ಪಡಿತರ ಚೀಟಿದಾರರ ಗಮನಕ್ಕೆ: ಇನ್ಮುಂದೆ ರೇಷನ್ ಕಾರ್ಡ್ ಗೆ ಮನೆಯಲ್ಲೇ ‘e-KYC’ ಹೀಗೆ ಮಾಡಿ!

ಬೆಂಗಳೂರು: ರೇಷನ್ ಕಾರ್ಡ್ ( Ration Card ) ಇ-ಕೆವೈಸಿ (e-KYC) ಮಾಡಿಸಲು ಇನ್ನು ಮುಂದೆ ಸಾರ್ವಜನಿಕರು ನ್ಯಾಯಬೆಲೆ ಅಂಗಡಿಗಳು ಇಲ್ಲವೇ ಸೇವಾ ಕೇಂದ್ರಗಳ ಮುಂದೆ ಕಾದು ನಿಲ್ಲುವ ತಾಪತ್ರಯ ತಪ್ಪಲಿದೆ. ಪಡಿತರ ಫಲಾನುಭವಿಗಳ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯು ‘ಅನ್ನ ಸೇವೆ’ (Anna Seve) ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ.

ಈ ಆ್ಯಪ್ ಮೂಲಕ ಸಾರ್ವಜನಿಕರು ತಮ್ಮ ಮೊಬೈಲ್ ಬಳಸಿ ಮನೆಯಲ್ಲೇ ಕುಳಿತು ಇ-ಕೆವೈಸಿ ಪ್ರಕ್ರಿಯೆಯನ್ನು ಸುಲಭವಾಗಿ ಮುಗಿಸಿಕೊಳ್ಳಬಹುದು.

ಕೇಂದ್ರಗಳಿಗೆ ಅಲೆದಾಟ ತಪ್ಪಿಸಿ ಸಮಯ ಉಳಿಸುವ ಪ್ರಯತ್ನ

ಇದುವರೆಗೂ ಪಡಿತರ ಚೀಟಿಗೆ ಆಧಾರ್ ದೃಢೀಕರಣ ಮಾಡಿಸಲು ಗ್ರಾಮ ಒನ್ ಕೇಂದ್ರಗಳು ಅಥವಾ ಪಡಿತರ ವಿತರಣಾ ಕೇಂದ್ರಗಳ ಬಳಿ ಹೋಗಿ ಬೆರಳಚ್ಚು ನೀಡಬೇಕಾಗಿತ್ತು. ಇದರಿಂದ ದಿನವಿಡೀ ಸಮಯ ವ್ಯರ್ಥವಾಗುವುದರ ಜೊತೆಗೆ ಹಳ್ಳಿ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನರು ಸರತಿಯಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಇತ್ತು.

ಸಾರ್ವಜನಿಕರ ಈ ಸಮಸ್ಯೆಯನ್ನು ಮನಗಂಡು, ಜನರ ಅಮೂಲ್ಯ ಸಮಯ ಉಳಿಸುವ ಮತ್ತು ಸೇವೆಗಳನ್ನು ಮನೆಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಈ ನೂತನ ಆ್ಯಪ್ ಆಧಾರಿತ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಫೇಸ್ ಅಥೆಂಟಿಕೇಶನ್ ಮೂಲಕ ಹಿರಿಯರು, ಮಕ್ಕಳಿಗೆ ವರದಾನ

ಸಾಮಾನ್ಯವಾಗಿ ವಯಸ್ಸಾದವರಲ್ಲಿ ಅಥವಾ ಚಿಕ್ಕ ಮಕ್ಕಳಲ್ಲಿ ಬೆರಳಚ್ಚು ಸರಿಯಾಗಿ ಬಾರದೆ ಇ-ಕೆವೈಸಿ ಪ್ರಕ್ರಿಯೆ ವಿಫಲವಾಗುತ್ತಿತ್ತು. ಈ ಸಮಸ್ಯೆಗೆ ಪೂರ್ಣ ಪರಿಹಾರ ಒದಗಿಸಲು ‘ಅನ್ನ ಸೇವೆ’ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಶನ್ (Face Authentication) ಅಂದರೆ ಮುಖ ಗುರುತಿಸುವಿಕೆ ಸೌಲಭ್ಯವನ್ನು ನೀಡಲಾಗಿದೆ.

ಇದರ ಮೂಲಕ ಹಿರಿಯ ನಾಗರಿಕರು ಮತ್ತು ಮಕ್ಕಳ ಮುಖವನ್ನು ಕ್ಯಾಮೆರಾದಲ್ಲಿ ಸ್ಕ್ಯಾನ್ ಮಾಡುವ ಮೂಲಕವೇ ಕೆಲವೇ ನಿಮಿಷಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಇ-ಕೆವೈಸಿ ಪೂರ್ಣಗೊಳಿಸಬಹುದಾಗಿದೆ.

ಮೊದಲ ಹಂತದಲ್ಲಿ 8 ಜಿಲ್ಲೆಗಳಲ್ಲಿ ಲಭ್ಯ, ಶೀಘ್ರದಲ್ಲೇ ರಾಜ್ಯವ್ಯಾಪಿ ಜಾರಿ

ಈ ವಿನೂತನ ಸೇವೆಯನ್ನು ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ರಾಜ್ಯದ 8 ಪ್ರಮುಖ ಜಿಲ್ಲೆಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇಲ್ಲಿನ ಯಶಸ್ವಿ ಕಾರ್ಯಾಚರಣೆಯ ಬಳಿಕ ಅತ್ಯಂತ ಶೀಘ್ರದಲ್ಲೇ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.

ಮೊಬೈಲ್‌ನಲ್ಲಿ ‘ಅನ್ನ ಸೇವೆ’ ಆ್ಯಪ್ ಅಳವಡಿಸಿಕೊಂಡು ಜನರು ಸರಳ ಹಂತಗಳಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ e-KYC ಪೂರ್ಣಗೊಳಿಸುವ ಮೂಲಕ ಸರ್ಕಾರದ ಪಡಿತರ ಸೌಲಭ್ಯಗಳನ್ನು ಯಾವುದೇ ಅಡಚಣೆಯಿಲ್ಲದೆ ಮುಂದುವರಿಸಬಹುದು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others