಿ ತಮ್ಮನ್ನು ಕರ್ನಾಟಕ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಿನ್ನೆ ಬರೆದಿರುವ ಪತ್ರದಲ್ಲಿ ಮಂಡ್ಯದಲ್ಲಿ ಎರಡು ಯೋಜನೆಗಳನ್ನು ಸ್ಥಾಪಿಸಲು ಭೂಮಿ ಮಂಜೂರು ಮಾಡುವಂತೆ ಕುಮಾರಸ್ವಾಮಿ ಕೋರಿದ್ದಾರೆ. ಅವುಗಳೆಂದರೆ ಸಿಐಇ ಪರೀಕ್ಷಾ ಕೇಂದ್ರ ಮತ್ತು ಎಲೆಕ್ಟ್ರಿಕ್ ವಾಹನಗಳ (ಇವಿ) ಪರೀಕ್ಷಾ ಕೇಂದ್ರ.

ಕಳೆದ 10 ತಿಂಗಳಿಂದ ಈ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಮಿ ಮಂಜೂರು ಮಾಡಿಲ್ಲ ಎಂದು ಕುಮಾರಸ್ವಾಮಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದವರೇ ಆದ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ ಮಂಡ್ಯಕ್ಕೆ ಒಂದೇ ಒಂದು ಕೈಗಾರಿಕೆಯನ್ನೂ ತರಲು ವಿಫಲರಾಗಿದ್ದಾರೆ ಎಂದು ಇತ್ತೀಚೆಗೆ ಡಿ ಕೆ ಶಿವಕುಮಾರ್ ಟೀಕಿಸಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಯೋಜನೆಗಳು ಉತ್ತಮ ಉದ್ದೇಶ ಹೊಂದಿದ್ದರೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIADB) ಭೂಮಿ ಲಭ್ಯತೆಯ ಬಗ್ಗೆ ಅಥವಾ ಭೂಸ್ವಾಧೀನದ ಅಗತ್ಯವಿದೆಯೇ ಎಂಬುದರ ಕುರಿತು ಮೊದಲು ಪರಿಶೀಲನೆ ನಡೆಸಲಾಗುವುದು. ಬಳಿಕ ಕೈಗಾರಿಕಾ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದರು.

ನಾವು ಈ ಕುರಿತು ಚರ್ಚಿಸುತ್ತೇವೆ. ಖಂಡಿತವಾಗಿಯೂ ಸಹಕರಿಸುತ್ತೇವೆ ಎಂದರು.
ತಮಗೆ ಪತ್ರ ತಲುಪಿದ್ದು ಕೆಲವೇ ನಿಮಿಷಗಳ ಹಿಂದೆ ಎಂದು ತಿಳಿಸಿದ ಡಿಕೆ ಶಿವಕುಮಾರ್, ಅದನ್ನು ಇನ್ನೂ ಓದಿಲ್ಲ. ಐದು ನಿಮಿಷಗಳ ಹಿಂದಷ್ಟೇ ಪತ್ರವನ್ನು ನನಗೆ ನೀಡಲಾಗಿದೆ ಎಂದರು.

ಪತ್ರ ಅದೇ ದಿನಾಂಕದ್ದಾಗಿದೆ ಎಂದು ಸುದ್ದಿಗಾರರು ತಿಳಿಸಿದಾಗ, ಅಧಿಕಾರಿಯೊಬ್ಬರು ಈಗಷ್ಟೇ ಪತ್ರವನ್ನು ತಂದುಕೊಟ್ಟಿದ್ದಾರೆ, ನಾನು ಇನ್ನೂ ಪತ್ರ ಓದಿಲ್ಲ. ಕನ್ನಡಕ ಹಾಕಿಕೊಂಡು ಅವರು ಏನು ಹೇಳಿದ್ದಾರೆಂದು ನೋಡುತ್ತೇನೆ ಎಂದು ಹೇಳಿದರು.

ಈ ಹಿಂದೆ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಎಂಬುದನ್ನೇ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಟೀಕಿಸಿದರು.

ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ನನ್ನನ್ನು ಕರ್ನಾಟಕದ ಮುಖ್ಯಮಂತ್ರಿ ಎಂದು ಒಪ್ಪಿಕೊಂಡಿರುವುದಕ್ಕೆ ಸಂತೋಷವಾಗಿದೆ. ಪಾಪ, ಅವರು ಈ ಹಿಂದೆ ಅದನ್ನೂ ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈಗ ಅವರು ಒಪ್ಪಿಕೊಂಡಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ವ್ಯಂಗ್ಯವಾಡಿದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others