ಸೆ.1ರಿಂದ ಬಿಜೆಪಿಯಿಂದ ಪಾದಯಾತ್ರೆ: ಮಾಜಿ ಸಚಿವ ಬಿ.ಶ್ರೀರಾಮುಲು ಬಳ್ಳಾರಿ ಚಲೋ ಪೋಸ್ಟರ್ ಬಿಡುಗಡೆ

ಬೆಂಗಳೂರು: ಸೆಪ್ಟೆಂಬರ್ 1 ರಂದು ಲಿಂಗಸಗೂರಿನಿಂದ ಆರಂಭವಾಗಲಿರುವ ಬಿಜೆಪಿ ಪಾದಯಾತ್ರೆ ಸೆಪ್ಟೆಂಬರ್ 10 ರಂದು ಬಳ್ಳಾರಿಯಲ್ಲಿ ಮುಕ್ತಾಯವಾಗಲಿದೆ. ಒಂಬತ್ತು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಹಾದು ಬರಲಿದೆ ಎಂದು ಮಾಜಿ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪಾದಯಾತ್ರೆಯ ಲೋಗೋ ಬಿಡುಗಡೆ ಮಾಡಿ ಮಾತನಾಡಿದ ಅವರು, ಲಿಂಗಸಗೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಎಚ್.ಡಿ ಕುಮಾರಸ್ವಾಮಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿರಲಿದ್ದಾರೆ ಎಂದು ಹೇಳಿದರು. ಮಸ್ಕಿ, ಸಿಂಧನೂರು, ಕಾರಟಗಿ, ಗಂಗಾವತಿ, ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಮೂಲಕ ಸಾಗುವ ಪಾದಯಾತ್ರೆ ಬಳ್ಳಾರಿ ನಗರದಲ್ಲಿ ಸಮಾರೋಪಗೊಳ್ಳಲಿದೆ ಎಂದರು.

ಒಂದೇ ವಿಷಯಕ್ಕೆ ಎರಡು ಬಾರಿ ರಾಜೀನಾಮೆ…

ಸಚಿವ ನಾಗೇಂದ್ರ ಅವರು ವಾಲ್ಮೀಕಿ ಹಗರಣ ಸಂಬಂಧ ಎರಡು ಬಾರಿ ರಾಜೀನಾಮೆ ನೀಡಿದ್ದಾರೆ. ಇದು ವಿಶೇಷ. ಹಗರಣ ನಡೆದಿರುವುದನ್ನು ಆಗಿನ ಸಿಎಂ ಸಿದ್ದರಾಮಯ್ಯ ಅವರು ಒಪ್ಪಿಕೊಂಡಿದ್ದರು.̇ 87 ಕೋಟಿ ಹಣ ವರ್ಗಾವಣೆ ಆಗಿದ್ದು ಬಯಲಿಗೆ ಬಂದಿತ್ತು. ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಬಿಜೆಪಿ ಸೋಲಿಸಲು ವಾಲ್ಮೀಕಿ ನಿಗಮದ ಹಣ ಬಳಕೆಯಾಗಿತ್ತು ಎಂದು ವಿವರಿಸಿದರು.

ಹೋರಾಟ ಮಾಡಿದವರಿಗೆ ಧನ್ಯವಾದ…

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕರು, ವಿಧಾನ ಪರಿಷತ್ ಸದಸ್ಯರು ಸದನದಲ್ಲಿ ಸಾಕಷ್ಟು ಹೋರಾಟ ಮಾಡಿದರು. ಅವರಿಗೆ ದಲಿತ ಮತ್ತು ಹಿಂದುಳಿದ ವರ್ಗಗಳ ಪರವಾಗಿ ಧನ್ಯವಾದಗಳು ಎಂದರು.

ಸಿಎಂ ಡಿಕೆಶಿ ಬುದ್ಧಿವಂತರು..

ಸಚಿವ ನಾಗೇಂದ್ರ ಅವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು  ಸಮರ್ಥಿಸಿಕೊಳ್ಳಬಹುದಾಗಿತ್ತು. ಆದರೆ ಹಾಗೆ ಅವರು ಮಾಡಲಿಲ್ಲ. ವಿರೋಧ ಪಕ್ಷಗಳು ಹೇಗೆ ರಾಜೀನಾಮೆಗೆ ಒತ್ತಾಯಿಸುತ್ತಿದ್ದವೊ ಅದೇ ರೀತಿ ನಾಗೇಂದ್ರ ರಾಜೀನಾಮೆ ಪಡೆಯಬೇಕು ಎಂಬ ಆಲೋಚನೆ ಸಹ ಸಿಎಂ ಆವರಲ್ಲಿ  ಇತ್ತು ಎಂದರು.

