SSLC ಅರ್ಧವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯದ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ಸಂಕಲನಾತ್ಮಕ ಮೌಲ್ಯಮಾಪನ (SA-1) ಅರ್ಧವಾರ್ಷಿಕ ಪರೀಕ್ಷೆಯು ಸೆಪ್ಟೆಂಬರ್ 23 ರಿಂದ ಆರಂಭವಾಗಿ ಸೆಪ್ಟೆಂಬರ್ 30 ರವರೆಗೆ ಜರುಗಲಿದೆ. ಪರೀಕ್ಷೆಯ ಸಮಗ್ರ ವೇಳಾಪಟ್ಟಿ ಹಾಗೂ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಪ್ರಕಟಿಸಿದೆ.

ರಾಜ್ಯಮಟ್ಟದಲ್ಲಿ ಏಕರೂಪವಾಗಿ ನಡೆಯುವ ಈ ಪರೀಕ್ಷೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯೇ ನೇರವಾಗಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಲಿದೆ. ಪರೀಕ್ಷಾ ದಿನದಂದೇ ಆಯಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರ ಅಧಿಕೃತ ಶಾಲಾ ಲಾಗಿನ್‌ಗೆ ಈ ಪತ್ರಿಕೆಗಳು ರವಾನೆಯಾಗಲಿದ್ದು, ಪ್ರತಿ ಶಾಲೆಯ ವಾಟರ್‌ಮಾರ್ಕ್‌ನೊಂದಿಗೆ ಮುದ್ರಣಗೊಳ್ಳಲಿವೆ.

ವಿಷಯವಾರು ಪರೀಕ್ಷಾ ದಿನಾಂಕ ಮತ್ತು ಸಮಯ

  • ಸೆಪ್ಟೆಂಬರ್ 23 (ಬುಧವಾರ): ಪ್ರಥಮ ಭಾಷೆ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45)
  • ಸೆಪ್ಟೆಂಬರ್ 24 (ಗುರುವಾರ): ವಿಜ್ಞಾನ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45)
  • ಸೆಪ್ಟೆಂಬರ್ 25 (ಶುಕ್ರವಾರ): ತೃತೀಯ ಭಾಷೆ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30)
  • ಸೆಪ್ಟೆಂಬರ್ 26 (ಶನಿವಾರ): ಸಮಾಜ ವಿಜ್ಞಾನ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45)
  • ಸೆಪ್ಟೆಂಬರ್ 28 (ಸೋಮವಾರ): ಗಣಿತ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45)
  • ಸೆಪ್ಟೆಂಬರ್ 29 (ಮಂಗಳವಾರ): ದ್ವಿತೀಯ ಭಾಷೆ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30)
  • ಸೆಪ್ಟೆಂಬರ್ 30 (ಬುಧವಾರ): ದೈಹಿಕ ಶಿಕ್ಷಣ / ವೃತ್ತಿ ಶಿಕ್ಷಣ / ಮೌಲ್ಯ ಶಿಕ್ಷಣ (ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:45)

ಪರೀಕ್ಷಾ ದಿನದ ಕಾರ್ಯಚಟುವಟಿಕೆಗಳು

ವಿದ್ಯಾರ್ಥಿಗಳು ಪರೀಕ್ಷೆಯ ದಿನಗಳಂದು ಬೆಳಿಗ್ಗೆ 9:15ರ ವೇಳೆಗೆ ಕಡ್ಡಾಯವಾಗಿ ಶಾಲೆಗೆ ಹಾಜರಿರಬೇಕು.

  • ಬೆಳಿಗ್ಗೆ 9:30ಕ್ಕೆ ಮುಖ್ಯ ಶಿಕ್ಷಕರು ಶಾಲಾ ಲಾಗಿನ್ ತೆರೆದು ಪ್ರಶ್ನೆಪತ್ರಿಕೆ ಡೌನ್‌ಲೋಡ್ ಮಾಡಿಕೊಳ್ಳಬೇಕು.
  • ಬೆಳಿಗ್ಗೆ 9:45 ರಿಂದ 10:00 ಗಂಟೆಯ ಒಳಗೆ ಅಗತ್ಯವಿರುವಷ್ಟು ಪ್ರತಿಗಳನ್ನು ಮುದ್ರಿಸಿಕೊಳ್ಳಬೇಕು.
  • ಬೆಳಿಗ್ಗೆ 10:15ಕ್ಕೆ ಮುದ್ರಿತ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೊಠಡಿಗಳಿಗೆ ತಲುಪಿಸಬೇಕು.
  • ಬೆಳಿಗ್ಗೆ 10:30ಕ್ಕೆ ನಿಖರವಾಗಿ ಪರೀಕ್ಷೆ ಆರಂಭವಾಗಲಿದೆ.

ಮುಖ್ಯ ಶಿಕ್ಷಕರು ತಮ್ಮ ಸ್ವಂತ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಬಳಸಿ ಸ್ವತಃ ಪ್ರಶ್ನೆಪತ್ರಿಕೆ ಪಡೆಯಬೇಕಿದ್ದು, ಈ ವಿವರಗಳನ್ನು ಬೇರೆಯವರಿಗೆ ಹಂಚಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಪ್ರಶ್ನೆಪತ್ರಿಕೆ ಮುದ್ರಣ ಹಾಗೂ ವಿತರಣೆಯ ವೇಳೆ ಮೊಬೈಲ್ ಫೋನ್ ಬಳಕೆ ಸಂಪೂರ್ಣ ನಿರ್ಬಂಧಿಸಲಾಗಿದೆ.

ಡಯಟ್ ಉಪನ್ಯಾಸಕರಿಗೆ ತಪಾಸಣಾ ಜವಾಬ್ದಾರಿ

ಪರೀಕ್ಷಾ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಪ್ರೌಢ ಶಿಕ್ಷಣ ವಿಭಾಗದ ನಿರ್ದೇಶಕರನ್ನು ರಾಜ್ಯ ಮಟ್ಟದ ನೋಡಲ್ ಅಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಡಯಟ್ ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರು ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಅಕ್ರಮ ಎಸಗಿದರೆ ಜೈಲು ಶಿಕ್ಷೆ, ಮಾನ್ಯತೆ ರದ್ದು

ಪರೀಕ್ಷಾ ಕೇಂದ್ರಗಳಿಂದ ಪ್ರಶ್ನೆಪತ್ರಿಕೆ ಸೋರಿಕೆ ಮಾಡುವುದು, ಮೊಬೈಲ್‌ನಲ್ಲಿ ಫೋಟೋ ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ನಕಲು ಅಥವಾ ಚೀಟಿ ಸರಬರಾಜಿನಂತಹ ಅಕ್ರಮಗಳು ಕಂಡುಬಂದರೆ ಭಾರತೀಯ ನ್ಯಾಯ ಸಂಹಿತೆ (BNS), ಐಟಿ ಕಾಯ್ದೆ ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ. ತಪ್ಪಿತಸ್ಥ ಶಿಕ್ಷಕರು-ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ. ನಿಯಮ ಮೀರಿದ ಅನುದಾನಿತ ಶಾಲೆಗಳ ಅನುದಾನ ಹಿಂಪಡೆಯುವುದರ ಜತೆಗೆ, ಖಾಸಗಿ (ಅನುದಾನ ರಹಿತ) ಶಾಲೆಗಳ ಮಾನ್ಯತೆಯನ್ನು ಕಾಯಂ ಆಗಿ ರದ್ದುಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

Share it :

Leave a Reply

Your email address will not be published. Required fields are marked *

Get free tips and resources right in your inbox, along with 10,000+ others