ವಿಜಯಪುರ: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ್ಮೇಲೆ ಪಾದಯಾತ್ರೆ ಫಿಕ್ಸ್ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ. ಹೋರಾಟ, ಪಾದಯಾತ್ರೆ ಮಾಡುವುದಾದರೆ ಕೆಪಿಎಸ್‌ಸಿ ಹಗರಣ ಹೋರಾಟ ಮಾಡಲಿ ಎಂದು ತಿಳಿಸಿದ್ದಾರೆ.
ಆರ್ ಅಶೋಕ್, ಸುನೀಲ್ ಕುಮಾರ್ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು. ಆಗ ವಿಜಯೇಂದ್ರ 5 ನಿಮಿಷ ಬಾವಿಯಲ್ಲಿ ನಿಲ್ಲಲ್ಲಿಲ್ಲ. ಬರಿ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದ್ರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಮೇಲೆ ಪಾದಾಯತ್ರೆ ಗ್ಯಾರಂಟಿ ಆಗಿದೆ. ವಾರಂಟಿ ಮುಗಿದಿದೆ ಹೀಗಾಗಿ ತಮ್ಮ ಅಸ್ತಿತ್ವ ತೋರಿಸಲು, ಇದರಿಂದ ಹೀರೋ ಆಗಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ವಾಲ್ಮೀಕಿ ಹಗರಣದ ನೆಪದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ರಕ್ಷಿಸಲು ಎರಡೂ ಕಡೆಯವರು ಹೊಂದಾಣಿಕೆ ಮಾಡಿಕೊಂಡು ಸದನದ ಸಮಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಬರಗಾಲ, ರೈತರ ಸಮಸ್ಯೆಗಳು, ಕಲ್ಯಾಣ ಕರ್ನಾಟಕ ಹಾಗೂ ಬಿಡದಿ ಟೌನ್‌ಶಿಪ್‌ನಂತಹ ಪ್ರಮುಖ ವಿಷಯಗಳ ಚರ್ಚೆಯನ್ನು ಬಿಟ್ಟು ಒಬ್ಬ ವ್ಯಕ್ತಿಯ ರಾಜೀನಾಮೆಗಾಗಿ ಕಲಾಪ ಬಲಿ ನೀಡಲಾಗುತ್ತಿದೆ ಎಂದ ಅವರು, ಸದನವನ್ನು ಮತ್ತೊಂದು ವಾರ ವಿಸ್ತರಿಸಲು ಆಗ್ರಹಿಸಿದರು.
ಸದನದಲ್ಲಿ ರಾಜ್ಯದ ಸಮಸ್ಯೆ ಚರ್ಚೆ ಆಗಬೇಕಿತ್ತು. ಆದ್ರೆ ಒಬ್ಬ ವ್ಯಕ್ತಿ ರಾಜೀನಾಮೆ ವಿಚಾರಕ್ಕೆ ಸದನ ಬಲಿಯಾಗುತ್ತಿದೆ. ಕಾವೇರಿ ನೀರಿನ ಬಗ್ಗೆ ಚರ್ಚೆ ಆಗಬೇಕಾಗಿತ್ತು. ರೈತರಿಗೆ ಸರಿಯಾದ ಪರಿಹಾರ ಸಿಕ್ತಿಲ್ಲ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಭೀಕರವಾಗಿದೆ. ಅದರ ಬಗ್ಗೆ ಚರ್ಚೆ ಮಾಡದೇ ಸದನ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜನರ ಸಮಸ್ಯೆ ಚರ್ಚೆ ಮಾಡದೆ ಇದ್ರೆ ಜನರಿಗೆ ಹೇಗೆ ಉತ್ತರ ಕೊಡುವುದು? ಉದ್ದೇಶಪೂರ್ವಕವಾಗಿ ಸದನ ಸಮಯ ಹಾಳು ಮಾಡ್ತಿದ್ದಾರೆ. ಇನ್ನೊಂದು ವಾರ ಸದನ ಮುಂದುವರೆಸಬೇಕು. ಎಲ್ಲರಿಗೂ ಚರ್ಚೆ ಮಾಡಲು ಅವಕಾಶ ಕೊಡಬೇಕು ಎಂದು ಯತ್ನಾಳ್ ಆಗ್ರಹಿಸಿದರು.
ಸಿಎಂ ಡಿಕೆ ಶಿವಕುಮಾರ್ ಅವರನ್ನು ರಕ್ಷಣೆ ಮಾಡಲು ಹೊಂದಾಣಿಕೆ ಮಾಡಿಕೊಂಡು ಸದನ ನಡೆಯದಂತೆ ನೋಡಿಕೊಳ್ತಿದ್ದಾರೆ ಎಂದು ಕಮಲ ನಾಯಕರ ವಿರುದ್ಧ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ ಮಾಡಿದ್ದಾರೆ.





