ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ನಾನಲ್ಲ, ಮುಂದೆಯೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ : ಸಿಎಂ ಡಿಕೆಶಿ

ಸುಪ್ರೀಂ ಕೋರ್ಟ್ — ಕಾವೇರಿ ನೀರು ಹಂಚಿಕೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತೇವೆ: ಸಿಎಂ ಡಿ.ಕೆ. ಶಿವಕುಮಾರ್

ಮೈಸೂರು: ನನ್ನ ಅಧಿಕಾರದ ಅವಧಿಯಲ್ಲಿ ಜನರ ಹೃದಯದಲ್ಲಿ ಉಳಿಯುವಂತಹ ಕೆಲಸ ಮಾಡುತ್ತೇನೆ. ನನ್ನ ಅವಧಿಯಲ್ಲಿ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಮೈಸೂರಿನ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸಂಶೋಧಕಿ ರಮ್ಯಾ ವಿರಚಿತ ‘ಚಲಿಸುವ ಬಂಡೆ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಕೆಲಸ ಮಾಡಿದ್ದೇನೆ. ಅವರಿಗೆ ಮಾತ್ರವಲ್ಲ, ಯಾರಿಗೂ ಕೆಟ್ಟದ್ದನ್ನು ಬಯಸುವ ವ್ಯಕ್ತಿ ನಾನಲ್ಲ. ಮುಂದೆಯೂ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ. ಇದು ನನ್ನ ಬದ್ಧತೆ ರಾಜಕಾರಣದಲ್ಲಿ ಈಜುವುದು ಸುಲಭವಲ್ಲ. ಈಜಿ ದಡ ಸೇರುವುದು ಬಹಳ ಕಷ್ಟ. ಆದರೂ ದೊಡ್ಡ ಸಾಧನೆಗಳನ್ನು ಮಾಡಲು ಪ್ರಯತ್ನಿಸಿದ್ದೇವೆ.‌ ಕೆಲವರು ಎಲ್ಲದರಲ್ಲೂ ನಕಾರಾತ್ಮಕ ಅಂಶಗಳನ್ನೇ ಹುಡುಕುತ್ತಾರೆ. ನನಗೆ ಒಂದು ತಿಂಗಳು, ಎರಡು ತಿಂಗಳು, ಮೂರು ತಿಂಗಳು ಅಥವಾ ಆರು ತಿಂಗಳು ಆಡಳಿತ ಮಾಡಲು ಅವಕಾಶ ನೀಡಿ, ಇವರು ಏನು ಮಾಡುತ್ತಾರೆ ಎಂದು ನೋಡೋಣ ಎಂದು ಕೆಲವರು ಕಾಯುತ್ತಿದ್ದಾರೆ ಎಂದರು.

