ಬೆಂಗಳೂರು: ಗೌರಿ-ಗಣೇಶ ಹಬ್ಬ ಹಾಗೂ ಸಾಲು ಸಾಲು ವಾರಾಂತ್ಯದ ರಜೆಗಳ ಸಂಭ್ರಮದಲ್ಲಿರುವ ರಾಜಧಾನಿಯ ಜನರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಹಬ್ಬದ ಪ್ರಯುಕ್ತ ಪ್ರಯಾಣಿಕರ ದಟ್ಟಣೆಯನ್ನು ತಪ್ಪಿಸಲು ಬೆಂಗಳೂರಿನಿಂದ ರಾಜ್ಯದ ಮೂಲೆ ಮೂಲೆಗಳಿಗೆ ಹಾಗೂ ನೆರೆ ರಾಜ್ಯಗಳಿಗೆ ಒಟ್ಟು 2,400 ವಿಶೇಷ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸಾರಿಗೆ ನಿಗಮ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ.
ಸೆಪ್ಟೆಂಬರ್ 12 ಮತ್ತು 13ರ ಶನಿವಾರ-ಭಾನುವಾರದ ರಜೆಗಳ ಜತೆಗೆ ಸೆಪ್ಟೆಂಬರ್ 14ರಂದು ಗಣೇಶ ಹಬ್ಬ ಇರುವುದರಿಂದ, ಸೆಪ್ಟೆಂಬರ್ 11ರಿಂದಲೇ ಈ ವಿಶೇಷ ಕಾರ್ಯಾಚರಣೆ ಆರಂಭವಾಗಲಿದೆ.
ಯಾವ ನಿಲ್ದಾಣದಿಂದ ಎಲ್ಲೆಲ್ಲಿಗೆ ಬಸ್‌ಗಳ ಸಂಚಾರ? ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಜನದಟ್ಟಣೆ ನಿರ್ವಹಿಸಲು ನಿಗಮವು ಮಾರ್ಗವಾರು ನಿಲ್ದಾಣಗಳನ್ನು ನಿಗದಿಪಡಿಸಿದೆ.
- ಮೆಜೆಸ್ಟಿಕ್ (ಕೆಂಪೇಗೌಡ ಬಸ್ ನಿಲ್ದಾಣ): ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಂಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಾರವಾರ, ಗೋಕರ್ಣ, ವಿಜಯಪುರ, ಕಲಬುರಗಿ, ಬಳ್ಳಾರಿ ಸೇರಿದಂತೆ ಉತ್ತರ ಹಾಗೂ ಕರಾವಳಿ ಕರ್ನಾಟಕದ ಭಾಗಗಳಿಗೆ ಮತ್ತು ತಿರುಪತಿ, ಹೈದರಾಬಾದ್‌ಗೆ ಇಲ್ಲಿಂದಲೇ ಬಸ್‌ಗಳು ಹೊರಡಲಿವೆ.
- ಮೈಸೂರು ರಸ್ತೆ ಸ್ಯಾಟಲೈಟ್ ನಿಲ್ದಾಣ: ಮೈಸೂರು, ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಹುಣಸೂರು ಭಾಗಕ್ಕೆ ತೆರಳುವ ಪ್ರಯಾಣಿಕರಿಗೆ ಇಲ್ಲಿಂದ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.
- ಶಾಂತಿನಗರ ನಿಲ್ದಾಣ: ಚೆನ್ನೈ, ಕೊಯಮತ್ತೂರು, ಮಧುರೈ ಸೇರಿದಂತೆ ತಮಿಳುನಾಡು ಹಾಗೂ ಕೇರಳದ ಕೋಝಿಕ್ಕೋಡ್, ಎರ್ನಾಕುಲಂ, ತ್ರಿಶೂರ್ ಮೊದಲಾದ ನಗರಗಳಿಗೆ ತೆರಳುವ ಎಲ್ಲಾ ಪ್ರೀಮಿಯರ್ ಐಷಾರಾಮಿ ಬಸ್‌ಗಳು ಶಾಂತಿನಗರ ಟಿಟಿಎಂಸಿಯಿಂದ ಸಂಚರಿಸಲಿವೆ.
ಟಿಕೆಟ್ ದರದಲ್ಲಿ ಆಕರ್ಷಕ ರಿಯಾಯಿತಿ ಪ್ರಯಾಣಿಕರು www.ksrtc.karnataka.gov.in ವೆಬ್‌ಸೈಟ್ ಮೂಲಕ ಮುಂಗಡ ಆಸನ ಕಾಯ್ದಿರಿಸಬಹುದು. ಒಂದೇ ಟಿಕೆಟ್‌ನಲ್ಲಿ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ಆಸನ ಬುಕ್ ಮಾಡಿದರೆ ಶೇಕಡ 5ರಷ್ಟು ರಿಯಾಯಿತಿ ಸಿಗಲಿದೆ. ಇನ್ನು ಬೆಂಗಳೂರಿನಿಂದ ಹೊರಡುವ ಮತ್ತು ಮರಳಿ ಬರುವ ಎರಡೂ ಟಿಕೆಟ್‌ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ರಿಟರ್ನ್ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ಅನ್ವಯವಾಗಲಿದೆ.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ ಮತ್ತು ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿರುವ ಕೌಂಟರ್‌ಗಳಲ್ಲೂ ಮುಂಗಡ ಬುಕಿಂಗ್ ಸೌಲಭ್ಯ ನೀಡಲಾಗಿದೆ. ಹಬ್ಬ ಮುಗಿದ ಬಳಿಕ ಸೆಪ್ಟೆಂಬರ್ 14ರಿಂದ ವಿವಿಧ ಊರುಗಳಿಂದ ಬೆಂಗಳೂರಿಗೆ ಹಿಂದಿರುಗುವ ಜನರಿಗೂ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ತಮ್ಮ ಟಿಕೆಟ್‌ನಲ್ಲಿ ನಮೂದಾಗಿರುವ ಪಿಕ್-ಅಪ್ ಪಾಯಿಂಟ್ ಸರಿಯಾಗಿ ಗಮನಿಸಿಕೊಳ್ಳುವಂತೆ ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.





