Mohan Bhagwat: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ – ಮೋಹನ್ ಭಾಗವತ್

ಲಂಡನ್: ಶುದ್ಧ ಸಾತ್ವಿಕ ಪ್ರೇಮವೇ ನಮ್ಮ ಸಂಸ್ಥೆಯ ಕಾರ್ಯದ ಅಡಿಪಾಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ತಿಳಿಸಿದ್ದಾರೆ.

ಲಂಡನ್‌ನಲ್ಲಿ ಮಾತನಾಡಿದ ಅವರು, ಆತ್ಮೀಯತೆಯ ಈ ಪರಿಕಲ್ಪನೆಯು ಕೇವಲ ಒಬ್ಬ ವ್ಯಕ್ತಿಗೆ ಸೀಮಿತವಾಗಿರದೆ ಕುಟುಂಬ, ಸಮುದಾಯ, ಸಮಾಜ ಮತ್ತು ಇಡೀ ಮಾನವಕುಲಕ್ಕೆ ವಿಸ್ತರಿಸುತ್ತದೆ. ಪ್ರಕೃತಿಯೊಂದಿಗೆ ಹಿಂದೂ ನಾಗರಿಕತೆ ಹೊಂದಿರುವ ನಿಕಟ ಸಂಬಂಧವನ್ನು ಒತ್ತಿ ಹೇಳಿದರು.

ಕೆಲವರು ನಮ್ಮ ಕಾರ್ಯಕ್ಕೆ ತೀವ್ರ ದ್ವೇಷವೇ ಆಧಾರ ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿದೆ. ‘ಶುದ್ಧ ಸಾತ್ವಿಕ ಪ್ರೇಮ’ವೇ ನಮ್ಮ ಕಾರ್ಯಕ್ಕೆ ಮುಖ್ಯ ಆಧಾರ ಎಂದು ಭಾಗವತ್ ಹೇಳಿದರು.

ಹಿಂದೂ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ; ಆತ ಕುಟುಂಬ, ಸಮುದಾಯ, ಸಮಾಜ ಹಾಗೂ ಇಡೀ ಮಾನವಕುಲದ ಭಾಗ. ಹಿಂದೂಗಳು ಪ್ರಕೃತಿಯನ್ನು ಪೂಜಿಸುವುದು ಮಾತ್ರವಲ್ಲ, ಪ್ರೀತಿಸುತ್ತಾರೆ ಎಂದರು.

ಜಾಗತಿಕ ಸಂಘರ್ಷಗಳು, ಪರಿಸರ ಹಾಗೂ ಆರ್ಥಿಕ ಸವಾಲುಗಳು ಮತ್ತು ಡಿಜಿಟಲ್ ಯುಗದ ಅಡೆತಡೆಗಳ ನಡುವೆ ಹಿಂದೂ ನಾಗರಿಕತೆಯು ಜಗತ್ತಿಗೆ ಏನನ್ನು ನೀಡಬಲ್ಲದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜಗತ್ತಿನಲ್ಲಿ ವೈವಿಧ್ಯತೆಗಳು ಕಂಡುಬಂದರೂ ಅಸ್ತಿತ್ವವು ಮೂಲತಃ ಒಂದೇ ಎಂಬ ಕಲ್ಪನೆಯಲ್ಲಿ ಹಿಂದೂ ಚಿಂತನೆ ಬೇರೂರಿದೆ ಎಂದರು.

ಬದುಕು ಮತ್ತು ಬದುಕಲು ಬಿಡು ಅಷ್ಟೇ ಅಲ್ಲದೆ ಬದುಕು, ಬದುಕಲು ಬಿಡು ಮತ್ತು ಇತರರನ್ನೂ ಬದುಕಿಸು ಎಂಬುದು ನಮ್ಮ ಚಿಂತನೆ. ಹಿಂದೂಗಳು ಇಂತಹ ಸಮತೋಲನವನ್ನು ಜಗತ್ತಿಗೆ ನೀಡಬೇಕಿದೆ ಎಂದು ತಿಳಿಸಿದರು.

ಮಾನವನ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯನ್ನು ಸಮತೋಲನದಲ್ಲಿ ಕೊಂಡೊಯ್ಯುವ ಅಗತ್ಯವನ್ನು ಪ್ರತಿಪಾದಿಸಿದ ಭಾಗವತ್, “ನಾವು ಪ್ರಕೃತಿಯ ಒಂದು ಭಾಗವಾಗಿರುವಾಗ, ನಮ್ಮ ಪ್ರಗತಿಯು ಪ್ರಕೃತಿಯ ಬೆಳವಣಿಗೆಗೆ ಪೂರಕವಾಗಿರಬೇಕು. ಅಭಿವೃದ್ಧಿ ಮತ್ತು ಪ್ರಕೃತಿ ಪರಸ್ಪರ ಮುಖಾಮುಖಿಯಾಗಬಾರದು, ಬದಲಿಗೆ ಪೂರಕವಾಗಿರಬೇಕು ಎಂದರು.

ಅಪನಾಪನ್ ಎಂಬುದು ಹಿಂದೂ ಚಿಂತನೆ ಹಾಗೂ ಆರೆಸ್ಸೆಸ್‌ನ ಕಾರ್ಯವಿಧಾನದ ಮುಖ್ಯ ತಿರುಳಾಗಿದೆ ಎಂದು ತಿಳಿಸಿದರು. 100 ವರ್ಷ ಕಳೆದರೂ ಈ ಭಾವನೆ ಮಾಸಿಲ್ಲ. ಸ್ವಯಂಸೇವಕರ ನಡವಳಿಕೆಯಲ್ಲಿ ಮತ್ತು ಸಂಘದ ವಾತಾವರಣದಲ್ಲಿ ಇದೇ ಸಾತ್ವಿಕ ಪ್ರೇಮವನ್ನು ನೀವು ಕಾಣಬಹುದು ಎಂದು ಹೇಳಿದರು

ಈ ಭಾವನೆಯೇ ಏಕತೆ ಮತ್ತು ಚಾರಿತ್ರ್ಯ ನಿರ್ಮಾಣಕ್ಕೆ ಆಧಾರವಾಗಿದ್ದು, 100 ವರ್ಷಗಳ ನಂತರವೂ ಸಂಘದಲ್ಲಿ ಇದು ಅಚಲವಾಗಿ ಉಳಿದಿದೆ ಎಂದು ವಿವರಿಸಿದ ಅವರು, ಸಂಘದಲ್ಲಿ ನಾವು ‘ಶುದ್ಧ ಸಾತ್ವಿಕ ಪ್ರೇಮ ಅಪನೇ ಕಾರ್ಯ ಕಾ ಆಧಾರ ಹೈ’ ಎಂಬ ಗೀತೆಯನ್ನು ಹಾಡುತ್ತೇವೆ ಎಂದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others