ನವದೆಹಲಿ: ವಿಸ್ತರಿತ ಬ್ರಿಕ್ಸ್ ಗುಂಪಿನೊಳಗೆ ವ್ಯಾಪಾರವನ್ನು ಮತ್ತಷ್ಟು ಗಾಢಗೊಳಿಸಲು ಮೂರು ಆಧಾರಸ್ತಂಭಗಳ ಕಾರ್ಯತಂತ್ರವನ್ನು ರೂಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬ್ರಿಕ್ಸ್ ಶೃಂಗಸಭೆ ಆರಂಭದ ದಿನ ಮಾತನಾಡಿದ ಅವರು, ಸುರಕ್ಷಿತ ಸಮುದ್ರ ಮಾರ್ಗಗಳು, ಮುಕ್ತ ಪೂರೈಕೆ ಮಾರ್ಗಗಳು ಹಾಗೂ ನಾವಿಕರ ಸುರಕ್ಷತೆ ಖಚಿತಪಡಿಸಿಕೊಳ್ಳುವುದು ಬಲಿಷ್ಠ ಆರ್ಥಿಕ ಏಕೀಕರಣಕ್ಕೆ ನಿರ್ಣಾಯಕವಾಗಿದೆ ಎಂದು ಹೇಳಿದರು. ಭೌಗೋಳಿಕ-ರಾಜಕೀಯ ಸಂಘರ್ಷಗಳು ಜಾಗತಿಕ ವಾಣಿಜ್ಯಕ್ಕೆ ಪದೇಪದೇ ಅಡ್ಡಿಪಡಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೆಚ್ಚುತ್ತಿರುವ ರಕ್ಷಣಾತ್ಮಕ ವ್ಯಾಪಾರ ನೀತಿಗಳು, ನಿರ್ಬಂಧಗಳು ಮತ್ತು ಭೌಗೋಳಿಕ-ರಾಜಕೀಯ ವಿಭಜನೆಯ ವ್ಯಾಪಕ ಹಿನ್ನೆಲೆಯಲ್ಲಿ ಮೋದಿಯವರ ಈ ಪ್ರಸ್ತಾವನೆಗಳು ಬಂದಿವೆ. ಜಾಗತಿಕ ದಕ್ಷಿಣದ ರಾಷ್ಟ್ರಗಳು ಹೆಚ್ಚು ಸ್ಥಿತಿಸ್ಥಾಪಕ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಬ್ರಿಕ್ಸ್ ಅನ್ನು ಅಳೆಯಬಹುದಾದ ಆರ್ಥಿಕ ಏಕೀಕರಣದತ್ತ ಕೊಂಡೊಯ್ಯುವ ಪ್ರಸ್ತಾವನೆಯನ್ನು ಮೋದಿ ಮುಂದಿಟ್ಟರು.
ಬ್ರಿಕ್ಸ್‌ನ ಆರ್ಥಿಕ ಶಕ್ತಿ ವಿಶ್ವದ ಉಳಿದ ಭಾಗಕ್ಕಿಂತ ಸುಮಾರು ಎರಡು ಪಟ್ಟು ವೇಗದಲ್ಲಿ ಬೆಳೆಯುತ್ತಿದೆ ಎಂದು ಮೋದಿ ಹೇಳಿದರು. ಬ್ರಿಕ್ಸ್ ರಾಷ್ಟ್ರಗಳು ನಾವೀನ್ಯತೆ ಮತ್ತು ಪರಿಹಾರಗಳ ಹೊಸ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ ಎಂದರು.
ಬ್ರಿಕ್ಸ್ ತನ್ನ ಮೂರನೇ ದಶಕಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಪ್ರಮುಖ 10 ವ್ಯಾಪಾರ ಅಡೆತಡೆಗಳನ್ನು ನಿವಾರಿಸುವ ಕುರಿತು ವರದಿಯೊಂದನ್ನು ಸಿದ್ಧಪಡಿಸಲು ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಮುಂದಾಗಬಹುದೇ? ಇತರ ಬ್ರಿಕ್ಸ್ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಪ್ರತಿ ವರ್ಷ 100 ಬ್ರಿಕ್ಸ್ ಸ್ಟಾರ್ಟ್‌ಅಪ್‌ಗಳಿಗೆ ನಾವು ನೆರವು ನೀಡಬಹುದೇ? ನಮ್ಮ ಉದ್ಯಮಗಳ ನಡುವೆ 1,000 ಹೊಸ ಪಾಲುದಾರಿಕೆಗಳನ್ನು ರೂಪಿಸಬಹುದೇ? ಈ ಮೂರು ಮಾನದಂಡಗಳ ಆಧಾರದಲ್ಲಿ ನಮ್ಮ ಪ್ರಗತಿಯನ್ನು ಪ್ರತಿವರ್ಷ ಪರಿಶೀಲಿಸಬೇಕು ಎಂದು ಹೇಳಿದರು.
ಇದೇ ವೇಳೆ, ಜಾಗತಿಕ ವ್ಯಾಪಾರ ವಿಸ್ತರಣೆಯ ತಮ್ಮ ದೃಷ್ಟಿಕೋನದಲ್ಲಿ ಸಮುದ್ರ ಭದ್ರತೆಗೆ ಮೋದಿ ಪ್ರಮುಖ ಸ್ಥಾನ ನೀಡಿದರು. ಸಾಗಣೆ ಮಾರ್ಗಗಳ ಭದ್ರತೆಯಿಂದ ಆರ್ಥಿಕ ಬೆಳವಣಿಗೆ ಮತ್ತು ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತೆಯನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ದೆಹಲಿಯಲ್ಲಿ ಬ್ರಿಕ್ಸ್ ಬಿಸಿನೆಸ್ ಫೋರಂನ್ನುದ್ದೇಶಿಸಿ ಮಾತನಾಡಿದ ಮೋದಿ, ಬ್ರಿಕ್ಸ್ ರಾಷ್ಟ್ರಗಳ ನಡುವಿನ ಪ್ರಮುಖ 10 ವ್ಯಾಪಾರ ಅಡೆತಡೆಗಳನ್ನು ಗುರುತಿಸಿ ನಿವಾರಿಸಲು ಬ್ರಿಕ್ಸ್ ಬಿಸಿನೆಸ್ ಕೌನ್ಸಿಲ್ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಲ್ಲದೆ, ಪ್ರತಿ ವರ್ಷ 100 ಸ್ಟಾರ್ಟ್‌ಅಪ್‌ಗಳು ಇತರ ಬ್ರಿಕ್ಸ್ ಮಾರುಕಟ್ಟೆಗಳಿಗೆ ವಿಸ್ತರಿಸಲು ನೆರವು ನೀಡಬೇಕು ಹಾಗೂ ವರ್ಷಕ್ಕೆ 1,000 ಹೊಸ ಉದ್ಯಮ ಪಾಲುದಾರಿಕೆಗಳನ್ನು ರೂಪಿಸಬೇಕು. ಈ ಮೂರು ಮಾನದಂಡಗಳಲ್ಲಿನ ಪ್ರಗತಿಯನ್ನು ಪ್ರತಿವರ್ಷ ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದರು.





