ಹೂಡಿಕೆದಾರರನ್ನು ಸೆಳೆಯಲು ಫ್ರಾನ್ಸ್, ನೆದರ್ಲೆಂಡ್ಸ್ ಗೆ ಹೊರಟ ಸಚಿವ ಎಂ.ಬಿ ಪಾಟೀಲ್ ನೇತೃತ್ವದ ನಿಯೋಗ

ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಗುರಿಯೊಂದಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ನೇತೃತ್ವದ ಉನ್ನತ ಮಟ್ಟದ ನಿಯೋಗವು ಸೋಮವಾರದಿಂದ (ಸೆ.7) ಶುಕ್ರವಾರದವರೆಗೆ (ಸೆ.12) ಐದು ದಿನಗಳ ಕಾಲ ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ನಲ್ಲಿ ರೋಡ್-ಶೋ ಮತ್ತು ಮಾತುಕತೆ ನಡೆಸಲಿದೆ.

ಸಚಿವರ ನಿಯೋಗ ಭಾನುವಾರ ಬೆಳಗಿನಜಾವ ಫ್ರಾನ್ಸ್ ಗೆ ಪ್ರಯಾಣ ಬೆಳೆಸಿದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಆರ್.ಯತೀಶ್ ಸೇರಿದಂತೆ ಇತರ ಅಧಿಕಾರಿಗಳು ನಿಯೋಗದಲ್ಲಿ ಇದ್ದಾರೆ.

ಫ್ರಾನ್ಸ್ ನಲ್ಲಿ ತಾವು ಸೋಮವಾರದಿಂದ ಬುಧವಾರದವರೆಗೆ ಇರಲಿದ್ದೇವೆ. ಈ ಅವಧಿಯಲ್ಲಿ ಫಾರ್ಮಸುಟಿಕಲ್ಸ್ ಕಂಪನಿಗಳಾದ ರಾಕೆಟ್ ಮತ್ತು ಎಲ್ಎಫ್ ಬಿ ಗ್ರೂಪ್, ಇನ್-ವಿಟ್ರೋ, ರೋಗ ನಿದಾನ ಕ್ಷೇತ್ರದಲ್ಲಿ ಹೆಸರು ಮಾಡಿರುವ ಬಯೋಮೆರಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ ವಲಯದ ಅಗ್ರಗಣ್ಯ ಕಂಪನಿಗಳಾದ ಹಚಿನ್ಸನ್, ಸಾಫ್ರಾನ್, ಥೇಲ್ಸ್, ಲೀಸಿ, ಮತ್ತು ಜಿಕ್ಯಾಟ್, ಆಟೋಮೋಟಿವ್ ಕ್ಷೇತ್ರದ ಸೋಮ್ಫೀ, ಪ್ರಿಸಿಷನ್ ಎಂಜಿನಿಯರಿಂಗ್ ವಲಯದ ಮೆಕಾಕ್ರೋಮ್, ಹೈನುಗಾರಿಕೆ ವಲಯದ ಸೆವೆನ್ಸಿಯಾ, ಮೆಟೀರಿಯಲ್ಸ್ ಕ್ಷೇತ್ರದ ಆರ್ಕೆಮಾ ಮುಂತಾದ ಕಂಪನಿಗಳೊಂದಿಗೆ ಬಂಡವಾಳ ಹೂಡಿಕೆ ಕುರಿತು ಮಾತುಕತೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಸೆ.10 ಮತ್ತು 11ರಂದು ತಾವು ನೆದರ್ಲೆಂಡ್ಸ್ ನಲ್ಲಿ ಸೆಮಿಕಂಡಕ್ಟರ್ ಕ್ಷೇತ್ರದ ನೆಕ್ಸ್ಪೀರಿಯಾ, ಅನಿಮಲ್ ನ್ಯೂಟ್ರಿಷನ್ ಕ್ಷೇತ್ರದ ರಾಯಲ್ ಡಿ ಹ್ಯೂಸ್, ರಾಯಲ್ ಬೋಸ್ಕಾಲಿಸ್, ಬ್ರೂವರೀಸ್ ಕ್ಷೇತ್ರದ ರಾಯಲ್ ಸ್ವಿಂಕಲ್ಸ್, ಚಾಕಲೇಟ್ ಕ್ಷೇತ್ರದ ಪರ್ಫೆಟ್ಟಿ ವ್ಯಾನ್ ಮೆಲ್ ಕಂಪನಿಗಳೊಂದಿಗೆ ರಾಜ್ಯದಲ್ಲಿ ಬಂಡವಾಳ ಹೂಡುವ ಬಗ್ಗೆ ವಿಚಾರ ವಿನಿಮಯ ನಡೆಸಲಾಗುವುದು ಎಂದು ಸಚಿವ ಪಾಟೀಲ ವಿವರಿಸಿದ್ದಾರೆ.

