ನೇಪಾಳದ ಭೋಟೆಕೋಶಿ ನದಿಯಲ್ಲಿ ದಿಢೀರ್ ಜಲಪ್ರಳಯ: 400 ಮಂದಿ ನಾಪತ್ತೆ, 8 ಜನರು ಸಾವು

ಕಠ್ಮಂಡು: ನೇಪಾಳ ಮತ್ತು ಟಿಬೆಟ್ ಗಡಿ ಭಾಗದ ರಸುವಾ ಜಿಲ್ಲೆಯಲ್ಲಿ ಭೋಟೆಕೋಶಿ ನದಿಯ ಉಗ್ರರೂಪಕ್ಕೆ ಕನಿಷ್ಠ ಎಂಟು ಮಂದಿ ಬಲಿಯಾಗಿದ್ದು, 105 ಭಾರತೀಯರು ಸೇರಿದಂತೆ 384ಕ್ಕೂ ಹೆಚ್ಚು ಪ್ರವಾಸಿಗರು ಪ್ರವಾಹದಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದಾರೆ.

ನೇಪಾಳ ಪ್ರವಾಸೋದ್ಯಮ ಮಂಡಳಿ (ಎನ್‌ಟಿಬಿ) ಮಾಹಿತಿ ಪ್ರಕಾರ, ನಾಪತ್ತೆಯಾದವರ ಪಟ್ಟಿಯಲ್ಲಿ ಒಟ್ಟು 291 ವಿದೇಶಿ ಪ್ರಜೆಗಳು ಹಾಗೂ 93 ಸ್ಥಳೀಯ ನೇಪಾಳಿಗಳಿದ್ದಾರೆ. ಭಾರತೀಯರಲ್ಲದೆ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್ ಮತ್ತು ಮಲೇಷ್ಯಾದಿಂದ ಆಗಮಿಸಿದ್ದ ಪ್ರವಾಸಿಗರೂ ನಾಪತ್ತೆಯಾಗಿದ್ದು, ಇವರ ಪತ್ತೆಗಾಗಿ ಪ್ರವಾಸಿ ಪೊಲೀಸ್ ಹಾಗೂ ಟ್ರಾವೆಲ್ ಏಜೆನ್ಸಿಗಳ ಸಹಯೋಗದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ.

ಮಾನಸಸರೋವರ ಯಾತ್ರಾರ್ಥಿಗಳೇ ಹೆಚ್ಚು ರಸುವಾಗಢಿ ಮತ್ತು ತಿಮುರೆ ಮಾರ್ಗದ ಮೂಲಕ ಟಿಬೆಟ್‌ನತ್ತ ಸಾಗುತ್ತಿದ್ದ ಕೈಲಾಸ ಮಾನಸಸರೋವರ ಯಾತ್ರಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದಾರೆ. ಜಲಪ್ರಳಯದ ಬಳಿಕ ಈ ಭಾಗದಲ್ಲಿ ಸಂವಹನ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರವಾಸಿಗರನ್ನು ಸಂಪರ್ಕಿಸಲು ಹರಸಾಹಸ ಪಡಲಾಗುತ್ತಿದೆ.

ಭಾರಿ ಆಸ್ತಿಪಾಸ್ತಿ ಹಾನಿ: ಸೇನೆಯಿಂದ ರಕ್ಷಣಾ ಕಾರ್ಯಾಚರಣೆ ಯಾವುದೇ ಮುನ್ಸೂಚನೆ ಇಲ್ಲದೆ ನದಿಯ ನೀರಿನ ಮಟ್ಟ ದಿಢೀರ್ ಏರಿಕೆಯಾದ ಪರಿಣಾಮ, ಗಡಿ ಭಾಗದಲ್ಲಿದ್ದ ಸೇತುವೆಗಳು, ಮನೆಗಳು, ಗೋದಾಮುಗಳು ಹಾಗೂ ನೂರಾರು ವಾಹನಗಳು ಪ್ರವಾಹದ ಸೆಳೆತಕ್ಕೆ ನೀರಿನಲ್ಲಿ ಕೊಚ್ಚಿಹೋಗಿವೆ. ಜಲವಿದ್ಯುತ್ ಘಟಕಗಳಿಗೂ ಅಪಾರ ಹಾನಿಯಾಗಿದೆ.

  • ನೇಪಾಳ ಸೇನೆಯು ಯುದ್ಧೋಪಾದಿಯಲ್ಲಿ ಕಾರ್ಯಾಚರಣೆಗಿಳಿದಿದ್ದು, 14ಕ್ಕೂ ಹೆಚ್ಚು ಹೆಲಿಕಾಪ್ಟರ್‌ಗಳು, ಡ್ರೋನ್‌ಗಳು ಹಾಗೂ ಶ್ವಾನದಳವನ್ನು ಶೋಧಕಾರ್ಯಕ್ಕೆ ನಿಯೋಜಿಸಿದೆ.
  • ಪ್ರವಾಹಕ್ಕೆ ಸಿಲುಕಿದ್ದ 25ಕ್ಕೂ ಅಧಿಕ ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಾಳುಗಳಿಗೆ ತ್ರಿಶೂಲಿಯಲ್ಲಿ ತಾತ್ಕಾಲಿಕ ತುರ್ತು ಚಿಕಿತ್ಸಾ ಘಟಕ ಸ್ಥಾಪಿಸಲಾಗಿದೆ.

ಹಿಮನದಿ ಒಡೆದ ಶಂಕೆ, ನದಿಪಾತ್ರದ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಸ್ಥಳೀಯವಾಗಿ ಮಳೆಯಾಗದಿದ್ದರೂ ಈ ಭೀಕರ ಪ್ರವಾಹ ಸೃಷ್ಟಿಯಾಗಲು ಟಿಬೆಟ್ ಭಾಗದ ಹಿಮನದಿ ಸರೋವರ ಒಡೆದಿರುವುದು (GLOF) ಅಥವಾ ಮೇಲ್ಭಾಗದ ಬೃಹತ್ ಭೂಕುಸಿತವೇ ಕಾರಣ ಎಂದು ಭೂವಿಜ್ಞಾನಿಗಳು ಅಂದಾಜಿಸಿದ್ದಾರೆ. ಭೋಟೆಕೋಶಿ ನದಿ ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನುವಾಕೋಟ್ ಮತ್ತು ಧಾದಿಂಗ್ ಸೇರಿದಂತೆ ಕೆಳಭಾಗದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ನದಿ ತೀರದ ನಿವಾಸಿಗಳನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others