ಸೋನಿಯಾ ಗಾಂಧಿ ಅವರ ಆತ್ಮಕಥನ ‘Belonging: A Journey of Love’ ನ್ನು ಭಾರತದಲ್ಲಿ ಪ್ರಕಟಿಸುವ ವಿಚಾರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಕಾಂಗ್ರೆಸ್ ನ ಹಲವು ನಾಯಕರು ಹೇಳುತ್ತಿದ್ದಾರೆ.
ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ವಿರುದ್ಧ ಆರೋಪ ಮಾಡುತ್ತಿದ್ದು, ಕೆಲವರು ಪ್ರಕಾಶನ ಸಂಸ್ಥೆಯ ಮೇಲೆ ಸರ್ಕಾರದ ಒತ್ತಡವಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಪೆಂಗ್ವಿನ್ ಇಂಡಿಯಾ, ಸೋನಿಯಾ ಗಾಂಧಿ ಅವರ ಆತ್ಮಕಥನದ ಭಾರತೀಯ ಪ್ರಕಾಶಕರು ತಾವಲ್ಲ ಎಂದು ಸ್ಪಷ್ಟಪಡಿಸಿದ ಬಳಿಕ ಹಾಗೂ ಕಾಂಗ್ರೆಸ್ ನಾಯಕಿ ಸೂಚಿಸಲಾದ ಸಂಪಾದಕೀಯ ಬದಲಾವಣೆಗಳಿಗೆ ಒಪ್ಪದ ಕಾರಣ ಪುಸ್ತಕ ಪ್ರಕಟಿಸದಿರಲು ನಿರ್ಧರಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ನಂತರ ಕಾಂಗ್ರೆಸ್ ನಾಯಕರು ಪ್ರತಿಕ್ರಿಯಿಸುತ್ತಿದ್ದಾರೆ.
ಈ ಅಂಶಗಳು ‘ಕೇಳಿದ ಮಾತುಗಳ’ ಆಧಾರದ ಮೇಲಿಲ್ಲ, ಬದಲಾಗಿ ಸೋನಿಯಾ ಗಾಂಧಿ ಅವರ ಸಂಬಂಧಿತ ಸಂವಾದಗಳು ಮತ್ತು ಬೆಳವಣಿಗೆಗಳ ಕುರಿತ ಸ್ವಂತ ಮೌಲ್ಯಮಾಪನದ ಆಧಾರದ ಮೇಲೆ ಇವೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರು ಪ್ರಧಾನಿಯೊಂದಿಗೆ ರಾಜಕೀಯ ಪಕ್ಷದ ನಾಯಕಿಯಾಗಿ ಹಾಗೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಯಾಗಿ ನಡೆಸಿದ ವ್ಯವಹಾರಗಳಲ್ಲಿ ತಾವು ಕಂಡು ಅನುಭವಿಸಿದ ವಿಚಾರಗಳನ್ನೇ ಆತ್ಮಕಥನದಲ್ಲಿ ದಾಖಲಿಸಿದ್ದಾರೆ. ಅವರ ಹೇಳಿಕೆಗಳು ಪ್ರಾಮಾಣಿಕವಾಗಿವೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಇದು ಸಾಮಾನ್ಯ ವಾಸ್ತವಾಂಶ ಪರಿಶೀಲನೆಯ ವಿಷಯವಲ್ಲ, ಬದಲಾಗಿ ಆತ್ಮಕಥನದಲ್ಲಿನ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಮೂಲಭೂತ ಬದಲಾವಣೆಗಳ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಆ ಭಾಗಗಳನ್ನು ಗಣನೀಯವಾಗಿ ಬದಲಾಯಿಸುವುದು ಅಥವಾ ತೆಗೆದುಹಾಕುವುದು ಸೋನಿಯಾ ಗಾಂಧಿ ಅವರ ದಾಖಲೆಯ ಸ್ವರೂಪ ಮತ್ತು ಸಮಕಾಲೀನ ರಾಜಕೀಯ ಬೆಳವಣಿಗೆಗಳ ಕುರಿತ ಅವರ ಮೌಲ್ಯಮಾಪನವನ್ನೇ ಬದಲಾಯಿಸುತ್ತದೆ ಎಂಬುದು ಕಾಂಗ್ರೆಸ್‌ನ ಕಳವಳವಾಗಿದೆ.
ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಅಂತಾರಾಷ್ಟ್ರೀಯವಾಗಿ ಪ್ರಕಟಿಸಲಾಗುತ್ತಿರುವ ಅದೇ ಪುಸ್ತಕವನ್ನು ಭಾರತದಲ್ಲಿ ಪ್ರಕಟಿಸುವುದಕ್ಕೆ ಪ್ರಕಾಶನ ಸಂಸ್ಥೆಗೆ ಏನು ಅಡ್ಡಿಯಾಗಿದೆ ಎಂದು ಪ್ರಶ್ನಿಸಿದ್ದಾರೆ.
ವಿಶ್ವದಾದ್ಯಂತ ಮುದ್ರಿಸಲಾಗುತ್ತಿರುವುದನ್ನು ಭಾರತದಲ್ಲಿ ಮುದ್ರಿಸುವುದಕ್ಕೆ ಅವರನ್ನು ತಡೆಯುತ್ತಿರುವ ಕಾರಣ ಅಥವಾ ಒತ್ತಡವೇನು? ಎಂದು ಗೆಹ್ಲೋಟ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಮೋದಿ ಸರ್ಕಾರದ ಅವಧಿಯಲ್ಲಿ ಚೀನಾ ಭಾರತದ ಭೂಪ್ರದೇಶವನ್ನು ಅತಿಕ್ರಮಿಸಿದೆ ಎಂಬ ಆರೋಪಗಳಿಗೆ ಸಂಬಂಧಿಸಿದ ಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಲಾಗಿದೆ ಎಂದು ಆರೋಪಿಸಿದ್ದಾರೆ.
ಸೋನಿಯಾ ಗಾಂಧಿ ಮತ್ತು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ನಡುವಿನ ಪ್ರಮುಖ ಭಿನ್ನಾಭಿಪ್ರಾಯವೆಂದರೆ, ಪ್ರಧಾನಿ ನರೇಂದ್ರ ಮೋದಿ ಕುರಿತು ಗಾಂಧಿ ಅವರು ಮಾಡಿರುವ ನೇರ ಹಾಗೂ ಮುಕ್ತ ಮೌಲ್ಯಮಾಪನ ಮತ್ತು ಮೋದಿ ಅವರ ಆಡಳಿತಾವಧಿಯಲ್ಲಿ ನಡೆದ ಚೀನಾದ ಅತಿಕ್ರಮಣವನ್ನು ನಿಭಾಯಿಸಿದ ರೀತಿಯ ಕುರಿತ ಉಲ್ಲೇಖಗಳನ್ನು ಹಿಂಪಡೆಯುವಂತೆ ಪ್ರಕಾಶಕರು ಒತ್ತಾಯಿಸಿರುವುದು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.





