ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ನೌಕಾಪಡೆಯ ಹಡಗೊಂದು ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ ಈ ವಿಚಾರಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅರಬ್ಬಿ ಸಮುದ್ರದಲ್ಲಿ ಕಳೆದ ಸಂಜೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಮತ್ತು ಪಾಕಿಸ್ತಾನ ನೌಕಾಪಡೆಯ ಹಡಗಿನ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದೆ.
ಡಿಕ್ಕಿಗೆ ಕಾರಣವಾದ ಪಾಕಿಸ್ತಾನಿ ನೌಕಾಪಡೆಯ ಘಟಕಗಳ “ಅಂಗೀಕರಿಸಲಾಗದ ಮತ್ತು ವೃತ್ತಿಪರವಲ್ಲದ ನಡವಳಿಕೆ”ಯನ್ನು ಗಮನಕ್ಕೆ ತರಲು, ವಿದೇಶಾಂಗ ಸಚಿವಾಲಯ ಪಾಕಿಸ್ತಾನದ ಹೈಕಮಿಷನ್ನ ‘ಚಾರ್ಜ್ ಡಿ ಅಫೇರ್ಸ್’ ಅವರನ್ನು ಕರೆಸಿಕೊಂಡಿತು.
ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ನಡೆದ ಈ ಘಟನೆಯಿಂದ ಯಾವುದೇ ದೊಡ್ಡ ಹಾನಿ ಸಂಭವಿಸದಿದ್ದರೂ, ಪಾಕಿಸ್ತಾನಿ ನೌಕಾಪಡೆಯ ಹಡಗಿನ ನಡವಳಿಕೆಯು ಏಪ್ರಿಲ್ 1991ರ ‘ಸೇನಾ ಕವಾಯತುಗಳು, ತಾಲೀಮುಗಳು ಮತ್ತು ಪಡೆಗಳ ಚಲನವಲನಗಳ ಕುರಿತಾದ ಮುಂಚಿತ ಸೂಚನೆಗೆ ಸಂಬಂಧಿಸಿದ ಭಾರತ-ಪಾಕಿಸ್ತಾನ ಒಪ್ಪಂದ’ದ 10ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ದೆಹಲಿಯಲ್ಲಿರುವ ಪಾಕಿಸ್ತಾನದ ಉನ್ನತ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿ ತೀವ್ರ ಪ್ರತಿಭಟನೆ ದಾಖಲಿಸಿದೆ.ಘಟನೆಯಲ್ಲಿ ಯಾವುದೇ ಪ್ರಮುಖ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಪಾಕಿಸ್ತಾನದ ಎಲ್ಲಾ ಸೇನಾ ಪಡೆಗಳು ಎಚ್ಚರಿಕೆ ವಹಿಸಬೇಕು ಮತ್ತು ಉಭಯ ದೇಶಗಳ ನಡುವಿನ ಒಪ್ಪಂದಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸಂದೇಶವನ್ನು ಸಂಬಂಧಪಟ್ಟ ಪಾಕ್ ಅಧಿಕಾರಿಗಳಿಗೆ ರವಾನಿಸುವಂತೆ ಪಾಕ್ ರಾಯಭಾರಿಗೆ ತಾಕೀತು ಮಾಡಿರುವುದು ತಿಳಿದು ಬಂದಿದೆ.





