ಬೆಂಗಳೂರು: ಕರ್ತವ್ಯಕ್ಕೆ ಗೈರುಹಾಜರಾಗುವ ಪಾಲಿಕೆ ಸಿಬ್ಬಂದಿಗೆ ಇನ್ಮುಂದೆ ಯಾವುದೇ ವಿನಾಯಿತಿ ಇಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳುರಿನಲ್ಲಿ ಮಾತನಾಡಿದ ಅವರು, ಗೈರುಹಾಜರಾಗುವ ಸಿಬ್ಬಂದಿಗೆ ನೋಟಿಸ್ ನೀಡಲಾಗುವುದು. ಅವರು ಸಮರ್ಪಕವಾಗಿ ಉತ್ತರಿಸದಿದ್ದರೆ, ಸೇವೆಯಿಂದ ವಜಾಗೊಳಿಸುವ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ಬೆಂಗಳೂರಿನ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸಿದ ಪರಿಶೀಲನೆ ವೇಳೆ ಶೇ.30ರಷ್ಟು ಸಿಬ್ಬಂದಿ ಕರ್ತವ್ಯಕ್ಕೆ ಗೈರಾಗಿರುವುದು ಕಂಡುಬಂದಿದ್ದು, ಪದೇಪದೆ ಕರ್ತವ್ಯಕ್ಕೆ ಗೈರಾಗುವ ಸಿಬ್ಬಂದಿಗೆ ನೋಟಿಸ್ ನೀಡಿ, ಸಮರ್ಪಕ ಉತ್ತರ ನೀಡದಿದ್ದರೆ ಸೇವೆಯಿಂದಲೇ ವಜಾಗೊಳಿಸುವುದಾಗಿ ಹೇಳಿದ್ದಾರೆ.
,
ಎಲ್ಲ ತ್ಯಾಜ್ಯ ಸಂಗ್ರಹಣೆ ವಾಹನಗಳಿಗೂ ಜಿಪಿಎಸ್ ಟ್ರ್ಯಾಕಿಂಗ್ ಕಡ್ಡಾಯಗೊಳಿಸಲಾಗುವುದು. ಪ್ರತಿದಿನವೂ ವಾಹನಗಳು ನಿಗದಿತ ಮಾರ್ಗದಲ್ಲೇ ಸಂಚರಿಸುವ ಮೂಲಕ ವ್ಯವಸ್ಥಿತ ಹಾಗೂ ಹೊಣೆಗಾರಿಕೆಯ ತ್ಯಾಜ್ಯ ಸಂಗ್ರಹಣೆ ಖಚಿತಪಡಿಸಲಾಗುವುದು.ಪ್ರತಿಯೊಂದು ವಾಹನಕ್ಕೂ ನಿರ್ದಿಷ್ಟ ಮಾರ್ಗ ನಿಗದಿಪಡಿಸಲಾಗುತ್ತದೆ. ಎಂದು ತಿಳಿಸಿದರು.
ಪ್ರಸ್ತುತ ನಗರದಲ್ಲಿ ದಿನಕ್ಕೆ ಸುಮಾರು 5,200 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹಿಸುವ ಸಾಮರ್ಥ್ಯವಿದೆ. ಹೊಸ ಟೆಂಡರ್ ವ್ಯವಸ್ಥೆಯಡಿ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಸೇರಿದಂತೆ ಈ ಸಾಮರ್ಥ್ಯವನ್ನು ದಿನಕ್ಕೆ ಸುಮಾರು 9,000 ಮೆಟ್ರಿಕ್ ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ನಾಗರಿಕರು ಉತ್ಪಾದಿಸುವ ಯಾವುದೇ ಪ್ರಮಾಣದ ತ್ಯಾಜ್ಯವಾಗಿದ್ದರೂ ಅದನ್ನು ಸಮರ್ಪಕವಾಗಿ ಸಂಗ್ರಹಿಸಿ, ವಿಲೇವಾರಿಗೆ ಸಾಗಿಸುವ ರೀತಿಯಲ್ಲಿ ಹೊಸ ವ್ಯವಸ್ಥೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಹೊಸ ವ್ಯವಸ್ಥೆಯಡಿ ಪ್ರಸ್ತುತ ಬಳಕೆಯಲ್ಲಿರುವ ಸುಮಾರು ಒಂದು ಟನ್ ಸಾಮರ್ಥ್ಯದ ಆಟೋ ಟಿಪ್ಪರ್ಗಳ ಬದಲಿಗೆ ಮೂರು ಟನ್ವರೆಗೆ ತ್ಯಾಜ್ಯ ಸಾಗಿಸುವ ಸಾಮರ್ಥ್ಯ ಹೊಂದಿರುವ ವಾಹನಗಳನ್ನು ಬಳಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಬೆಂಗಳೂರು ಮಹಾನಗರದ ಹೊಸ ಆಡಳಿತ ಮತ್ತು ಸೇವಾ ವಿತರಣಾ ವ್ಯವಸ್ಥೆ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿಯ ಗೈರುಹಾಜರಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.





