CM DK Shivakumar : ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ

ದೇವನಹಳ್ಳಿ: “ನವ ಯುವ ಪೀಳಿಗೆಯ ಅಗತ್ಯ,‌ ಆಲೋಚನೆಗೆ ತಕ್ಕಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸೂಚನೆಯಂತೆ ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿ ನೂತನ ಶಿಕ್ಷಣ ನೀತಿ ರೂಪಿಸಲು ಮುಂದಾಗಿದ್ದೇವೆ” ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದ ರಾಮಯ್ಯ ವಿಜ್ಞಾನ ಮತ್ತು ಮ್ಯಾನೇಜ್ ಮೆಂಟ್ ಸಂಸ್ಥೆ ಉದ್ಘಾಟನೆ ಹಾಗೂ ನಾರಾಯಣ ಪ್ರಜ್ಞಾಲಯ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಯರಾಂ ಅವರ ಹಾಗೂ ನನ್ನ ಪರಿಚಯ 40 ವರ್ಷಗಳಷ್ಟು ಹಳೆಯದು. ಜಯರಾಂ ಅವರನ್ನು ನಾನು ಗುರು ಎಂದು ಗೌರವಿಸುತ್ತೇನೆ. ಅವರಿಂದ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಶಿಕ್ಷಣ ಕ್ಷೇತ್ರಕ್ಕೆ ಎಂ ಎಸ್ ರಾಮಯ್ಯ ಕುಟುಂಬದ ಕೊಡುಗೆ ತುಂಬಾ ದೊಡ್ಡದು. ರಾಮಯ್ಯ ಅವರು ಬೆಂಗಳೂರು ಮತ್ತು ಕರ್ನಾಟಕ ಬೆಳೆಯಲು ಕೊಡುಗೆ ನೀಡಿದ್ದಾರೆ ಎಂದರು.

ರಾಮಯ್ಯ ಸಂಸ್ಥೆಯ ಪಕ್ಕದಲ್ಲೇ ಇರುವ ಭಾರತೀಯ ವಿಜ್ಞಾನ ಸಂಸ್ಥೆ ಆರಂಭವಾಗಲು ಸ್ವಾಮಿ ವಿವೇಕಾನಂದ, ಜಮ್‌ಶೆಟ್‌ಜಿ ಟಾಟಾ ಹಾಗೂ ಮೈಸೂರು ಮಹಾರಾಜರ ದೂರದೃಷ್ಟಿ ಕಾರಣ. ವಿವೇಕಾನಂದ ಹಾಗೂ ಜಮ್‌ಶೆಟ್‌ಜಿ ಟಾಟಾ ಅವರ ನಡುವಿನ ಸಂವಾದದ ಕಾರಣಕ್ಕೆ ಮಹತ್ವದ ಸಂಸ್ಥೆಗೆ ಮೈಸೂರು ಮಹಾರಾಜರು ಜಾಗ ನೀಡಿದರು.”ಎಂ.ಎಸ್. ರಾಮಯ್ಯ ಸಂಸ್ಥೆಯು ಜೆಎಸ್‌ಡಬ್ಲ್ಯೂ ಸಮೂಹದ ಸಜ್ಜನ್ ಜಿಂದಾಲ್ ಅವರಂತಹ ಹಲವು ಬೃಹತ್ ಉದ್ಯಮಿಗಳನ್ನು ಮತ್ತು ನಾಯಕರನ್ನು ಸೃಷ್ಟಿಸಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳ ಸಮೂಹ ತುಂಬಾ ದೊಡ್ಡದು. ಎಂದರು.

ವಿಶ್ವದ 80ಕ್ಕೂ ಹೆಚ್ಚು ಪ್ರಸಿದ್ಧ ವಿಶ್ವವಿದ್ಯಾಲಯಗಳು ಕರ್ನಾಟಕದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಆಸಕ್ತಿ ತೋರುತ್ತಿವೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ವೇಳೆ ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ ಅದು ಬೆಂಗಳೂರು ಮತ್ತು ಕರ್ನಾಟಕದ ಮೂಲಕವೇ ಸಾಧ್ಯ ಎಂದು ಹೇಳಿದ್ದೆ” ಎಂದು ತಿಳಿಸಿದರು.

“ಪರೋಪಕಾರಾಯ ಫಲಂತಿ ವೃಕ್ಷಾಃ ಶ್ಲೋಕದಂತೆ ಮರ, ನದಿ ಮತ್ತು ಹಸುಗಳು ಹೇಗೆ ತಮಗಾಗಿ ಅಲ್ಲದೆ ಸಮಾಜಕ್ಕಾಗಿ ಬಾಳುತ್ತವೆಯೋ, ಹಾಗೆಯೇ ರಾಮಯ್ಯ ಅವರ ಕುಟುಂಬದ ಆಸ್ತಿ ಮತ್ತು ಜ್ಞಾನವಂತ ಸಮಾಜ ನಿರ್ಮಾಣಕ್ಕೆ ಮುಡಿಪಾಗಿದೆ” ಎಂದರು.

“ಶಿಕ್ಷಣ ನೀತಿಯ ಕುರಿತು ಚರ್ಚಿಸಲು ಕಾಂಗ್ರೆಸ್ ಆಡಳಿತವಿರುವ 4 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ದೆಹಲಿಯಲ್ಲಿ ನಿಗದಿಯಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಅದು ರದ್ದಾಯಿತು. ವಿದ್ಯಾರ್ಥಿಗಳು ಕೇವಲ ಉದ್ಯೋಗ ಹುಡುಕುವವರಾಗದೆ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಾಗಬೇಕು ಎಂದು ತಿಳಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others