ಬೆಳ್ತಂಗಡಿಯಲ್ಲಿ ಜಮೀನು ಕೊಡಿಸುವುದಾಗಿ ₹1 ಕೋಟಿಗೂ ಅಧಿಕ ಹಣ ಪಡೆದು ವಂಚನೆ, ಎಫ್‌ಐಆರ್ ದಾಖಲು

ದಕ್ಷಿಣ ಕನ್ನಡ: ಜಮೀನು ನೋಂದಣಿ ಮಾಡಿಸಿಕೊಡುವ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ ₹1 ಕೋಟಿಗೂ ಅಧಿಕ ಮೊತ್ತ ಪಡೆದು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಕುವೆಟ್ಟು ಗ್ರಾಮದ ಗುರುವಾಯನಕೆರೆ ‘ಸಸ್ಯೋದ್ಯಾನ’ ನಿವಾಸಿಗಳಾದ ಕೆ. ಸೋಮನಾಥ ನಾಯಕ್ ಹಾಗೂ ರಂಜನ್ ರಾವ್ ಎರ್ಡೂರು ವಿರುದ್ಧ ಬೆಳ್ತಂಗಡಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) 2023ರ ಸೆಕ್ಷನ್ 318(4) ಮತ್ತು 3(5)ರ ಅಡಿಯಲ್ಲಿ ಪ್ರಕರಣ (ಕ್ರೈಂ ನಂ: 91/2026) ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಕೊಟ್ಟಾರ ಚೌಕಿ ನಿವಾಸಿ ಶಶಿಧರ ಅಚ್ಯುತ ತೋಟಂತಿಲ (61) ಅವರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರಿ ಭೂಮಿ ಮಂಜೂರಾತಿ ನೆಪದಲ್ಲಿ ಹಣ ವಸೂಲಿ

ಶಶಿಧರ ಅವರು ಕುವೆಟ್ಟು ಗ್ರಾಮದ ಗುರುವಾಯನಕೆರೆ ವ್ಯಾಪ್ತಿಯಲ್ಲಿ ಜಾಗ ಖರೀದಿಸಲು ಪ್ರಯತ್ನಿಸುತ್ತಿದ್ದಾಗ ಸೋಮನಾಥ ನಾಯಕ್ ಅವರ ಸಂಪರ್ಕಕ್ಕೆ ಬಂದಿದ್ದರು. ಈ ವೇಳೆ ರಂಜನ್ ರಾವ್ ಅವರಿಗೆ ಸೇರಿದ ಸರ್ವೆ ನಂ. 85/3ಎ1 ರ 0.28.50 ಎಕರೆ ಜಮೀನಿನ ಜತೆಗೆ, ಅದಕ್ಕೆ ಹೊಂದಿಕೊಂಡಿರುವ 0.70.25 ಎಕರೆ ಸರ್ಕಾರಿ ಕುಮ್ಮಿ ಜಾಗವನ್ನು ರಾಜಕೀಯ ಪ್ರಭಾವ ಬಳಸಿ ದರ್ಖಾಸ್ತು ಮೂಲಕ ಮಂಜೂರು ಮಾಡಿಸಿಕೊಡುವುದಾಗಿ ಸೋಮನಾಥ ನಾಯಕ್ ಭರವಸೆ ನೀಡಿದ್ದರು. ಒಟ್ಟು 0.98.75 ಎಕರೆ (ಸುಮಾರು 1 ಎಕರೆ) ಭೂಮಿಯನ್ನು ನೋಂದಣಿ ಮಾಡಿಸಿಕೊಡಲು 2025ರ ಅಕ್ಟೋಬರ್ 4ರಂದು ₹90 ಲಕ್ಷಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಒಪ್ಪಂದದ ನಂತರ ಜಮೀನು ಮಂಜೂರಾತಿ ವೆಚ್ಚದ ನೆಪವೊಡ್ಡಿ ಆರೋಪಿಗಳು ಶಶಿಧರ ಅವರಿಂದ ಹಣ ಪಡೆದಿದ್ದಾರೆ. ರಂಜನ್ ರಾವ್ ಖಾತೆಗೆ ₹24 ಲಕ್ಷ, ಸೋಮನಾಥ ನಾಯಕ್ ಖಾತೆಗೆ ₹12,61,250, ಅವರ ಪತ್ನಿ ಕೆ. ವಿದ್ಯಾ ನಾಯಕ್ ಖಾತೆಗೆ ₹19 ಲಕ್ಷ, ಆಪ್ತ ಸಹಾಯಕರಾದ ದಯಾನಂದ ಪೂಜಾರಿ ಖಾತೆಗೆ ₹16 ಲಕ್ಷ, ಬಾಬು ಎ. ಖಾತೆಗೆ ₹8 ಲಕ್ಷ, ಸಂದೀಪ್ ಖಾತೆಗೆ ₹11 ಲಕ್ಷ, ಭಾರತಿ ಖಾತೆಗೆ ₹6 ಲಕ್ಷ ಹಾಗೂ ಸೋಮಶೇಖರ್ ಖಾತೆಗೆ ₹40 ಲಕ್ಷ ಸೇರಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು ₹1,00,61,250 ಹಣವನ್ನು ಹಂತ ಹಂತವಾಗಿ ವರ್ಗಾಯಿಸಿಕೊಳ್ಳಲಾಗಿತ್ತು.

