ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ತರಲು ಹೊಸ ದಾರಿ ಹುಡುಕಿದ್ದ ಖದೀಮನೊಬ್ಬ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ಹದ್ದಿನ ಕಣ್ಣಿಗೆ ಬಿದ್ದಿದ್ದಾನೆ. ದುಬೈನಿಂದ ಬಾಯಿಯೊಳಗೆ ಚಿನ್ನದ ಕ್ಯಾಪ್ಸುಲ್ ಬಚ್ಚಿಟ್ಟುಕೊಂಡು ಬಂದಿದ್ದ ಮೊಹಮ್ಮದ್ ಸಿರಾಜ್ ಎಂಬಾತನನ್ನು ಸಿಐಎಸ್‌ಎಫ್ (CISF) ಯೋಧರು ವಶಕ್ಕೆ ಪಡೆದಿದ್ದಾರೆ.
ಮಾತನಾಡಲು ತಡವರಿಸಿದ್ದೇ ಮುಳುವಾಯ್ತು: ದುಬೈನಿಂದ ನಗರಕ್ಕೆ ಬಂದಿಳಿದಿದ್ದ ಈತ, ಬಳಿಕ ಗಾಜಿಯಾಬಾದ್‌ಗೆ ತೆರಳಲು ಡೊಮೆಸ್ಟಿಕ್ ಟರ್ಮಿನಲ್ ಕಡೆಗೆ ಹೆಜ್ಜೆ ಹಾಕುತ್ತಿದ್ದನು. ಭದ್ರತಾ ತಪಾಸಣಾ ಕೌಂಟರ್ ಬಳಿ ಬಂದಾಗ ಈತನ ಹಾವಭಾವ ಹಾಗೂ ಮುಖಚರ್ಯೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಧಿಕಾರಿಗಳು ಪ್ರಶ್ನಿಸಿದಾಗ ಸರಿಯಾಗಿ ಮಾತನಾಡಲಾಗದೆ ತಡಬಡಾಯಿಸಿದ್ದಾನೆ. ಈ ಅನುಮಾನವೇ ಆತನ ಅಸಲಿ ಕೃತ್ಯವನ್ನು ಬಯಲಿಗೆಳೆದಿದೆ.
ದವಡೆ ಸಂದಿಯಲ್ಲಿ 82 ಗ್ರಾಂ ಚಿನ್ನ: ಅಧಿಕಾರಿಗಳು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಕೂಲಂಕಷವಾಗಿ ಪರಿಶೀಲಿಸಿದಾಗ, ಆತ ತನ್ನ ಬಾಯಿಯ ಒಳಗಡೆ ಎರಡು ಲೋಹದ ಕ್ಯಾಪ್ಸುಲ್‌ಗಳನ್ನು ಬಚ್ಚಿಟ್ಟುಕೊಂಡಿರುವುದು ಪತ್ತೆಯಾಗಿದೆ. ಬಾಯಿಂದ ಹೊರತೆಗೆಸಿದ ಆ ಕ್ಯಾಪ್ಸುಲ್‌ಗಳಲ್ಲಿದ್ದ ಚಿನ್ನದ ತೂಕ ಬರೋಬ್ಬರಿ 82 ಗ್ರಾಂ ಎಂದು ತಿಳಿದುಬಂದಿದೆ.
ತಂತ್ರ ಫಲಿಸಲಿಲ್ಲ: ಲಗೇಜ್ ಬ್ಯಾಗ್ ಹಾಗೂ ಬಟ್ಟೆಗಳ ಸ್ಕ್ಯಾನಿಂಗ್ ವೇಳೆ ಸಿಕ್ಕಿಬೀಳುವ ಭಯದಿಂದ, ಕಸ್ಟಮ್ಸ್ ಕಣ್ಣು ತಪ್ಪಿಸಲು ಈತ ಬಾಯಿಯನ್ನೇ ಅಡಗುತಾಣ ಮಾಡಿಕೊಂಡಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಸಿಐಎಸ್‌ಎಫ್ ಸಿಬ್ಬಂದಿ, ಜಪ್ತಿ ಮಾಡಲಾದ ಚಿನ್ನದೊಂದಿಗೆ ಆತನನ್ನು ಕಸ್ಟಮ್ಸ್ ಇಲಾಖೆಗೆ ಒಪ್ಪಿಸಿದ್ದು, ಮುಂದಿನ ವಿಚಾರಣೆ ಮುಂದುವರಿದಿದೆ.