ರಾಜೀನಾಮೆ ನೀಡುವ ವೇಳೆ ನಾಗೇಂದ್ರ ಅವರು ಕಣ್ಣೀರು ಹಾಕಿದರು. ಹಾಗೆ ಮಾಡಲು ಯಾರು ಹೇಳಿದ್ದರೊ ಗೊತ್ತಿಲ್ಲ. ನಿಮ್ಮ ಕಣ್ಣೀರಿಗೆ ಬಿಜೆಪಿ ಕಾರಣವಲ್ಲ. ಅದಕ್ಕೆ ಕಾಂಗ್ರೆಸ್ ಕಾರಣ. ನೀವೇ ಸಚಿವರಾಗಿದ್ದಾಗ ಭ್ರಷ್ಟಾಚಾರ ನಡೆದಿದೆ. ಬಹುಕೋಟಿ ಹಗರಣ ಆದರೆ ವಿರೋಧ ಪಕ್ಷ ಕಣ್ಣು ಮುಚ್ಚಿ ಕೂರಲು ಆಗಲ್ಲ. ನಮ್ಮ ಸ್ವಾರ್ಥಕ್ಕೆ ಹೋರಾಟ ಮಾಡಿಲ್ಲ. ಎಸ್‍ಟಿ ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಹೋರಾಡಿದೆವು ಎಂದು ಹೇಳಿದರು.

ಬಿಜೆಪಿಯವರು ಮನುವಾದಿಗಳೆಂದು ಟೀಕೆ ಮಾಡುವ ನಾಗೇಂದ್ರ ಅವರನ್ನು ವಿಧಾನಸೌಧದ ಮೆಟ್ಟಿಲು ಹತ್ತಿಸಿದ್ದೇ ಬಿಜೆಪಿ. 2013 ರಲ್ಲಿ ಗೆಲುವು ಸಾಧಿಸಿದಾಗ ಜನಾರ್ದನ ರೆಡ್ಡಿ ಸೇರಿ ಹಲವು ಬಿಜೆಪಿ ನಾಯಕರು ನಾಗೇಂದ್ರ ಅವರ ಜೊತೆಯಲ್ಲಿದ್ದರು. ಆಗ ಮನುವಾದಿಗಳು ಕಂಡಿಲ್ಲ ಎಂದು ತಿಳಿಸಿದರು.

ಕರ್ಮ ಬೆನ್ನು ಹತ್ತಿದೆ…

ಹಗರಣದಲ್ಲಿ ದಲಿತ ಸಮುದಾಯದ ಚಂದ್ರಶೇಖರ್ ಎಂಬುವರು ಬೆದರಿಕೆ, ಹಿಂಸೆ ತಾಳದೆ ಆತ್ಮಹತ್ಯೆ ಮಾಡಿಕೊಂಡರು. ಹಗರಣದ ಕರ್ಮ ನಾಗೇಂದ್ರ ಅವರ ಬೆನ್ನು ಹತ್ತಿದೆ. ಮೃತ ಅಧಿಕಾರಿ ಪತ್ನಿ, ಮಕ್ಕಳು ಕಣ್ಣೀರು ಹಾಕ್ತ ಇದ್ದಾರೆ. ಆ ಕುಟುಂಬದ ಕಡೆ ಇವರು ಕಣ್ಣೆತ್ತಿ ಸಹ ನೋಡಿಲ್ಲ ಎಂದು ದೂರಿದರು.

