ಶ್ರೀರಂಗಪಟ್ಟಣ : ನಮ್ಮ ಯೋಜನೆಯ ಮುಖ್ಯ ಉದ್ದೇಶವೇ “ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವುದು”. ಆರೋಗ್ಯವಿಲ್ಲದೆ ಯಾವ ಅಭಿವೃದ್ಧಿಯೂ ಇಲ್ಲ. ಹಾಗಾಗಿ ಆರೋಗ್ಯವೇ ನಮ್ಮ ಮೊದಲ ಆದ್ಯತೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ವತಿಯಿಂದ ಶ್ರೀರಂಗಪಟ್ಟಣ ತಾಲೂಕಿನ ಕಡತನಾಳು ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಚನೆ ಬಿಸಿ ಟ್ರಸ್ಟ್ ಪಾಂಡವಪುರದ ಯೋಜನಾಧಿಕಾರಿ ಯಶ್ವಂತ್ ತಿಳಿಸಿದರು.
ಇಂದಿನ ಶಿಬಿರದಲ್ಲಿ ನಾರಾಯಣ ಹೃದಯಾಲಯ, ಮೈಸೂರುರವರಿಂದ ಹೃದಯ ಸಂಬಂಧಿ ತಪಾಸಣೆ, ಬಿಪಿ, ಏಕೋ ಕಾರ್ಡಿಯಾಗ್ರಮ್ ಮತ್ತು ತಜ್ಞರ ಸಲಹೆ ಸಿಗುತ್ತದೆ. ಹೃದಯಾಘಾತ ಇವತ್ತು ಯುವಕರಲ್ಲೂ ಕಾಣುತ್ತಿದೆ. ಮೊದಲೇ ಪತ್ತೆ ಮಾಡಿದರೆ ಜೀವ ಉಳಿಸಬಹುದು.
ಅನ್ನಪೂರ್ಣ ಕಣ್ಣಿನ ಆಸ್ಪತ್ರೆರವರಿಂದ ಕಣ್ಣಿನ ಸಂಪೂರ್ಣ ತಪಾಸಣೆ, ಕನ್ನಡಕ ಹಾಗೂ ಅಗತ್ಯವಿದ್ದವರಿಗೆ ಉಚಿತ ಶಸ್ತ್ರಚಿಕಿತ್ಸೆಯ ವ್ಯವಸ್ಥೆಯೂ ಇದೆ. “ಕಣ್ಣು ಕಾಣದಿದ್ದರೆ ಲೋಕವೇ ಕತ್ತಲು” ಎನ್ನುತ್ತಾರೆ. ಆದ್ದರಿಂದ ಈ ಸೌಲಭ್ಯವನ್ನು ಎಲ್ಲರೂ ಬಳಸಿಕೊಳ್ಳಬೇಕು.
ಈ ಶಿಬಿರ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಇದು ನಮ್ಮೆಲ್ಲರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ. ಸಣ್ಣ ಕಾಯಿಲೆಯನ್ನು ನಿರ್ಲಕ್ಷಿಸಬೇಡಿ. ಸಮಯಕ್ಕೆ ತಪಾಸಣೆ ಮಾಡಿಸಿಕೊಳ್ಳಿ.
ಗ್ರಾಮದ ಪ್ರತಿಯೊಬ್ಬರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಆರೋಗ್ಯವಾಗಿರಿ. “ಸದೃಢ ಗ್ರಾಮವೇ ಸದೃಢ ರಾಷ್ಟ್ರ” ಎಂಬ ಮಾತನ್ನು ನಾವು ಸಾರ್ಥಕ ಮಾಡುವ ಸರದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳುವಂತೆ “ಸೇವೆಯೇ ಶ್ರೇಷ್ಠ ಧರ್ಮ”. ಆ ಸೇವೆಯ ಒಂದು ಭಾಗವೇ ಇಂದಿನ ಈ ಶಿಬಿರ. ನಾವು ರಸ್ತೆ, ನೀರು, ಶಿಕ್ಷಣದ ಜೊತೆಗೆ ಆರೋಗ್ಯಕ್ಕೂ ಅಷ್ಟೇ ಮಹತ್ವ ಕೊಡಬೇಕು.
