ಬಡವರಿಗೆ ನಿವೇಶನದ ಹಕ್ಕು ನೀಡುವುದು ನಮ್ಮ ಸರ್ಕಾರದ ಪ್ರಧಾನ ಆದ್ಯತೆ: ಡಿಸಿಎಂ ಡಾ.ಜಿ ಪರಮೇಶ್ವರ್

ಬೆಂಗಳೂರು : ಇಂದು ವಿಕಾಸಸೌಧದಲ್ಲಿ ಉಪ‌ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಕಂದಾಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಂತೆ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನಾ‌ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಿದರು.

ಬಡವರಿಗೆ ನಿವೇಶನದ ಹಕ್ಕು ನೀಡುವುದು ನಮ್ಮ ಸರ್ಕಾರದ ಪ್ರಧಾನ ಆದ್ಯತೆ. ತಮಗೆ ತಿಳಿದಂತೆ ರಾಜ್ಯದ ಅಸಂಖ್ಯಾತ ಜನರಿಗೆ ವಿಳಾಸ ಹೇಳಲು ಕೂಡ ಒಂದು ಜಾಗವಿಲ್ಲ. ಈ ಕೂಡಲೇ ನಾವು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50,000 ನಿವೇಶನಗಳಿಗೆ ಸಾಕಾಗುವಷ್ಟು ಭೂಮಿಯನ್ನು ಹುಡುಕಬೇಕು. ಆ ಜಮೀನು ಜನರ ವಾಸಕ್ಕೆ ಸೂಕ್ತವಾಗಿರಲಿ. ರಸ್ತೆ, ನೀರಿನ ಸೌಲಭ್ಯ ಇರಬೇಕು. ಸಾಧ್ಯವಾದಷ್ಟು ಗ್ರಾಮಗಳಿಗೆ ಹತ್ತಿರದ ಜಮೀನುಗಳನ್ನೇ ಗುರುತಿಸಿ ಸಿದ್ಧಪಡಿಸಬೇಕು ಎಂದು ನಿರ್ದೇಶಿಸಿದರು.

ನಿವೇಶನ ಹಂಚಿಕೆ ಕಾರ್ಯಕ್ರಮ ಸಾಮಾನ್ಯ ಆಶ್ರಯ ಯೋಜನೆ ಎಂದು ಪರಿಗಣಿಸಬೇಡಿ. ಬಡವರಿಗೆ ನಿವೇಶನ ನೀಡುವುದು ಸರ್ಕಾರದ ವಿಶೇಷ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಇದೇ ಡಿಸೆಂಬರ್‌ಗಿಂತ ಮೊದಲು ಕನಿಷ್ಠ 5 ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಅದಕ್ಕಾಗಿ ಸೂಕ್ತ ಜಾಗ ಗುರುತಿಸಿ ನಿವೇಶನಗಳನ್ನು ಸಿದ್ಧಪಡಿಸಬೇಕು ಎಂದು ಸ್ಪಷ್ಟವಾಗಿ ಸೂಚಿಸಿದರು.

ವಾಸ್ತವವಾಗಿ ವಸತಿ ಮತ್ತು ನಿವೇಶನ ರಹಿತರ ಪಟ್ಟಿ ಸಿದ್ಧಪಡಿಸಬೇಕು. ಅದರಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು, ಅಂಗವಿಕಲರು, ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು ಮುಂತಾದವರಿಗೆ ಆದ್ಯತೆ ನೀಡಬೇಕು. ನಮ್ಮ ಸರ್ಕಾರದ ಗುರಿ ರಾಜ್ಯದಲ್ಲಿ 15,50,000 ವಸತಿ ನಿವೇಶನಗಳನ್ನು ಹಂಚುವುದಾಗಿದೆ. ಸೆಪ್ಟೆಂಬರ್ 15ರೊಳಗೆ ಭೂಮಿ ಗುರುತಿಸಬೇಕು ಎಂದು ತಿಳಿಸಿದರು.

ಕಂದಾಯ ಗ್ರಾಮಗಳು ಸರ್ಕಾರದ ಪೈಲಟ್ ಪ್ರಾಜೆಕ್ಟ್‌ಗಳಲ್ಲಿ ಒಂದು. ರಾಜ್ಯದಲ್ಲಿ ಈವರೆಗೆ 10,896 ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬೇಕಾಗಿರುತ್ತದೆ. ಆದರೆ ಇದುವರೆಗೆ ಕಂದಾಯ ಗ್ರಾಮಗಳೆಂದು ಘೋಷಿಸಿರುವ ಗ್ರಾಮಗಳ ಸಂಖ್ಯೆ 3,354 ಮಾತ್ರ. ಇನ್ನು ಪ್ರಾಥಮಿಕ ಅಧಿಸೂಚನೆಗಾಗಿ 5,768 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿ ಇವೆ. ಅಂತಿಮ ಅಧಿಸೂಚನೆ ಮಾಡಲು 702 ಪ್ರಸ್ತಾವನೆಗಳು ಜಿಲ್ಲಾಧಿಕಾರಿಗಳ ಬಳಿ ಬಾಕಿ ಇವೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪ್ರಾಥಮಿಕ ಅಧಿಸೂಚನೆ ಪ್ರಸ್ತಾವನೆಗಳನ್ನು ಮುಂದಿನ 15 ದಿನಗಳ ಒಳಗಾಗಿ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಅಂತಿಮ ಅಧಿಸೂಚನೆ ಹೊರಡಿಸಲು ಸಾಧ್ಯವಿದ್ದರೆ ಅದನ್ನು ಮಾಡಿ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ಸೂಚಿಸಿದರು.