ಕಾಂಗ್ರೆಸ್ ಅನ್ನು ಈ ದೇಶದ ದಲಿತರು ಎಂದೂ ಕ್ಷಮಿಸುವುದಿಲ್ಲ. ಬಾಬಾ ಸಾಹೇಬರನ್ನು ಸೋಲಿಸಿದ ಕಾಂಗ್ರೆಸ್, ಜಗಜೀವನ್ ರಾಮ್ ಅವರನ್ನು ಬಳಸಿಕೊಂಡು ತುರ್ತು ಪರಿಸ್ಥಿತಿ ಹೇರಿತು. ಪ್ರಧಾನಿಯಾಗದಂತೆ ಅವರನ್ನು ತುಳಿಯಿತು. ದಲಿತರನ್ನು ಬಳಸಿಕೊಂಡು ಕಾಂಗ್ರೆಸ್ ಹೊಲಸು ಕೆಲಸ ಮಾಡುತ್ತಾ ಬರುತ್ತಿದೆ. ಎರಡು ದಿನ ಕೋಪಿಸಿಕೊಳ್ಳುವ ದಲಿತರು ಮಾರನೇ ದಿನ ಎಲ್ಲಾ ಮರೆಯುತ್ತಾರೆ. ಅವರನ್ನು ಹೇಗೆ ಬೇಕು ಹಾಗೆ ಬಳಸಿಕೊಳ್ಳಬಹುದು ಎಂದು ಕಾಂಗ್ರೆಸ್ ನೋಡುತ್ತದೆ ಎಂದರು. ಮೀಸಲಾತಿ ವಿಚಾರದಲ್ಲೂ ಕಾಂಗ್ರೆಸ್ ಮೋಸ ಮಾಡಿದೆ. ಮೀಸಲಾತಿ ಕಸಿದು ಅನ್ಯಾಯ ಮಾಡಿತು. ಸರ್ಕಾರಿ ನೇಮಕಾತಿಯಲ್ಲೂ ಮೀಸಲಾತಿ ಕಡಿಮೆ ಮಾಡಿದರು ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ನಿರ್ನಾಮ….

ದಲಿತರ ಕಣ್ಣೀರಿನ ಶಾಪ ಮುಂದಿನ ದಿನದಲ್ಲಿ ತಟ್ಟಲಿದೆ. ಕಾಂಗ್ರೆಸ್ ಪಕ್ಷ ನಿರ್ನಾಮ ಆಗಲಿದೆ. ಎಷ್ಟು ಸಾರಿ ಮೋಸ ಆದರೂ ದಲಿತರು ಸುಮ್ಮನಿರಲ್ಲ. ಈ ಸರ್ಕಾರದವರು ಎಸ್‍ಸಿಪಿ/ಟಿಎಸ್‍ಪಿ ಹಣವನ್ನೂ ದುರ್ಬಳಕೆ ಮಾಡಿಕೊಂಡರು. ಸಂವಿಧಾನ ವಿರೋಧಿಗಳು ಸಂವಿಧಾನದ ಪ್ರತಿ ಹಿಡಿದು ಓಡಾಡುತ್ತಾರೆ. ಕಳ್ಳರು, ಭ್ರಷ್ಟಾಚಾರಿಗಳು, ಸುಳ್ಳರು, ಮೋಸಗಾರರಿಗೆ ಸಂವಿಧಾನ ಹಿಡಿಯುವ ಹಕ್ಕು ಇಲ್ಲ. ಅವರನ್ನು ಬಾಬಾ ಸಾಹೇಬರು ಕ್ಷಮಿಸಲ್ಲ. ಸಂವಿಧಾನದ ಕಾರಣದಿಂದಲೇ ನಾಗೇಂದ್ರ ರಾಜೀನಾಮೆ ನೀಡಿದ್ದು, ಜೈಲಿಗೆ ಹೋಗಿದ್ದು ಎಂದು ವಿವರಿಸಿದರು.

ಚುನಾವಣೆಗೆ ನಿಲ್ಲಿ ಎಂದು ನಾಗೇಂದ್ರ ಸವಾಲು ಹಾಕಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಜನತಾ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ. ಆವೇಶ ಪಡಬೇಡಿ, ನೀವು ತಪ್ಪು ಮಾಡಿದ್ದರಿಂದ ಪಶ್ಚಾತ್ತಾಪ ಕಾಡುತ್ತಿದೆ. ತಪ್ಪನ್ನು ಒಪ್ಪಿಕೊಳ್ಳಿ ಎಂದು ಹೇಳಿದರು.

ವ್ಯಾಲಿಡಿಟಿ ಮುಗಿದಿದೆ….