ರಾಜ್ಯಕ್ಕೆ ಹೆಚ್ಚು ಬಂಡವಾಳ ಬಂದು, ಉದ್ಯೋಗ ಸೃಷ್ಟಿ ಆಗಬೇಕೆಂದರೆ ನಾವೇ ಹೂಡಿಕೆದಾರರು ಇರುವಲ್ಲಿಗೆ ಹೋಗಬೇಕು. ಇಲ್ಲದೆ ಹೋದರೆ ಉದ್ಯಮಿಗಳು ಬೇರೆಬೇರೆ ರಾಜ್ಯಗಳಿಗೆ ಹೋಗಿಬಿಡುತ್ತಾರೆ. ನೆರೆಹೊರೆಯ ರಾಜ್ಯಗಳಿಂದ ತೀವ್ರ ಸ್ಪರ್ಧೆ ಇರುವುದರಿಂದ ಕಳೆದ ಮೂರು ವರ್ಷಗಳಿಂದ ನಾನಾ ದೇಶಗಳು ಮತ್ತು ರಾಜ್ಯಗಳಲ್ಲಿ ರೋಡ್-ಶೋ ಮತ್ತು ಮಾತುಕತೆ ನಡೆಸಲಾಗುತ್ತಿದೆ. ಫ್ರಾನ್ಸ್ ಮತ್ತು ನೆದರ್ಲೆಂಡ್ಸ್ ಪ್ರವಾಸ ಇದರ ಮುಂದುವರಿದ ಭಾಗವಾಗಿದೆ. ಇದೊಂದು ನಿರಂತರ ಉಪಕ್ರಮವಾಗಿದೆ ಎಂದು ಅವರು ನುಡಿದಿದ್ದಾರೆ.

ಹೂಡಿಕೆದಾರರಿಗೆ ರಾಜ್ಯದ ತಯಾರಿಕಾ ಮತ್ತು ರಫ್ತುಕೇಂದ್ರಿತ ಹೊಸ ಕೈಗಾರಿಕಾ ನೀತಿ, ಏಕಗವಾಕ್ಷಿ ಪದ್ಧತಿಯಡಿ ಒದಗಿಸುವ ತ್ವರಿತ ಸೇವೆಗಳು, ನಾವು ಕೊಡುತ್ತಿರುವ ಪ್ರೋತ್ಸಾಹನಾ ರಿಯಾಯಿತಿಗಳು, ಭೂಮಿ, ನೀರು, ವಿದ್ಯುತ್, ವಿಮಾನ ನಿಲ್ದಾಣ ಮುಂತಾದ ಸೌಲಭ್ಯಗಳು, ಕೈಗಾರಿಕಾ ಸೌಲಭ್ಯ ತಿದ್ದುಪಡಿ ಕಾಯ್ದೆ, ಇಂಧನ ಮತ್ತು ಇ.ವಿ. ನೀತಿ ಮುಂತಾದವುಗಳನ್ನು ಮನದಟ್ಟು ಮಾಡಿಕೊಡಲಾಗುವುದು ಎಂದು ಪಾಟೀಲ ಹೇಳಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others