ಇವತ್ತು ಮನುಷ್ಯನ ದೊಡ್ಡ ಶತ್ರು “ಅಜಾಗರೂಕತೆ”. ಎದೆನೋವು ಬಂದರೂ, ಕಣ್ಣು ಮಸಕಾದರೂ “ಮುಂದೆ ನೋಡೋಣ” ಅಂತ ಸುಮ್ಮನಾಗುತ್ತೇವೆ. ಮನುಷ್ಯರ ಅಂಗಗಳಾದ
ಹೃದಯ ನಮ್ಮ ದೇಹದ ಎಂಜಿನ್. ಅದನ್ನು ಕಾಪಾಡಿಕೊಳ್ಳಬೇಕು.
ಕಣ್ಣು ನಮ್ಮ ಜಗತ್ತಿಗೆ ಕಿಟಕಿ. ಅದನ್ನು ನಿರ್ಲಕ್ಷಿಸಬಾರದು. “ಆರೋಗ್ಯವೇ ನಿಜವಾದ ಸಂಪತ್ತು”. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಧರ್ಮಸ್ಥಳ ಯೋಜನೆಯ ಮೂಲ ಉದ್ದೇಶವೇ “ಸ್ವಾವಲಂಬಿ ಗ್ರಾಮ, ಆರೋಗ್ಯವಂತ ಜನ”. ಅದಕ್ಕೆ ನಿಮ್ಮ ಸಹಕಾರ ಬೇಕು. ಶಿಬಿರ ಮುಗಿದ ಮೇಲೂ ಆರೋಗ್ಯದ ಬಗ್ಗೆ ಜಾಗೃತಿ ಇಟ್ಟುಕೊಳ್ಳಿ. ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಬಿನಿ ಕಾವೇರಿ ಪ್ರಾದೇಶಿಕ ಸಂಸ್ಥೆಯ ಯೋಜನಾಧಿಕಾರಿ ಕೆ ಬಿ ಮಂಜುನಾಥ್ ಹೇಳಿದರು.ಗ್ರಾಮದ ಸುಮಾರು ಎರಡು ನೂರಕ್ಕೂ ಹೆಚ್ಚು ಜನ ತಪಾಸಣೆಯ ಅನುಕೂಲ ಪಡೆದರು.
ಕಾರ್ಯಕ್ರಮದಲ್ಲಿ ಮಹಿಳಾ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷೆ ತೇಜಸ್ವಿನಿ,ಸ್ತ್ರೀ ಸಂಘದ ಅಧ್ಯಕ್ಷೆ ಶ್ರೀಮತಿ ಮಾಲ ಮಂಜುನಾಥ್, ತಾಲೂಕು ಸಮನ್ವಯ ಅಧಿಕಾರಿ ಸಂತೋಷ್, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ದರದಗುಪ್ಪೆ ಗ್ರಾಮ ಪಂಚಾಯಿತಿ ಸದಸ್ಯ ಕೆ ಸುಜಯ್, ನಾರಾಯಣ ಹೃದಯಾಲಯ ವೈದ್ಯರಾದ ಡಾ. ಅರ್ಷಿತಾ, ಶ್ರೂಷುಶಕಿರಾದ ಶರ್ಲಿನ್, ಭಾಗ್ಯಮ್ಮ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಡಾ.ಉದಯಕುಮಾರ್, ಡಾ. ಪ್ರಕಾಶ್, ಟೆಕ್ನಿಷಿಯನ್ ಸಂಜಯ್ ,ಶಿವಕುಮಾರ್, ಆಶಾ ಕಾರ್ಯಕರ್ತೆ ಲೀಲಾಮಣಿ ಮುಂತಾದವರು ಭಾಗಿಯಾಗಿದ್ದರು.