ನಾವು ಇದುವರೆಗೆ ಕೊಟ್ಟ 2,05,175 ಹಕ್ಕುಪತ್ರಗಳಲ್ಲಿ 1,55,575 ಮಾತ್ರ ನೋಂದಣಿಯಾಗಿವೆ. ಉಳಿದವುಗಳನ್ನು ನೋಂದಣಿ ಮಾಡಲು ಬಾಕಿ ಉಳಿಸಿಕೊಳ್ಳಲಾಗಿದೆ. ಈ ಪ್ರಕ್ರಿಯೆಯನ್ನು ಸಹ ಸೆಪ್ಟೆಂಬ‌ರ್ 30 ರೊಳಗೆ ಮುಕ್ತಾಯಗೊಳಿಸಬೇಕು ಎಂದು ತಿಳಿಸಿದರು.

ಭೂದಾಖಲೆಗಳ ಡಿಜಿಟಲೀಕರಣ ವಿಚಾರಕ್ಕೆ ಬಂದರೆ, ಇದುವರೆಗೆ 10 ಜಿಲ್ಲೆಗಳಲ್ಲಿ ಟಾಸ್ಕ್ ಮುಕ್ತಾಯಗೊಳಿಸಲಾಗಿದೆ. ಇನ್ನೂ 21 ಜಿಲ್ಲೆಗಳಿವೆ. ಈ 21 ಜಿಲ್ಲೆಗಳ ಒಟ್ಟು 71,78,55,342 ಪುಟಗಳ ಗುರಿಯಲ್ಲಿ ಈವರೆಗೆ 47,35,43,778 ಪುಟಗಳನ್ನು ಮಾಡಲಾಗಿದೆ. ಉಳಿದಂತೆ ಡಿಜಿಟಲೈಸ್ 24,43,11,564 ಪುಟಗಳನ್ನು ಡಿಜಿಟಲೈಸ್ ಮಾಡಬೇಕಾಗಿದೆ. ಆದರೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಈ ಮಹತ್ವದ ವಿಚಾರವನ್ನು ಸಂಪೂರ್ಣ ನಿರ್ಲಕ್ಷಿಸಿದಂತೆ ಕಾಣುತ್ತಿದೆ. ಹಾಗಾಗಬಾರದು ಎಂದು ಎಚ್ಚರಿಸಿದರು.

ನಿಮಗೆ ಒಂದು ದಿನಕ್ಕೆ 9,600 ಪುಟಗಳನ್ನು ಡಿಜಿಟಲೈಸ್ ಮಾಡಬೇಕೆಂದು ಗುರಿ ನಿಗದಿಪಡಿಸಲಾಗಿತ್ತು. ಆದರೆ ಕೆಲ ಜಿಲ್ಲೆಗಳು ನೀಡಿರುವ ಗುರಿಗಿಂತ ಕಡಿಮೆ ಸಾಧಿಸಿವೆ. ಈ ಬಗ್ಗೆ ಸಂಬಂಧಿಸಿದ ಜಿಲ್ಲಾಧಿಕಾರಿಗಳು ವಿವರಣೆ ನೀಡಬೇಕು. ಸೆಪ್ಟೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು ಎಂದರು.

ಮಿಸ್ಸಿಂಗ್ ರೆಕಾರ್ಡ್ ಕಡತಗಳನ್ನು ಶೀಘ್ರ ಇತ್ಯರ್ಥಪಡಿಸುವಂತೆ ಶಾಸಕರುಗಳು ಸಭೆಗಳಲ್ಲಿ ಒತ್ತಾಯಿಸಿದ್ದಾರೆ. ಆದ್ದರಿಂದ ಕೂಡಲೇ ಇತ್ಯರ್ಥ ಮಾಡಬಹುದಾದ ಪ್ರಕರಣಗಳನ್ನು ಇತ್ಯರ್ಥ ಮಾಡಬೇಕು. ತಿರಸ್ಕರಿಸುವ ಪ್ರಕರಣಗಳನ್ನು ತಿರಸ್ಕರಿಸಬೇಕು. ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಈ ಪ್ರಕರಣಗಳನ್ನು ಅಪೀಲುಗಳಿಗೆ ಕನ್ವರ್ಟ್ ಮಾಡಿ ಇತ್ಯರ್ಥ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಸೂಚಿಸಿದರು.

ಬಗರ್ ಹುಕುಂ ಯೋಜನೆಯಡಿ ಒಟ್ಟು 14,37,181 ಅರ್ಜಿಗಳು ಬಂದಿವೆ. 4,11,290 ಅರ್ಜಿಗಳನ್ನು ಗ್ರಾಮ ಆಡಳಿತ ಅಧಿಕಾರಿಗಳ (V.A) ಹಂತದಲ್ಲಿ ಪರಿಶೀಲಿಸಿ ಮಂಜೂರಾತಿಗೆ ಒಳಪಡಿಸಲಾಗಿದೆ ಹಾಗೂ 3,02,274 ಅರ್ಜಿಗಳನ್ನು ಜಿಲ್ಲಾಧಿಕಾರಿಗಳ ಹಂತದಲ್ಲಿ ತಿರಸ್ಕರಿಸಲಾಗಿದೆ. 6,98,933 ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ತಾಲೂಕು ಕಚೇರಿಯಲ್ಲಿಯೇ 24,684 ಅರ್ಜಿಗಳು ಕ್ರಮಕ್ಕಾಗಿ ಹಾಗೇ ಉಳಿದಿವೆ. ತಹಶೀಲ್ದಾರ್‌ಗಳು ಪ್ರತಿ ತಿಂಗಳ ಗುರಿ ನಿಗದಿಪಡಿಸಿಕೊಂಡು ಇವುಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ವಿಜಯನಗರ ಜಿಲ್ಲೆಯಲ್ಲಿ ಮಳೆಯೇ ಆಗಿಲ್ಲ. ಆದರೂ 47 ವಾರಗಳಿಗೆ ಸಾಕಾಗುವಷ್ಟು ಮೇವಿನ ಸಂಗ್ರಹವಿದೆ ಎಂದು ಹೇಳಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಈ ಕುರಿತು ಹೆಚ್ಚಿನ ಶ್ರದ್ಧೆಯಿಂದ ಕೆಲಸ ಮಾಡಬೇಕು. 30 ವಾರಗಳಿಗಿಂತ ಕಡಿಮೆ ಮೇವಿನ ಸಂಗ್ರಹ ಇರುವವರು ಅತಿ ಹೆಚ್ಚು ಮುತುವರ್ಜಿ ವಹಿಸಬೇಕು. ಕೂಡಲೇ ಯೋಜನೆ ರೂಪಿಸಿಕೊಳ್ಳಬೇಕು. ಯಾವುದೇ ಲೋಪ ದೋಷಗಳಿಗೆ ಆಸ್ಪದ ನೀಡಿದರೆ ಸರ್ಕಾರ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಈಗಾಗಲೆ ಕೆಎಂಎಫ್ ವತಿಯಿಂದ ಮೇವಿನ ಬೀಜದ ಕಿಟ್‌ಗಳನ್ನು ಕೊಡುತ್ತಿದ್ದೇವೆ. ರೈತರಿಗೆ ಮೇವಿನ ಬೀಜದ ಕಿಟ್ ನೀಡಲು ಈಗ 25 ಕೋಟಿ ರೂ. ನೀಡಲಾಗುವುದು. ಪಶುಸಂಗೋಪನಾ ಇಲಾಖೆಯವರು ಈ ಕೂಡಲೆ ಕಿಟ್‌ಗಳನ್ನು ವಿತರಿಸಲು ಪ್ರಾರಂಭಿಸಬೇಕು ಎಂದರು.

ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆ ಇರುವ ಕಡೆ ವಾಡಿಕೆಯಷ್ಟು ಮಳೆಯಾಗಿಲ್ಲ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಚಿತ್ರದುರ್ಗ, ಬಳ್ಳಾರಿ ಮುಂತಾದ ಕಡೆ ಬಿತ್ತನೆಯೇ ಸರಿಯಾಗಿ ಆಗಿಲ್ಲ. ಬಿತ್ತನೆ ಆಗದಿರುವುದರಿಂದ ಮೇವಿನ‌ಸಮಸ್ಯೆ ಉಂಟಾಗಲಿದೆ. 2023ರಲ್ಲಿ ಉತ್ತಮ ಬೆಳೆ ಬರದಿದ್ದರೂ ಸಹ ಮೇವಿಗೆ ಕೊರತೆಯಿರಲಿಲ್ಲ. ಅದನ್ನು ಹಸಿಬರ ಎಂದು ಕರೆಯಲಾಗಿತ್ತು. ಈಗ ಪರಿಸ್ಥಿತಿ ಭಿನ್ನವಾಗಿದೆ ಎಂಬುದನ್ನು ಅರಿತು ಮುಂಜಾಗ್ರಕತೆ ವಹಿಸಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಂದರ್ ಕುಮಾರ್ ಕಟಾರಿಯಾ, ಮನೋಜ್ ಕುಮಾರ್ ಮೀನಾ, ಮೀನಾ ನಾಗರಾಜ್, ವೆಂಕಟರಾಜ್, ಎಂ.ಎನ್.ಅನುಚೇತ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others