ಭೂಕಬಳಿಕೆ ಮೊಕದ್ದಮೆಯಿಂದ ತಪ್ಪಿಸಿಕೊಳ್ಳಲು ತರಾತುರಿ ನೋಂದಣಿ

ಸದರಿ 0.70.25 ಎಕರೆ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ಸೋಮನಾಥ ನಾಯಕ್ ಅವರ ವಿರುದ್ಧ ಬೆಂಗಳೂರಿನ ಕರ್ನಾಟಕ ಭೂಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿತ್ತು. ಈ ಕಾನೂನು ಸಂಕಷ್ಟದಿಂದ ಪಾರಾಗುವ ಹುನ್ನಾರದಿಂದ, ಒಪ್ಪಂದ ಮಾಡಿಕೊಂಡಿದ್ದ ಪೂರ್ಣ ಜಮೀನಿನ ಬದಲಿಗೆ ಕೇವಲ 28 ಸೆಂಟ್ಸ್ ಕೃಷಿ ಭೂಮಿಯನ್ನು ಮಾತ್ರ 2026ರ ಮೇ 14ರಂದು ಶಶಿಧರ ಅವರ ಹೆಸರಿಗೆ ದಸ್ತಾವೇಜು ಸಂಖ್ಯೆ 693/2026-27 ರಂತೆ ತರಾತುರಿಯಲ್ಲಿ ನೋಂದಣಿ ಮಾಡಿಕೊಡಲಾಗಿತ್ತು. ಈ ಮೂಲಕ ಒಟ್ಟು ಸುಮಾರು ಒಂದು ಎಕರೆ ಜಾಗ ನೀಡುವುದಾಗಿ ₹90 ಲಕ್ಷಕ್ಕೆ ಕರಾರು ಮಾಡಿಕೊಂಡು, ₹1,00,61,250 ಪಡೆದು ನಂಬಿಕೆ ದ್ರೋಹ ಎಸಗಲಾಗಿದೆ ಎಂದು ಸಂತ್ರಸ್ತರು ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಪೊಲೀಸರು

ಭಾರೀ ಮೊತ್ತದ ಹಣ ಕಳೆದುಕೊಂಡು ವಂಚನೆಗೊಳಗಾದ ಸಂತ್ರಸ್ತ ಶಶಿಧರ ಅಚ್ಯುತ ತೋಟಂತಿಲ ಅವರು ನೀಡಿದ ವಿವರವಾದ ದೂರಿನ ಮೇರೆಗೆ ಬೆಳ್ತಂಗಡಿ ಠಾಣಾ ಪೊಲೀಸರು ಪ್ರಥಮ ವರ್ತಮಾನ ವರದಿ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others