ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರ ವಶದಲ್ಲಿರುವ 2016ರ ಬ್ಯಾಚ್ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರನ್ನು ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ಎಂಎಸ್ಎಂಇ (MSME) ಇಲಾಖೆಯ ನಿರ್ದೇಶಕರಾಗಿರುವ ಇವರು, ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ನಿಯಂತ್ರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಗಂಭೀರ ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.
ಇಡಿ ತನಿಖೆಯಲ್ಲಿ ಭ್ರಷ್ಟಾಚಾರ ಬಯಲು ಹಣ ಅಕ್ರಮ ವರ್ಗಾವಣೆ ಕಾಯ್ದೆಯಡಿ (PMLA) ಜಾರಿ ನಿರ್ದೇಶನಾಲಯ (ED) ಕೈಗೊಂಡಿದ್ದ ಜಪ್ತಿ ಕಾರ್ಯಾಚರಣೆಯ ವೇಳೆ, ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಅಂಶ ಬೆಳಕಿಗೆ ಬಂದಿತ್ತು. ಈ ನೇಮಕಾತಿ ಗೋಲ್ಮಾಲ್ಗೆ ಆಗಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಅವರೇ ನೇರ ಹೊಣೆಗಾರರು ಎಂದು ಇಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಿದ್ದರು.
ಸಿಐಡಿ ಬಲೆಗೆ ಬಿದ್ದ ಅಧಿಕಾರಿ ಇಡಿ ನೀಡಿದ ಮಾಹಿತಿ ಮತ್ತು ಸಾರ್ವಜನಿಕ ಪರೀಕ್ಷಾ ಅಕ್ರಮ ತಡೆ ಕಾಯ್ದೆಯಡಿ ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಆಧರಿಸಿ ತನಿಖೆ ನಡೆಸಿದ ಸಿಐಡಿ, ಆಗಸ್ಟ್ 29ರಂದು ಗಂಗ್ವಾರ್ ಅವರನ್ನು ಬಂಧಿಸಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆಗಸ್ಟ್ 30ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಪ್ರಕರಣದ ಆಳವಾದ ವಿಚಾರಣೆಗಾಗಿ ಸಿಐಡಿ ತಂಡ ಆಗಸ್ಟ್ 31ರಂದು ಅಧಿಕಾರಿಯನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.
48 ಗಂಟೆ ಕಸ್ಟಡಿ ಹಿನ್ನೆಲೆ ಸರ್ಕಾರದ ಕ್ರಮ ಸರಕಾರಿ ನೌಕರರೊಬ್ಬರು 48 ಗಂಟೆಗಳಿಗೂ ಅಧಿಕ ಕಾಲ ಕಸ್ಟಡಿಯಲ್ಲಿದ್ದರೆ ನಿಯಮಾನುಸಾರ ಅಮಾನತುಗೊಳಿಸಬೇಕಾಗುತ್ತದೆ. ಜತೆಗೆ, ನೇಮಕಾತಿ ವ್ಯವಸ್ಥೆಯ ಪಾರದರ್ಶಕತೆ ಹಾಗೂ ನಂಬಿಕಾರ್ಹತೆಗೆ ಧಕ್ಕೆ ತಂದಿರುವ ಆರೋಪದ ತೀವ್ರತೆಯನ್ನು ಪರಿಗಣಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಈ ಆದೇಶ ಜಾರಿ ಮಾಡಿದೆ. ಸಿಐಡಿ ತನಿಖೆ ಮುಗಿಯುವವರೆಗೆ ಅಮಾನತು ಜಾರಿಯಲ್ಲಿರಲಿದ್ದು, ಸರ್ಕಾರದ ಅನುಮತಿಯಿಲ್ಲದೆ ಅವರು ಕೇಂದ್ರ ಸ್ಥಾನ ತೊರೆಯುವಂತಿಲ್ಲ ಎಂದು ತಾಕೀತು ಮಾಡಲಾಗಿದೆ





