ದೇಶದಲ್ಲಿ ಈರುಳ್ಳಿ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊರೆ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ. ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದ್ದು, ಮೊದಲ 10 ದಿನಗಳಲ್ಲೇ 17 ನಗರಗಳಲ್ಲಿ ಸುಮಾರು 4,000 ಟನ್ ಬಫರ್ ಈರುಳ್ಳಿಯನ್ನು ಮಾರಾಟ ಮಾಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ 2026ರ ಸಾಲಿಗೆ 1.21 ಲಕ್ಷ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್ ಆಗಿ ಸಂಗ್ರಹಿಸಿದೆ. ಎನ್ಸಿಸಿಎಫ್ ಮತ್ತು ಎನ್ಎಎಫ್ಇಡಿ ಮೂಲಕ ಈ ಸಂಗ್ರಹಿತ ಈರುಳ್ಳಿಯನ್ನು ಉತ್ಪಾದನಾ ಪ್ರದೇಶಗಳಿಂದ ಬೇಡಿಕೆ ಹೆಚ್ಚಿರುವ ನಗರಗಳಿಗೆ ಸಾಗಿಸಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಈರುಳ್ಳಿ ಬೆಲೆ ಗಗನಕ್ಕೇರಿತ್ತು. ಇದರ ನಡುವೆ ಬೆಂಗಳೂರಿನಲ್ಲಿ ಈರುಳ್ಳಿ ಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದ್ದು,ಎಲ್ಲೆಡೆ ಈರುಳ್ಳಿ ಬೆಲೆ 65-75 ರೂ.ಗೆ ಏರಿದೆ. ಇದರ ನಡುವೆ ಕೇಂದ್ರ ಸರ್ಕಾರ (Central Govt) ಗುಡ್ನ್ಯೂಸ್ ನೀಡಿದೆ. ನಾಫೆಡ್ನಿಂದ ಬೆಂಗಳೂರಿಗೆ ಈರುಳ್ಳಿ ಬಂದಿದ್ದು, ಅಗ್ಗದ ದರದಲ್ಲಿ ಮಾರಾಟವಾಗುತ್ತಿದೆ
ಕೆ.ಜಿಗೆ 35 ರೂ.ಯಂತೆ ಮಾರಾಟವಾಗುತ್ತಿದ್ದು, ಈರುಳ್ಳಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ಬೆಂಗಳೂರಿನ ನಾನಾ ಭಾಗದಲ್ಲಿ ನಾಫೆಡ್ ವಾಹನದ ಮೂಲಕ ಜನರಿಗೆ ಅಗ್ಗದ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ.
35ರೂ.ಗೆ ಈರುಳ್ಳಿ ಮಾರಾಟ : ಬೆಲೆ ನಿಯಂತ್ರಣದ ಉದ್ದೇಶದಿಂದ ಆಯ್ದ ನಗರಗಳಲ್ಲಿ ಬಫರ್ ಈರುಳ್ಳಿಯನ್ನು ಕೆ.ಜಿ.ಗೆ 35ರೂ.ಗೆಸಬ್ಸಿಡಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿಯನ್ನು ರೈಲಿನ ಮೂಲಕ ‘ಕಂದಾ ಎಕ್ಸ್ಪ್ರೆಸ್’ ಹಾಗೂ ಲಾರಿಗಳ ಮೂಲಕ ವಿವಿಧ ನಗರಗಳಿಗೆ ಸಾಗಿಸಲಾಗುತ್ತಿದೆ. ಈಗಾಗಲೇ ದೆಹಲಿ ಮತ್ತು ಚೆನ್ನೈಗೆ ‘ಕಂದಾ ಎಕ್ಸ್ಪ್ರೆಸ್’ ಮೂಲಕ ಈರುಳ್ಳಿ ತಲುಪಿದೆ. ಮುಂದಿನ ದಿನಗಳಲ್ಲಿ ಮೂರನೇ ರೈಲು ರೇಕ್ ಅನ್ನು ಗುವಾಹಟಿಗೆ ಕಳುಹಿಸಲು ಸಿದ್ಧತೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ, ಮುಂಬೈ, ಚೆನ್ನೈನಲ್ಲಿ ಎಷ್ಟಿದೆ ಬೆಲೆ? : ಸೆಪ್ಟೆಂಬರ್ 5ರ ಅಂಕಿ-ಅಂಶಗಳ ಪ್ರಕಾರ, ದೆಹಲಿಯಲ್ಲಿ ಈರುಳ್ಳಿ ಕೆ.ಜಿ.ಗೆ 58,ರೂ. ಮುಂಬೈನಲ್ಲಿ 53,ರೂ. ಚೆನ್ನೈನಲ್ಲಿ 63,ರೂ. ಹಾಗೂ ರಾಂಚಿಯಲ್ಲಿ 40ರಷ್ಟಿತ್ತು. ದೇಶಾದ್ಯಂತ ಈರುಳ್ಳಿಯ ಸರಾಸರಿ ಸಗಟು ಬೆಲೆ ಕೆ.ಜಿ.ಗೆ 42.79ರಷ್ಟಿತ್ತು.
ಎನ್ಸಿಸಿಎಫ್ ವ್ಯವಸ್ಥಾಪಕ ನಿರ್ದೇಶಕಿ ಅನೀಸ್ ಜೋಸೆಫ್ ಚಂದ್ರಾ ಅವರ ಪ್ರಕಾರ, ಸಂಸ್ಥೆಯೊಂದರಲ್ಲೇ ಇದುವರೆಗೆ 1,500 ಟನ್ ಬಫರ್ ಈರುಳ್ಳಿ ವಿವಿಧ ನಗರಗಳಲ್ಲಿ ಮಾರಾಟವಾಗಿದೆ. ಸಬ್ಸಿಡಿ ಮಾರಾಟದಿಂದ ಈರುಳ್ಳಿ ಬೆಲೆಯಲ್ಲಿ ಕೆ.ಜಿ.ಗೆ ಸುಮಾರು 2 ,ರೂ.ನಿಂದ 3ರಷ್ಟು ಇಳಿಕೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.