ನಾಗೇಂದ್ರ ಸಿನಿಮಾ ಚೆನ್ನಾಗಿ ನಡೆಯುತ್ತವೆ. ವಿರೋಧ ಪಕ್ಷ ಜವಾಬ್ದಾರಿ ನಿರ್ವಹಿಸಿದೆ. ನಿಮ್ಮ ಕಾಂಗ್ರೆಸ್ ಪಕ್ಷ ಉಳಿಸಿಕೊಳ್ಳಲಿಲ್ಲ. ಸೂಟ್‍ಕೇಸ್ ಕೊಡ್ತಿದ್ದರು ಮಂತ್ರಿ ಮಾಡಿದರು. ಆ ಸೂಟ್ ಕೇಸ್‍ದು ಅವಧಿ ಮುಗಿದಿದೆ. ವ್ಯಾಲಿಡಿಟಿ ಮುಗಿದ ಕಾರಣ ಸಚಿವ ಸ್ಥಾನದಿಂದ ತೆಗೆದು ಹಾಕಿದರು. ಹಗರಣದ ಹಣವನ್ನು ಬೇರೆ ಬೇರೆ ಕಡೆ ಹಂಚಿದ್ದರಿಂದ ಹಣದ ತೂಕ ಕಡಿಮೆಯಾಗಿ ಸಚಿವ ಸ್ಥಾನದಿಂದ ಹೊರ ಹಾಕಿದರು ಎಂದು ವ್ಯಂಗ್ಯವಾಡಿದರು.

ದಲಿತ ನಾಯಕ ಕೆ.ಎನ್.ರಾಜಣ್ಣ ಅವರನ್ನೂ ಸಚಿವ ಸ್ಥಾನದಿಂದ ತೆಗೆದರು. ಅವರನ್ನೂ ಬಲಿಪಶು ಮಾಡಿದರು. ಆಗ ಇಲ್ಲದ ಮೊಸಳೆ ಕಣ್ಣೀರು, ನಾಟಕ, ದಲಿತರ ಮೇಲಿನ ಅಭಿಮಾನ ಈಗ ಯಾಕೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ಗೆ ಒತ್ತೆ ಇಡುವ ಕೆಲಸ…

ನಾಗೇಂದ್ರ ಪಕ್ಷದ ಆಸ್ತಿ ಎಂದು ಸಿಎಂ ಹೇಳಿದ್ದಾರೆ. ನಾಗೇಂದ್ರ ಕಾಂಗ್ರೆಸ್ ಪಕ್ಷದ ಆಸ್ತಿ, ಸೋನಿಯಾ, ರಾಹುಲ್, ಪ್ರಿಯಾಂಕ, ಕೆಪಿಸಿಸಿ ಆಸ್ತಿ ಆಗಿದ್ದಾರೆ. ಜನರ ಹಣವನ್ನು ಕಾಂಗ್ರೆಸ್‍ಗೆ ಒತ್ತೆ ಇಡುವ ಕೆಲಸವನ್ನು ನಾಗೇಂದ್ರ ಮಾಡಿದ್ದಾರೆ.  ಇಂದು ನಾಗೇಂದ್ರ ಅವರು ಮನೆ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಡೀ ಕಾಂಗ್ರೆಸ್ ಪಕ್ಷ ಮನೆಗೆ ಹೋಗಲಿದೆ. ಅದನ್ನು ಬಿಜೆಪಿ ಮಾಡಲಿದೆ ಎಂದರು. 2028 ಕ್ಕೆ ನಾಗೇಂದ್ರ ಅವರು ಎಲ್ಲಿ ಸ್ಪರ್ಧಿಸುತ್ತಾರೋ ಅಲ್ಲೇ ಸ್ಪರ್ಧಿಸುತ್ತೇನೆ. ಇಡೀ ಸರ್ಕಾರವನ್ನೇ ವಜಾ ಮಾಡಲಿ. ಎಲ್ಲಾ ಕಡೆ ಚುನಾವಣೆ ನಡೆಯಲಿ. ಇಂದೇ ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ಸವಾಲು ಎಸೆದರು.

ರಿಜೆಕ್ಟೆಡ್ ಪೀಸ್ ಮತ್ತೆ ಮಂತ್ರಿ….

ಸಿದ್ದರಾಮಯ್ಯ ಅವರು ನಾಗೇಂದ್ರ ಅವರನ್ನು ರಿಜೆಕ್ಟ್ ಮಾಡಿದ್ದರು. ಅವರು ರಿಜೆಕ್ಟೆಡ್ ಪೀಸ್. ಅವರ ಮೇಲೆ ಹಲವಾರು ಪ್ರಕರಣ ಇದ್ದರೂ ಡಿ ಕೆ ಶಿವಕುಮಾರ ಅವರು ಸಚಿವರಾಗಿ ಮಾಡಿದರು ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others