ಇಸ್ಲಾಮಾಬಾದ್: ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಮತ್ತೊಮ್ಮೆ ಹಳೇ ಕಳ್ಳಾಟಕ್ಕೆ ಮುಂದಾಗಿದೆ. ಭಾರತದಲ್ಲಿ ನಡೆದ ಹಲವು ಭೀಕರ ವಿಧ್ವಂಸಕ ಕೃತ್ಯಗಳ ರೂವಾರಿ, ಜೈಶ್-ಎ-ಮೊಹಮ್ಮದ್ (JeM) ಮುಖ್ಯಸ್ಥ ಹಾಗೂ ಅಂತಾರಾಷ್ಟ್ರೀಯ ಉಗ್ರ ಮೌಲಾನಾ ಮಸೂದ್ ಅಜರ್ ಸುಳಿವು ನೀಡಿದವರಿಗೆ ಬರೋಬ್ಬರಿ 70 ಲಕ್ಷ ಪಾಕಿಸ್ತಾನಿ ರೂಪಾಯಿ (ಭಾರತೀಯ ಮೌಲ್ಯದಲ್ಲಿ ಸುಮಾರು ₹24.09 ಲಕ್ಷ) ಬಹುಮಾನ ನೀಡುವುದಾಗಿ ಪಾಕ್ನ ಫೆಡರಲ್ ತನಿಖಾ ಸಂಸ್ಥೆ (FIA) ಅಧಿಕೃತವಾಗಿ ಪ್ರಕಟಿಸಿದೆ.
ಎಫ್ಎಟಿಎಫ್ ಸಭೆ ಬೆನ್ನಲ್ಲೇ ಗಿಮಿಕ್
ಪ್ಯಾರಿಸ್ನಲ್ಲಿ ಅಕ್ಟೋಬರ್ 26 ರಿಂದ 30 ರವರೆಗೆ ನಡೆಯಲಿರುವ ಹಣಕಾಸು ಕಾರ್ಯಪಡೆ (FATF) ಮಹತ್ವದ ಸರ್ವಸದಸ್ಯರ ಸಭೆಗೂ ಮುನ್ನ ಪಾಕಿಸ್ತಾನ ಈ ನಾಟಕವಾಡಿದೆ. ಎಫ್ಎಟಿಎಫ್ ಕಣ್ಗಾವಲು ಅಥವಾ ಗ್ರೇ ಲಿಸ್ಟ್ಗೆ ಮತ್ತೆ ಬೀಳುವುದನ್ನು ತಪ್ಪಿಸಿಕೊಳ್ಳಲು ಮತ್ತು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಜಗತ್ತಿಗೆ ಬಿಂಬಿಸಲು ಪಾಕಿಸ್ತಾನ ಎಫ್ಐಎ ಬಿಡುಗಡೆ ಮಾಡಿರುವ ‘2026ರ ಮೋಸ್ಟ್ ವಾಂಟೆಡ್ ಉಗ್ರರ ರೆಡ್ ಬುಕ್’ನಲ್ಲಿ ಅಜರ್ ಹೆಸರನ್ನು ಉಳಿಸಿಕೊಂಡು ತಲೆಗೆ ಹೆಚ್ಚಿನ ಮೊತ್ತದ ಇನಾಮು ಘೋಷಿಸಿದೆ.
ತನ್ನಲ್ಲೇ ಇಟ್ಟುಕೊಂಡು ‘ಪರಾರಿ’ ಎಂದು ನಾಟಕ
ಮಸೂದ್ ಅಜರ್ ಪಾಕಿಸ್ತಾನದಲ್ಲಿಲ್ಲ, ಆತ ಅಫ್ಘಾನಿಸ್ತಾನಕ್ಕೆ ಪಲಾಯನ ಮಾಡಿದ್ದಾನೆ ಎಂದು ಇಸ್ಲಾಮಾಬಾದ್ ವರ್ಷಗಳಿಂದ ವಾದಿಸುತ್ತಾ ಬಂದಿದೆ. ಆದರೆ, ಈ ಸುಳ್ಳನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಈಗಾಗಲೇ ತಳ್ಳಿಹಾಕಿದೆ. ಭಾರತೀಯ ಗುಪ್ತಚರ ಇಲಾಖೆಯ ತಾಂತ್ರಿಕ ಮಾಹಿತಿ ಪ್ರಕಾರ, ಆತ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ನವಾಬ್ಶಾ ನಗರದಲ್ಲಿ ಐಎಸ್ಐ ಭದ್ರತೆಯಲ್ಲಿ ಆಶ್ರಯ ಪಡೆದಿದ್ದಾನೆ. ಆದಾಗ್ಯೂ, ಪಾಕ್ ಎಫ್ಐಎ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯ 1480ನೇ ಕ್ರಮಾಂಕದಲ್ಲಿ ಈತನ ಹೆಸರನ್ನು ಸೇರಿಸಿ ಕಣ್ಣೊರೆಸುವ ತಂತ್ರ ರೂಪಿಸಿದೆ.
ಭಾರತದ ಮೇಲಿನ ಭೀಕರ ದಾಳಿಗಳ ರೂವಾರಿ
58 ವರ್ಷದ ಮಸೂದ್ ಅಜರ್, ಪಾಕಿಸ್ತಾನದ ಬಹವಾಲ್ಪುರವನ್ನು ಪ್ರಧಾನ ಕೇಂದ್ರವಾಗಿಸಿಕೊಂಡು ಭಾರತದ ವಿರುದ್ಧ ನಿರಂತರ ಗಡಿಯಾಚೆಗಿನ ಭಯೋತ್ಪಾದನೆ ನಡೆಸುತ್ತಿದ್ದಾನೆ. 2001ರ ಸಂಸತ್ ಭವನದ ಮೇಲಿನ ದಾಳಿ, 2008ರ ಮುಂಬೈ ಮಹಾ ಮಾರಣಹೋಮ (26/11), 2016ರ ಪಠಾಣ್ಕೋಟ್ ವಾಯುನೆಲೆ ದಾಳಿ ಹಾಗೂ 40 ಮಂದಿ ಸಿಆರ್ಪಿಎಫ್ ಯೋಧರನ್ನು ಬಲಿಪಡೆದ 2019ರ ಪುಲ್ವಾಮಾ ಆತ್ಮಾಹುತಿ ಬಾಂಬ್ ದಾಳಿಯ ಮುಖ್ಯ ಸಂಚುಕೋರ ಈತನಾಗಿದ್ದಾನೆ. ಬಹವಾಲ್ಪುರದಲ್ಲಿದ್ದ ಈತನ ಉಗ್ರ ತರಬೇತಿ ಕೇಂದ್ರವು ಭಾರತ ಸೇನೆಯ ಕಾರ್ಯಾಚರಣೆಯಲ್ಲೂ ಹಾನಿಗೊಳಗಾಗಿತ್ತು. ವಿಶ್ವಸಂಸ್ಥೆಯಿಂದಲೂ ‘ಜಾಗತಿಕ ಉಗ್ರ’ನೆಂದು ಘೋಷಿತನಾಗಿರುವ ಅಜರ್ನನ್ನು ರಕ್ಷಿಸುತ್ತಲೇ, ಅಂತರರಾಷ್ಟ್ರೀಯ ಹಣಕಾಸು ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಈ ಇನಾಮು ಪ್ರಹಸನ ಶುರುಮಾಡಿದೆ ಎಂಬುದು ಸ್ಪಷ್ಟವಾಗಿದೆ.





