ಬೆಂಗಳೂರು: ರಾಜ್ಯದಲ್ಲಿ ವೃದ್ಧಾಪ್ಯ, ವಿಧವೆ ಹಾಗೂ ಅಂಗವಿಕಲ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪಿಂಚಣಿದಾರರಿಗೆ ಸರ್ಕಾರ ದೊಡ್ಡ ಸಮಾಧಾನಕರ ನಿರ್ಧಾರ ಪ್ರಕಟಿಸಿದೆ. ಪರಿಶೀಲನೆ ಬಳಿಕ ವಾರ್ಷಿಕ ₹32,000 ದಿಂದ ₹1,20,000 ವರೆಗಿನ ಆದಾಯ ಮಿತಿ ಹೊಂದಿರುವ ನೈಜ ಫಲಾನುಭವಿಗಳ ಪಿಂಚಣಿಯನ್ನು ಯಥಾವತ್ತಾಗಿ ಮುಂದುವರಿಸಲು ಕಂದಾಯ ಇಲಾಖೆ ಅಧಿಕೃತ ಆದೇಶ ನೀಡಿದೆ.
ಆದಾಯ ಮಿತಿ ಹೆಚ್ಚಳದಿಂದ ದಶಕಗಳ ಸಮಸ್ಯೆಗೆ ಮುಕ್ತಿ
ಈ ನಿರ್ಧಾರದ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು, “ಹಿಂದೆ ನಿಗದಿಪಡಿಸಲಾಗಿದ್ದ ₹32,000 ಆದಾಯ ಮಿತಿಯಿಂದಾಗಿ ಅರ್ಹರಾದ ಲಕ್ಷಾಂತರ ಬಡವರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದರು. ಈ ಆದಾಯದ ಮಿತಿಯನ್ನು ಈಗ ₹1,20,000 ಕ್ಕೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.
23.14 ಲಕ್ಷ ಜನರ ದಾಖಲೆ ಮರುಪರಿಶೀಲನೆ
ಸರ್ಕಾರದ ಕುಟುಂಬ ದತ್ತಾಂಶದೊಂದಿಗೆ ಪಿಂಚಣಿದಾರರ ವಿವರಗಳನ್ನು ತಾಳೆ ಮಾಡಿದಾಗ ರಾಜ್ಯಾದ್ಯಂತ 23,14,544 ಫಲಾನುಭವಿಗಳ ಮಾಹಿತಿ ಸಂದೇಹಾಸ್ಪದವಾಗಿ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ‘ಸಂಯೋಜನೆ’ ಮೊಬೈಲ್ ಆ್ಯಪ್ ಬಳಸಿ ಸ್ಥಳದಲ್ಲೇ ಭೌತಿಕ ತಪಾಸಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ವಿಳಾಸದಲ್ಲಿ ಸಿಗದ ಹಾಗೂ ಆದಾಯ ಪ್ರಮಾಣಪತ್ರ ನೀಡದ 18,06,032 ಮಂದಿಯ ಪಿಂಚಣಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿತ್ತು.
ಅರ್ಹರಿಗೆ ಸಿಗಲಿದೆ ನಿರಂತರ ಪಿಂಚಣಿ ಭಾಗ್ಯ
ಮರುಪರಿಶೀಲನೆಯ ವೇಳೆ, ಪಟ್ಟಿಯಲ್ಲಿದ್ದ ಅನೇಕ ಫಲಾನುಭವಿಗಳು ₹32,000 ಕ್ಕಿಂತ ಹೆಚ್ಚು ಆದರೆ ₹1,20,000 ಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವುದು ದೃಢಪಟ್ಟಿದೆ. ಹೀಗಾಗಿ ನೈಜ ಫಲಾನುಭವಿಗಳಿಗೆ ಅನ್ಯಾಯವಾಗಬಾರದು ಎಂಬ ಕಾರಣಕ್ಕೆ ತಹಶೀಲ್ದಾರ್ಗಳ ತಪಾಸಣೆ ಬಳಿಕ ಈ ಮಿತಿಯೊಳಗಿರುವ ಎಲ್ಲಾ ಅರ್ಹರಿಗೂ ಪಿಂಚಣಿಯನ್ನು ಯಾವುದೇ ಅಡೆತಡೆಯಿಲ್ಲದೆ ವಿತರಿಸಲು ಸರ್ಕಾರ ಸೂಚನೆ ನೀಡಿದೆ.