ವಿರೋಧ ಪಕ್ಷದವರಿಗೆ ನನ್ನ ಬೆಳವಣಿಗೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೆಲವರಿಗೆ ನನ್ನ ಹೆಸರು ಹೇಳಲೂ ಆಗುತ್ತಿಲ್ಲ. ಆದರೆ ನಾನು ಇಂತಹ ಟೀಕೆಗಳಿಗೆ ಬಗ್ಗುವ ವ್ಯಕ್ತಿಯಲ್ಲ. ತಾಳ್ಮೆಯಿಂದ ಇದ್ದೇನೆ ಅಷ್ಟೇ. ನನಗೆ ನನ್ನ ಮೇಲೆ ಮಾತ್ರವಲ್ಲ, ಈ ರಾಜ್ಯದ ಜನರ ಮೇಲೂ ನಂಬಿಕೆ ಇದೆ. ಯಾರಿಗೂ ಮೋಸ ಮಾಡಬೇಕು, ತೊಂದರೆ ಕೊಡಬೇಕು ಅಥವಾ ಕೆಡುಕು ಬಯಸಬೇಕು ಎಂಬ ಉದ್ದೇಶ ನನಗಿಲ್ಲ. ಹಿಂದಿನ ಕಾಲದಲ್ಲಿ ನಾವು ಮಾಡಿದ ಕೆಲಸವನ್ನು ನಮ್ಮ ಮಕ್ಕಳು, ಮೊಮ್ಮಕ್ಕಳು ನೋಡಬೇಕಾಗಿತ್ತು. ಈಗ ನಾವು ಮಾಡಿದ ಕೆಲಸವನ್ನು ನಾವೇ ಕೆಲವೇ ತಿಂಗಳುಗಳಲ್ಲಿ ನೋಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರೊಂದಿಗೆ ನಮಗೆ ಸಾಕಷ್ಟು ರಾಜಕೀಯ ಭಿನ್ನಾಭಿಪ್ರಾಯಗಳಿದ್ದವು. ಆದರೂ ನಮ್ಮ ಪಕ್ಷದವರು ಅವರೊಂದಿಗೆ ಕೈಜೋಡಿಸಬೇಕು ಎಂದಾಗ, ಸರ್ಕಾರದಲ್ಲಿ ಇದ್ದಷ್ಟು ದಿನವೂ ಅವರಿಗೆ ತೊಂದರೆ ಆಗಬೇಕು ಅಥವಾ ಮೋಸ ಮಾಡಬೇಕು ಎಂದು ನಾನು ಬಯಸಲಿಲ್ಲ. ಅವರ ಕೈ ಬಲಪಡಿಸಲು ಪ್ರಯತ್ನಿಸಿದೆ. ಅವರು ನಮ್ಮನ್ನು ಒಪ್ಪಿಕೊಳ್ಳುತ್ತಾರೆಯೇ ಇಲ್ಲವೇ ಎಂಬುದು ಮುಖ್ಯವಲ್ಲ. ನಮ್ಮ ಆತ್ಮಸಾಕ್ಷಿ ಒಪ್ಪಿದರೆ ಸಾಕು. ಆತ್ಮಸಾಕ್ಷಿಗಿಂತ ದೊಡ್ಡದು ಯಾವುದೂ ಇಲ್ಲ ಎಂದರು. ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಯಾರೊಬ್ಬರಿಗೂ ಅನಗತ್ಯ ತೊಂದರೆಯಾಗಬಾರದು ಎಂಬುದು ನನ್ನ ಆಶಯ. ಜನರಿಗೆ ಏನಾದರೂ ಸಹಾಯ ಬೇಕಿದ್ದರೆ ಅದನ್ನು ಮಾಡಿಕೊಡಲು ಸಿದ್ಧನಿದ್ದೇನೆ.

ನನ್ನ ಮೇಲೆ ಅನೇಕ ಶ್ರೀಗಳು, ಜನರು ಹಾಗೂ ನಮ್ಮ ಪಕ್ಷದ ನಾಯಕರು ವಿಶ್ವಾಸವಿಟ್ಟಿದ್ದಾರೆ. ಆ ವಿಶ್ವಾಸಕ್ಕೆ ತಕ್ಕಂತೆ ನನ್ನ ಬದುಕನ್ನು ಕಟ್ಟಿಕೊಂಡು ಹೋಗುತ್ತೇನೆ. ನನ್ನ ಜೀವನದಲ್ಲಿ ಸಾಕ್ಷಿಗುಡ್ಡೆಗಳನ್ನು ಸೃಷ್ಟಿಸುವ ಪ್ರಯತ್ನ ಮಾಡುತ್ತೇನೆ. ಈ ರಾಜ್ಯದ ರಾಜಕಾರಣದ ಬದಲಾವಣೆಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಅದರ ಭಾಗವಾಗಿಯೂ ಇದ್ದೇನೆ. ಬಂಗಾರಪ್ಪನವರು, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾದ ಸಂದರ್ಭಗಳು, ನಾನು ಪಕ್ಷದ ಅಧ್ಯಕ್ಷನಾದ ನಂತರ ನಡೆದ ಬೆಳವಣಿಗೆಗಳು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ರಾಜಕೀಯ ಸನ್ನಿವೇಶಗಳು ಸೇರಿದಂತೆ ಅನೇಕ ಘಟನೆಗಳು ನನ್ನೊಳಗಿವೆ ಎಂದರು.

💬 ಕಾಮೆಂಟ್ • Comments (0)

💬 ಓದುಗರ ಕಾಮೆಂಟ್‌ಗಳು • Reader Comments (0)

ಇನ್ನೂ ಯಾವುದೇ ಕಾಮೆಂಟ್ ಇಲ್ಲ. ಮೊದಲ ಕಾಮೆಂಟ್ ನೀವೇ ಬರೆಯಿರಿ! (Be the first to comment.)

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others